ಚಿಕ್ಕಮಗಳೂರು: ಹೊರಗುತ್ತಿಗೆ ಪೌರನೀರು ಸರಬರಾಜು ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ವಿಶೇಷ ನೇರ ನೇಮಕಾತಿ ಅಥವಾ ನೇರಪಾವತಿ ವ್ಯವಸ್ಥೆಗೆ ಒಳಪಡಿಸಿ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಸೆ.21ರಿಂದ ತುಮಕೂರಿನ ಸಿದ್ದಗಂಗಾ ಮಠದಿಂದ ಬೆಂಗಳೂರಿನ ಮುಖ್ಯಮಂತ್ರಿ ನಿವಾಸದವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಪೌರನೀರು ಸರಬರಾಜು ನೌಕರರ ಮಹಾಸಂಘದ ಜಿಲ್ಲಾಧ್ಯಕ್ಷ ರಾಮು ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮಹಾನಗರ ಪಾಲಿಕೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರನೀರು ಸರಬರಾಜು ನೌಕರರು ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಪ್ರತಿನಿತ್ಯ ಕುಡಿಯುವ ನೀರು ಪೂರೈಸುವ ಅಗತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ, ಅವರಿಗೆ ಇದುವರೆಗೆ ಸೂಕ್ತ ಸೇವಾ ಭದ್ರತೆ ದೊರೆತಿಲ್ಲ ಎಂದು ಹೇಳಿದರು.
ಪೌರಕಾರ್ಮಿಕರು, ಲೋಡರ್‌ಗಳು, ಕ್ಲೀನರ್‌ಗಳು ಹಾಗೂ ಯುಜಿಡಿ ಸಹಾಯಕರಿಗೆ ವಿಶೇಷ ನಿಯಮಾವಳಿಗಳ ಮೂಲಕ ನೇರ ನೇಮಕಾತಿ ಅಥವಾ ನೇರಪಾವತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅದೇ ಮಾದರಿಯಲ್ಲಿ ನೀರು ಸರಬರಾಜು ನೌಕರರಿಗೂ ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಸಿ ಆ್ಯಂಡ್ ಆರ್‌ನಲ್ಲಿ ಮಂಜೂರಾಗಿರುವ ಹಲವು ಹುದ್ದೆಗಳು ವರ್ಷಗಳಿಂದ ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪೌರನೀರು ಸರಬರಾಜು ನೌಕರರ ಮಹಾಸಂಘದ ಹೋರಾಟದ ಫಲವಾಗಿ ಹೊರಗುತ್ತಿಗೆ ಪೌರನೀರು ಸರಬರಾಜು ನೌಕರರಿಗೆ ಸಂಬಂಧಿಸಿದ ಪ್ರತ್ಯೇಕ ಕಡತ ಸಂಖ್ಯೆ 1520933 ಪೌರಾಡಳಿತ ಇಲಾಖೆಯಲ್ಲಿ ಪ್ರಸ್ತಾವನೆಯಲ್ಲಿದೆ. ಈ ಕಡತವನ್ನು ಆರ್ಥಿಕ ಇಲಾಖೆಯ ಮೂಲಕ ಅನುಮೋದನೆ ಪಡೆದು, ನೌಕರರಿಗೆ ಪೌರಕಾರ್ಮಿಕರ ಮಾದರಿಯಲ್ಲಿ ವಿಶೇಷ ನೇರ ನೇಮಕಾತಿ ಅಥವಾ ನೇರಪಾವತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ನೌಕರರು ಹಾಗೂ ಅವರ ಕುಟುಂಬಗಳ ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲು ಸೆ.21ರಿಂದ ಸಿದ್ದಗಂಗಾ ಮಠದಿಂದ ಬೆಂಗಳೂರಿನ ಮುಖ್ಯಮಂತ್ರಿ ನಿವಾಸದವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಪಾದಯಾತ್ರೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹೊರಗುತ್ತಿಗೆ ನೀರು ಸರಬರಾಜು ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಇದಕ್ಕೆ ಅಗತ್ಯ ಅನುಮತಿ, ಸಹಕಾರ ಮತ್ತು ಬೆಂಬಲ ನೀಡುವಂತೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೃಷ್ಣಗೌಡ, ಶಾಖಾಧ್ಯಕ್ಷ ಮಂಜುನಾಥ್, ಮಂಹತೇಶ್, ಲೋಕೇಶ್, ಅರುಣಾ ಸೇರಿದಂತೆ ಪದಾಧಿಕಾರಿಗಳು ಹಾಗೂ ಹೊರಗುತ್ತಿಗೆ ನೀರು ಸರಬರಾಜು ನೌಕರರು ಉಪಸ್ಥಿತರಿದ್ದರು.
Massive padayatra to the Chief Minister’s residence starting September 21
Leave a comment