ಮೂಡಿಗೆರೆ: ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜಾದ್ ನಗರ ಬಳಿಯಿರುವ ಮೀಸಲು ಅರಣ್ಯ, ಡೀಮ್ಡ್ ಅರಣ್ಯದ ಖಾಲಿ ಜಾಗದಲ್ಲಿ ಮಂಗಳವಾರ ನಿವೇಶನ ರಹಿತರು ಟೆಂಟ್ ನಿರ್ಮಿಸಿ ನಿವೇಶನ ನೀಡುವಂತೆ ಪ್ರತಿಭಟಿಸಿದರು.
ಬೆಳಿಗ್ಗೆಯಿಂದಲೇ ಕಾರ್ಯಾಚರಣೆಗೆ ಇಳಿದ ಸುಮಾರು 50ಕ್ಕೂ ಅಧಿಕ ನಿವೇಶನ ರಹಿತರು, ತಮ್ಮ ತಮ್ಮ ಟೆಂಟ್‌ಗಳನ್ನು ನಿರ್ಮಿಸಿಕೊಂಡು ಕುಟುಂಬದವರೊಡನೆ ಅಧಿಕಾರಿಗಳು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟದಲ್ಲಿ ಭಾಗವಹಿಸಿದ್ದ ನಿವೇಶನ ರಹಿತ ಶರಣ್ಯ ಮಾತನಾಡಿ, ‘ತರುವೆ ಗ್ರಾಮ ಪಂಚಾಯಿತಿಯಲ್ಲಿ ನಿವೇಶನ ರಹಿತರಿಗೆ 24 ವರ್ಷಗಳಿಂದ ನಿವೇಶನ ನೀಡದೇ ಸತಾಯಿಸಲಾಗುತ್ತಿದ್ದು, ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪಂಚಾಯಿತಿಗೆ ಅರ್ಜಿ ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸ.ನಂ. 106ರಲ್ಲಿ ನಿವೇಶನಕ್ಕಾಗಿ ಸ್ಥಳ ಕಾಯ್ದಿರಿಸಿದ್ದು, ಕಂದಾಯ ಜಾಗದಲ್ಲಿ ಅರಣ್ಯ ಇಲಾಖೆಯು ಬಹಳ ವರ್ಷಗಳ ಹಿಂದೆ ಗಿಡಗಳನ್ನು ನೆಟ್ಟು ಬೆಳೆಸಿದೆ.
ಅದರಲ್ಲಿ ನಿವೇಶನ ರಹಿತರಿಗೆ 4.5 ಎಕರೆ ಕಂದಾಯ ಭೂಮಿ ಮಂಜೂರಾಗಿದ್ದರೂ, ಅರಣ್ಯ ಇಲಾಖೆ ಮರಗಳನ್ನು ತೆರವು ಮಾಡದೇ 14 ವರ್ಷಗಳಿಂದ ಮೀನಮೇಷ ಎಣಿಸುತ್ತಿದೆ. ಗ್ರಾಮ ಪಂಚಾಯಿತಿಗೆ ಸ್ಥಳ ಪರಭಾರೆ ಮಾಡದೇ ಜನರಲ್ಲಿ ಜಾಗದ ಗೊಂದಲ ಉಂಟಾಗಿದೆ. ಇಷ್ಟು ವರ್ಷ ಕಾದರೂ ನಿವೇಶನ ನೀಡದೇ ಇರುವುದರಿಂದ ಸ.ನಂ. 104ರಲ್ಲಿ ಇರುವ ಖಾಲಿ ಜಾಗದಲ್ಲಿ ಗ್ರಾಮಸ್ಥರು ಟೆಂಟ್ ಹಾಕಿದ್ದೇವೆ. ನಿವೇಶನ ನೀಡುವವರೆಗೂ ಟೆಂಟ್ ತೆರವುಗೊಳಿಸುವುದಿಲ್ಲ’ ಎಂದರು.
ನಿವೇಶನ ರಹಿತರಾದ ಪೂರ್ಣಿಮಾ ಮಾತನಾಡಿ, ‘ನಾವು ಖಾಲಿ ಇರುವ ಜಾಗಕ್ಕೆ ಟೆಂಟ್ ಹಾಕಿದ್ದು, ಈಗಾಗಲೇ ಮೂರು ಬಾರಿ ನಿವೇಶನಕ್ಕಾಗಿ ಪ್ರತಿಭಟನೆ ನಡೆಸಿದ್ದೇವೆ. ಸ್ಥಳೀಯ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು, ಜಿಲ್ಲಾಧಿಕಾರಿ ಈ ಬಗ್ಗೆ ಸ್ಪಂದಿಸಿಲ್ಲ. ಆದ್ದರಿಂದ ಸ.ನಂ. 104 ರಲ್ಲಿ ಜಾಗ ಖಾಲಿ ಇದ್ದುದರಿಂದ ಇಲ್ಲಿ ನಿವೇಶನ ಕೊಡುವಂತೆ ಒತ್ತಾಯಿಸುತ್ತಿದ್ದೇವೆ. ಅಧಿಕಾರಿಗಳು ಕೇವಲ ಆಶ್ವಾಸನೆ ನೀಡಿ ಹೋಗುತ್ತಾರೆ, ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಸಮಸ್ಯೆ ಇತ್ಯರ್ಥವಾಗುವವರೆಗೂ ನಾವು ಇಲ್ಲಿಂದ ಟೆಂಟ್ ತೆಗೆಯುವುದಿಲ್ಲ’ ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಬಂದ ತಹಶೀಲ್ದಾರ್ ಅಶ್ವಿನಿ, ನಿವೇಶನ ರಹಿತರ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಎಸಿಎಫ್ ಆಕರ್ಷ್ ಸ್ಥಳಕ್ಕೆ ಬಂದು ಪ್ರತಿಭಟನಾಕಾರರೊಂದಿಗೆ ಮಾತನಾಡಿ, ನಿಮಗೆ ಮಂಜೂರಾದ ಜಾಗದ ಕಡತ ಬೆಂಗಳೂರಿಗೆ ಹೋಗಿದೆ. ಆದರ ಬಗ್ಗೆ ನಾವು ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ, ನಿಮಗೆ ಜಾಗದ ಇತ್ಯರ್ಥ ಮಾಡಿ ಸ್ಥಳ ನೀಡಲು ಪ್ರಯತ್ನ ನಡೆಸುತ್ತೇವೆ.
ಅರಣ್ಯ ಜಾಗದಲ್ಲಿ ಹಾಕಿದ ಟೆಂಟ್ ತೆಗೆಯಿರಿ. ಯಾವುದೇ ಕೆಲಸವನ್ನು ಕಾನೂನು ರೀತಿಯಲ್ಲಿ ಮಾಡಬೇಕು. ಈ ಕಾನೂನು ಬಾಹಿರ ಕೆಲಸ ಮಾಡಬೇಡಿ, ಸಂಬಂಧಿತ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ನಿಮಗೆ ನ್ಯಾಯ ಒದಗಿಸುತ್ತೇವೆ’ ಎಂದರು. ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದಯಾವತಿ, ಡಿಆರ್‌ಎಫ್ಒ ಜಿ. ಮಂಜುನಾಥ್, ವಲಯ ಅರಣ್ಯಾಧಿಕಾರಿ ರಂಜಿತ್, ಸುಹಾಸ್, ಬಸವರಾಜ್, ಪರಮೇಶ್, ಕಂದಾಯ ರಾಜಸ್ವ ನಿರೀಕ್ಷಕ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ಪಂಪನಾ, ತರುವೆ ಪಿಡಿಒ ಸಿಂಚನಾ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಡಿ.ವಿ. ರೇಣುಕಾ, ನಿವೇಶನ ರಹಿತರಾದ ಕಿರಣ್, ಶರಣ್ಯ, ಅಬ್ದುಲ್ ರೆಹಮಾನ್, ಮಹೇಶ್ ಭಾಗವಹಿಸಿದ್ದರು.
Protest demanding a site for building a tent
Leave a comment