ಚಿಕ್ಕಮಗಳೂರು: ಸಂಭ್ರಮದಿಂದ ಬಂಧುಗಳ ಮದುವೆ ಮುಗಿಸಿಕೊಂಡು ನೆಮ್ಮದಿಯಾಗಿ ಮನೆ ಕಡೆ ಹೆಜ್ಜೆ ಹಾಕುತ್ತಿದ್ದ ಮಹಿಳೆಯೊಬ್ಬರಿಗೆ ಮಾರ್ಗಮಧ್ಯದಲ್ಲೇ ಕಳ್ಳರು ಬಿಗ್ ಶಾಕ್ ನೀಡಿದ್ದಾರೆ.
ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆ ಕೈಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರವನ್ನು ದೋಚಿ ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಗೌಡನಹಳ್ಳಿ ನಿವಾಸಿ ಗಂಗಮ್ಮ ಎಂಬುವವರು ಹಿರೇಮಗಳೂರಿನಲ್ಲಿ ನಡೆದ ಸಂಬಂಧಿಕರ ಮದುವೆ ಮುಗಿಸಿ, ಗ್ರಾಮದ ಇತರ ಇಬ್ಬರು ಮಹಿಳೆಯರೊಂದಿಗೆ ರೈಲ್ವೆ ಮೇಲೇತುವೆಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಹಿಂದಿನಿಂದ ಹೆಲ್ಮಟ್ ಧರಿಸಿ ಬೈಕ್ನಲ್ಲಿ ಬಂದ ಇಬ್ಬರು ಖದೀಮರು, ಏಕಾಏಕಿ ಗಂಗಮ್ಮ ಅವರ ಕುತ್ತಿಗೆಯಲ್ಲಿದ್ದ ಸರಕ್ಕೆ ಕೈಹಾಕಿ ಎಳೆದಿದ್ದಾರೆ ಎನ್ನಲಾಗಿದೆ. ಮಹಿಳೆ ತಕ್ಷಣ ಎಚ್ಚೆತ್ತುಕೊಂಡು ತನ್ನ ಮಾಂಗಲ್ಯ ಸರವನ್ನು ಗಟ್ಟಿಯಾಗಿ ಹಿಡಿದು ಪ್ರತಿರೋಧ ತೋರಿದ್ದರಿಂದ ಪೂರ್ಣ ಸರ ಸಿಗದೆ, 33 ಗ್ರಾಂ ಸರದ ಪೈಕಿ ಸುಮಾರು 11 ಗ್ರಾಂ ನಷ್ಟು ತುಂಡು ಹಾಗೂ ಕರಿಮಣಿ ಸರದಲ್ಲಿದ್ದ 6 ಚಿನ್ನದ ಗುಂಡುಗಳು ಮಾತ್ರ ಕಳ್ಳರ ಕೈಗೆ ಸಿಕ್ಕಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಹಿಳೆ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಕಳ್ಳರು ಕ್ಷಣಾರ್ಧದಲ್ಲಿ ಬೈಕ್ ವೇಗ ಹೆಚ್ಚಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರು ನೀಡಲಾಗಿದೆ. ಕಳವಾದ ಚಿನ್ನಾಭರಣದ ಮೌಲ್ಯ ಸುಮಾರು 1,04,000 ರೂಪಾಯಿ ಎಂದು ಅಂದಾಜಿಸಲಾಗಿದ್ದು, ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಡಹಗಲೇ ನಡೆದ ಈ ಕೃತ್ಯದಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿದ್ದು, ಖದೀಮರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Gold chain snatched by miscreants on a bike
Leave a comment