ಚಿಕ್ಕಮಗಳೂರು: ಪೆಟ್ರೋಲ್ ಬಂಕ್‌ನಲ್ಲಿ ಗ್ರಾಹಕರಿಗೆ ಅಳತೆಯಲ್ಲಿ ಮೋಸ ಮಾಡುತ್ತಿರುವ ಆರೋಪ ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ (KSRTC) ಬಸ್ ನಿಲ್ದಾಣದ ಬಳಿ ಇರುವ ಪೆಟ್ರೋಲ್ ಬಂಕ್ ವಿರುದ್ಧ ಕೇಳಿಬಂದಿದೆ. ಹೀಗಾಗಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೀಟರ್ ರೀಡಿಂಗ್‌ನಲ್ಲಿ ಸರಿಯಾದ ಪ್ರಮಾಣ ತೋರಿಸುತ್ತಿದ್ದರೂ, ವಾಹನಗಳಿಗೆ ಮಾತ್ರ ನಿಯಮಿತ ಪ್ರಮಾಣಕ್ಕಿಂತ ಕಡಿಮೆ ಇಂಧನ ತುಂಬಿ ವಂಚಿಸಲಾಗುತ್ತಿದೆ ಎಂದು ಸ್ಥಳೀಯ ಗ್ರಾಹಕರೊಬ್ಬರು ಬಹಿರಂಗವಾಗಿ ಕಿಡಿಕಾರಿದ್ದಾರೆ.
ದಿನನಿತ್ಯ ತಮ್ಮ ಕೆಲಸಗಾರರಿಗೆ 3 ರಿಂದ 4 ಸಾವಿರ ರೂಪಾಯಿ ನೀಡಿ ಪೆಟ್ರೋಲ್ ತರಲು ಕಳುಹಿಸುತ್ತಿದ್ದಾಗ, ಯಂತ್ರಗಳು ಕೆಲಸದ ಅರ್ಧ ದಿನಕ್ಕೇ ಇಂಧನ ಖಾಲಿಯಾಯಿತೆಂದು ಹೇಳುತ್ತಿದ್ದರು. ಕೆಲಸಗಾರರೇ ಸುಳ್ಳು ಹೇಳುತ್ತಿದ್ದಾರೆಂದು ಭಾವಿಸಿ ಅವರನ್ನು ಕೆಲಸದಿಂದ ತೆಗೆದುಹಾಕಿದ್ದ ಮಾಲೀಕರು, ಕೊನೆಗೆ ಬಂಕ್ ಮೇಲೆ ಅನುಮಾನಗೊಂಡು ತಾವೇ ಖುದ್ದಾಗಿ 50 ರೂಪಾಯಿಗೆ ಪೆಟ್ರೋಲ್ ಹಾಕಿಸಲು ಹೋದಾಗ ಬಂಕ್ ಸಿಬ್ಬಂದಿಯ ಈ ಅಸಲಿ ಕನ್ನ ಬಯಲಾಗಿದೆ. ಮೀಟರ್ ಸರಿ ತೋರಿಸಿದರೂ ಪ್ರತ್ಯಕ್ಷವಾಗಿ ಹಾಕಿದ ಇಂಧನದ ಪ್ರಮಾಣ ತೀರಾ ಕಡಿಮೆಯಿರುವುದು ಬೆಳಕಿಗೆ ಬಂದಿದೆ.
ಈ ಹಗಲು ದರೋಡೆಯಿಂದ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದ್ದು, ಸಂಬಂಧಪಟ್ಟ ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಗ್ರಾಹಕರು ಬಂಕ್ ಮಾಲೀಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತಪಡಿಸಿದ್ದಾರೆ.
Petrol station accused of cheating in metering
Leave a comment