ಅಜ್ಜಂಪುರ : ಬೈಕ್ ವೇಗವಾಗಿ ಚಲಾಯಿಸಿದ್ದಾನೆ ಎಂಬ ಕಾರಣಕ್ಕೆ ಯುವಕನ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಆರೋಪ ಅಜ್ಜಂಪುರ ಪಟ್ಟಣದಲ್ಲಿ ಕೇಳಿಬಂದಿದೆ.
ಘಟನೆಯ ಬಳಿಕ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಅಜ್ಜಂಪುರ ನಿವಾಸಿ ಮಹಮದ್ ಜೈದ್ ಎಂಬ ಯುವಕ ಹಲ್ಲೆಗೆ ಒಳಗಾಗಿದ್ದು, ಕೈ ಮುರಿತ ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಸೋಮವಾರ ಸಂಜೆ ತಮ್ಮನನ್ನು ಶಾಲೆಯಿಂದ ಕರೆತರಲು ಸ್ಕೂಟಿಯಲ್ಲಿ ತೆರಳಿದ್ದ ಜೈದ್, ಶಾಲೆ ಬಿಡುವ ಸಮಯವಾಗದ ಕಾರಣ ಕೆಲ ಬಾರಿ ಶಾಲೆಯ ಸುತ್ತಮುತ್ತ ಓಡಾಡಿದ್ದಾನೆ ಎನ್ನಲಾಗಿದೆ.
ಈ ವೇಳೆ “ಬೈಕ್ ಅನ್ನು ವೇಗವಾಗಿ ಓಡಿಸುತ್ತೀಯಾ” ಎಂಬ ವಿಚಾರವಾಗಿ ಮಾತಿನ ಚಕಮಕಿ ಆರಂಭವಾಗಿ, ಬಳಿಕ ಬಿಜೆಪಿ ಮುಖಂಡ ಸಂತೋಷ್ ಮಾಳೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಜೈದ್ ರಕ್ತದ ಮಡುವಿನಲ್ಲಿ ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆಯ ಸುದ್ದಿ ಹರಡುತ್ತಿದ್ದಂತೆ ನೂರಾರು ಮುಸ್ಲಿಂ ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ಅಜ್ಜಂಪುರ ಪೊಲೀಸ್ ಠಾಣೆ ಬಳಿ ಜಮಾಯಿಸಿ ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ತಡರಾತ್ರಿವರೆಗೂ ಠಾಣೆ ಆವರಣದಲ್ಲಿ ಜನರು ನೆರೆದಿದ್ದರು.
ಆರೋಪಿತ ಸಂತೋಷ್ ಮಾಳೆ ವಿರುದ್ಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದಾರೆ. ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
BJP leader attacks youth with rod
Leave a comment