ತರೀಕೆರೆ: ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾವಿಕೆರೆಯಲ್ಲಿ ನಂಬಿಕೆಗೆ ದ್ರೋಹ ಬಗೆದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಸ್ವಂತ ತಮ್ಮನ ಮಗನೇ ಚಿಕ್ಕಪ್ಪನ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾನೆ.
ಬಾವಿಕೆರೆ ನಿವಾಸಿ ಅಯೋಬ್ ಖಾನ್ ಎಂಬುವವರ ಮನೆಯಲ್ಲೇ ಈ ಕಳ್ಳತನ ನಡೆದಿದೆ. ಅವರು ತಮ್ಮ ಮನೆಯ ಮೇಲ್ಬಾಗದ ಕೋಣೆಯಲ್ಲಿದ್ದ ತಮ್ಮನ ಮಗ ಸಾಹುಲ್ ಹಮೀದ್ (19), ಮುಂಭಾಗದ ಗೇಟ್ ಚಿಲಕವನ್ನು ಸದ್ದಿಲ್ಲದೆ ತೆರೆದು ಒಳ ನುಗ್ಗಿದ್ದಾನೆ.
ನೇರವಾಗಿ ಕೋಣೆಯೊಳಗೆ ನುಗ್ಗಿದ ಆತ, ಗಾಡೇಜ್ ಬೀರುವಿನ ಬಾಗಿಲು ಹಾಗೂ ಲಾಕರ್ ಅನ್ನು ಬಲವಂತವಾಗಿ ಒಡೆದು, ಅದರಲ್ಲಿದ್ದ ಸುಮಾರು 1,45,000 ರೂ. ಅಂದಾಜು ಮೌಲ್ಯದ 20 ಗ್ರಾಂ ತೂಕದ ಒಂದು ಜೊತೆ ಹಳೆಯ ಬಂಗಾರದ ಬಳೆಗಳನ್ನು ಚೀಲದಲ್ಲಿ ತುಂಬಿಕೊಂಡು ಓಡಲಾರಂಭಿಸಿದ್ದಾನೆ.
ಈ ವೇಳೆ ಗೇಟ್ ಶಬ್ದ ಕೇಳಿ ಅಯೋಬ್ ಖಾನ್ ಕೆಳಗಿಳಿದು ಬಂದು ನೋಡಿದಾಗ ಸಾಹುಲ್ ಹಮೀದ್ ಒಡವೆ ಚೀಲದೊಂದಿಗೆ ಸಿಕ್ಕಿಬಿದ್ದಿದ್ದಾನೆ. ಅಯೋಬ್ ಖಾನ್ ಆತನನ್ನು ನಿಲ್ಲುವಂತೆ ಕೂಗಿಕೊಂಡರೂ ಆತ ಯಾವುದಕ್ಕೂ ಕಿವಿಕೊಡದೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಕೃತ್ಯ ಎಸಗಿದವನು ಸ್ವಂತ ತಮ್ಮನ ಮಗನೇ ಆಗಿದ್ದರಿಂದ, ಆಭರಣಗಳನ್ನು ತಂದು ಒಪ್ಪಿಸಬಹುದು ಎಂದು ಅಯೋಬ್ ಖಾನ್ ಅವರು ಕುಟುಂಬದ ಗೌರವಕ್ಕೆ ಹೆದರಿ ಹಲವು ದಿನಗಳ ಕಾಲ ದೂರು ನೀಡದೆ ಕಾಯ್ದಿದ್ದಾರೆ. ಆದರೆ, ಸಾಹುಲ್ ಹಮೀದ್ ಮಾತ್ರ ಬಳೆಗಳನ್ನು ವಾಪಸ್ ನೀಡದೆ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾನೆ.
ಕೊನೆಗೆ ಅಯೋಬ್ ಖಾನ್ ಅವರು ಲಕ್ಕವಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
House broken into jewellery worth lakhs stolen
Leave a comment