ಚಿಕ್ಕಮಗಳೂರು: ದೇಶದ ಅಭಿವೃದ್ಧಿಯ ಸಂಕೇತವೇ ರೈಲ್ವೆಯಾಗಿದ್ದು, ರೈಲ್ವೆ ಇಲಾಖೆಯನ್ನು ಎಷ್ಟು ಮಟ್ಟಿಗೆ ಅಭಿವೃದ್ಧಿಪಡಿಸುತ್ತೇವೆಯೋ ಅಷ್ಟು ದೇಶಕ್ಕೆ ಒಳ್ಳೆಯದಾಗುತ್ತದೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶವಾಗಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಅಜ್ಜಂಪುರದ ರೈಲ್ವೆ ಲೆವೆಲ್ ಕ್ರಾಸಿಂಗ್ ಸಂಖ್ಯೆ ೧೩೮ ರಲ್ಲಿ ನಿರ್ಮಾಣಗೊಳ್ಳಲಿರುವ ೫೦.೪೮ ಕೋಟಿ ರೂ.ವೆಚ್ಚದ ರಸ್ತೆ ಮೇಲ್ಸೇತುವೆ (ಆರ್.ಒ.ಬಿ) ಕಾಮಗಾರಿಗೆ ಭಾನುವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿ ಅಜ್ಜಂಪುರ ಮತ್ತು ಸುತ್ತಮುತ್ತಲ ಗ್ರಾಮಗಳ ನಾಗರಿಕರು ಹಾಗೂ ಜನಪ್ರತಿನಿಧಿಗಳು ರೈಲ್ವೆ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ತರೀಕೆರೆ ರೈಲ್ವೆ ನಿಲ್ದಾಣವು ಹಲವು ವರ್ಷಗಳಿಂದ ಯಾವುದೇ ಬದಲಾವಣೆಯಿಲ್ಲದೆ ಹಾಗೆಯೇ ಉಳಿದಿದೆ. ಇದನ್ನು ಗತಿ ಶಕ್ತಿ ಅಥವಾ ಬೇರೆ ಯೋಜನೆಯಡಿ ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ಅಭಿವೃದ್ಧಿಪಡಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ೧೫ ರಿಂದ ೨೦ ತಿಂಗಳ ಅವಧಿಯಲ್ಲಿ ಈ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಬೆಂಗಳೂರಿನಿಂದ ೧೦೦ ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಲೆವೆಲ್ ಕ್ರಾಸಿಂಗ್ (ಎಲ್‌ಸಿ) ಗೇಟ್‌ಗಳು ಇರಬಾರದು ಎಂಬುದು ಪ್ರಧಾನಿಯವರ ಸೂಚನೆಯಾಗಿದೆ. ಕರ್ನಾಟಕದಲ್ಲಿ ಈಗಾಗಲೇ ೭೦೭ ಎಲ್‌ಸಿ ಗೇಟ್‌ಗಳನ್ನು ತೆರವುಗೊಳಿಸಿ ಮೇಲ್ಸೇತುವೆ, ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ. ಇನ್ನುಳಿದ ೪೦೦ಕ್ಕೂ ಹೆಚ್ಚು ಗೇಟ್‌ಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಮುಕ್ತಾಯಗೊಳಿಸಲಾಗುವುದು. ಇದರೊಂದಿಗೆ ಕರ್ನಾಟಕದಲ್ಲಿ ರೈಲ್ವೆ ಕ್ರಾಂತಿಯಾಗಲಿದ್ದು, ಸಾರ್ವಜನಿಕರ ಪ್ರಯಾಣದ ಸಮಯ ಉಳಿತಾಯವಾಗಲಿದೆ ಎಂದರು.
ಚಿಕ್ಕಮಗಳೂರು-ಬೀರೂರು ಮಾರ್ಗದ ಲೆವೆಲ್ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ೭೦ ಕೋಟಿ ರೂ. ವೆಚ್ಚದ ಯೋಜನೆಗೆ ಈಗಾಗಲೇ ಅನುಮೋದನೆ ನೀಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಹಾಗೆಯೇ ೨೨ ಕೋಟಿ ರೂ. ವೆಚ್ಚದಲ್ಲಿ ಚಿಕ್ಕಮಗಳೂರು ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಅವರು ಮಾಹಿತಿ ನೀಡಿದರು.
ಚಿಕ್ಕಮಗಳೂರಿನಿಂದ ತಿರುಪತಿಗೆ ಇತ್ತೀಚೆಗೆ ಆರಂಭಿಸಲಾದ ಹೊಸ ರೈಲಿಗೆ ಭಕ್ತರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ. ದಿನನಿತ್ಯ ಈ ರೈಲು ಸಂಚರಿಸಿದರೂ ಭಕ್ತರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಈ ರೈಲಿನ ಸೇವೆಯನ್ನು ಇನ್ನಷ್ಟು ವಿಸ್ತರಿಸಬೇಕು ಎಂಬ ಒತ್ತಾಯ ಕೇಳಿಬಂದಿದ್ದು, ಈ ಕುರಿತು ಕೇಂದ್ರ ಸರ್ಕಾರದಿಂದ ಶೀಘ್ರದಲ್ಲೇ ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ತರೀಕೆರೆ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಅತ್ಯಂತ ಅವಶ್ಯಕವಾಗಿತ್ತು. ಸುಮಾರು ೫೦-೬೦ ವರ್ಷಗಳಿಂದ ಈ ನಿಲ್ದಾಣ ಇದ್ದರೂ ಕೇಳುವವರಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ತರೀಕೆರೆ ನಿಲ್ದಾಣದಲ್ಲಿ ಸುಸಜ್ಜಿತ ಕಾಯುವ ಕೊಠಡಿ (ವೇಟಿಂಗ್ ಹಾಲ್) ನಿರ್ಮಾಣಕ್ಕಾಗಿ ೧.೦೧ ಕೋಟಿ ರೂ. ಮಂಜೂರಾಗಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.
ರೈಲ್ವೆ ನಿಲ್ದಾಣಗಳಲ್ಲಿ ದಿವ್ಯಾಂಗರ ಸುಲಭ ಓಡಾಟಕ್ಕೆ ಪ್ಲಾಟ್‌ಫಾರ್ಮ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ೧.೨೫ ಕೋಟಿ ರೂ. ಅನುದಾನ ನೀಡಲಾಗಿದೆ. ದಿವ್ಯಾಂಗರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ತಂದಿದ್ದು, ಇಲ್ಲೂ ಅದನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ಕಡೂರು-ಚಿಕ್ಕಮಗಳೂರು-ಬೇಲೂರು ಮಾರ್ಗದ ೬೮ ಕಿ.ಮೀ. ರೈಲು ಯೋಜನೆಗೆ ೨೦೧೨-೧೩ರಲ್ಲೇ ಅನುಮೋದನೆ ಸಿಕ್ಕಿದ್ದರೂ, ಕಾಮಗಾರಿ ವೇಗ ಪಡೆದುಕೊಂಡಿದ್ದು ಮೋದಿ ಅವರು ಪ್ರಧಾನಿಯಾದ ಬಳಿಕವೇ. ಈಗಾಗಲೇ ೫೩೫ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಮುಂದಿನ ೨-೩ ತಿಂಗಳಲ್ಲಿ ಕಡೂರು-ಚಿಕ್ಕಮಗಳೂರು ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಈ ಎಲ್ಲ ಕಾಮಗಾರಿಗಳನ್ನು ೨೦೨೬ರ ಸೆಪ್ಟೆಂಬರ್ ಒಳಗಾಗಿ ಮುಗಿಸಲು ಗಡುವು ನೀಡಲಾಗಿದೆ ಎಂದರು.
ರೈಲ್ವೆ ಹಳಿಯಿಂದಾಗಿ ಎರಡು ಭಾಗವಾಗಿ ಕತ್ತರಿಸಲ್ಪಟ್ಟಿದ್ದ ಬೀರೂರು ಪಟ್ಟಣದ ಜನರ ಬಹುಕಾಲದ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದೆ. ಬೀರೂರಿನ ಪಾದಚಾರಿ ಮೇಲ್ಸೇತುವೆ ಕಾಮಗಾರಿಗೆ ೫.೫೦ ಕೋಟಿ ರೂ. ಮಂಜೂರು ಮಾಡಲಾಗಿದ್ದು, ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಈ ಮೂಲಕ ಎರಡೂ ಊರುಗಳನ್ನು ಜೋಡಿಸುವ ಕೆಲಸವಾಗಲಿದೆ. ಜೊತೆಗೆ ಬೀರೂರು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಅಭಿವೃದ್ಧಿ ಮತ್ತು ಲೈಟಿಂಗ್ ವ್ಯವಸ್ಥೆಗಾಗಿ ೮-೧೦ ಕೋಟಿ ರೂ. ಅನುದಾನದಡಿ ಕಾಮಗಾರಿ ಪ್ರಗತಿಯಲ್ಲಿದೆ. ಕಡೂರು-ಬೀರೂರು ಭಾಗಕ್ಕೆ ಕುಡಿಯುವ ನೀರಿನ ಸೌಲಭ್ಯಕ್ಕೂ ಹಣ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಅಲ್ಲದೆ, ದೇವನೂರು ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ೩.೨೦ ಕೋಟಿ ರೂ. ಹಾಗೂ ಚಿಕ್ಕಮಗಳೂರು ನಿಲ್ದಾಣದಲ್ಲಿ ಇನ್ನೂ ಎರಡು ಪ್ಲಾಟ್‌ಫಾರ್ಮ್‌ಗಳನ್ನು ವಿಸ್ತರಿಸಲು ೧.೮೨ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದರು. ಕೇಂದ್ರ ಸರ್ಕಾರವು ೨೦೨೬-೨೭ರ ಸಾಲಿಗೆ ಕರ್ನಾಟಕಕ್ಕೆ ರೈಲ್ವೆ ಅಭಿವೃದ್ಧಿಗಾಗಿ ೭,೭೪೮ ಕೋಟಿ ರೂ. ಭಾರಿ ಅನುದಾನ ನೀಡಿದೆ. ಹಿಂದೆ ಇದ್ದ ಸರ್ಕಾರಗಳು ಕೇವಲ ೩೦೦-೩೪೦ ಕೋಟಿ ರೂ. ನೀಡುತ್ತಿದ್ದವು. ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೇವಲ ಎರಡೇ ವರ್ಷಗಳಲ್ಲಿ ೫೨,೯೦೦ ಕೋಟಿ ರೂ. ವೆಚ್ಚದ ಯೋಜನೆಗಳನ್ನು ಪೂರ್ಣಗೊಳಿಸಿ ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ನನ್ನ ಸ್ವಕ್ಷೇತ್ರದ ವ್ಯಾಪ್ತಿಯ ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ಸೇರಿದಂತೆ ಹಲವು ಭಾಗಗಳಲ್ಲಿ ಬಾಕಿ ಉಳಿದಿದ್ದ ೩೩-೩೪ ಕೆಳಸೇತುವೆ ಹಾಗೂ ಮೇಲ್ಸೇತುವೆ ಕಾಮಗಾರಿಗಳನ್ನು ಯಶಸ್ವಿಯಾಗಿ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನಾನು ಸಂಸದನಾಗಿ ಬರುವಾಗಲೇ ಈ ಮೇಲ್ಸೇತುವೆ ನಿರ್ಮಾಣದ ಪ್ರಸ್ತಾಪವಿತ್ತು. ಇದೀಗ ಕೇವಲ ಒಂದೂವರೆ ವರ್ಷದ ಒಳಗಾಗಿ ಟೆಂಡರ್ ಪ್ರಕ್ರಿಯೆ ಮುಗಿಸಿ, ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗುಣಮಟ್ಟದ ಕಾಮಗಾರಿಯನ್ನು ನಡೆಸಿ, ಆದಷ್ಟು ಬೇಗ ಇದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಒಂದು ವೇಳೆ ಸೋಮಣ್ಣ ಅವರು ರೈಲ್ವೆ ಮಂತ್ರಿಯಾಗದಿದ್ದರೆ ಅಜ್ಜಂಪುರ ಹಾಗೂ ಚಿಕ್ಕಮಗಳೂರು ಭಾಗಕ್ಕೆ ಈ ಪ್ರಮಾಣದ ರೈಲ್ವೆ ಸೇವೆ ಸಿಗುತ್ತಿರಲಿಲ್ಲ. ಚಿಕ್ಕಮಗಳೂರಿನಿಂದ ತಿರುಪತಿಗೆ ಹೊಸ ಎಕ್ಸ್‌ಪ್ರೆಸ್ ರೈಲು ಮಂಜೂರು ಮಾಡಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಸೋಮಣ್ಣ ಅವರು ಕೇವಲ ನಮ್ಮ ಪಕ್ಷಕ್ಕಷ್ಟೇ ಅಲ್ಲ, ಸರ್ವಪಕ್ಷಗಳಿಗೂ ಲೀಡರ್ ಆಗುವ ಶಕ್ತಿ ಹೊಂದಿದ್ದಾರೆ ಎಂದರು.
ಅಜ್ಜಂಪುರ ಹಾಗೂ ಶಿವಾನಿ ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಒತ್ತಾಯದ ಮೇರೆಗೆ ಯಶವಂತಪುರ-ವಾಸ್ಕೋಡಗಾಮಾ ಎಕ್ಸ್‌ಪ್ರೆಸ್ ಹಾಗೂ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ಸೇರಿದಂತೆ ಒಟ್ಟು ನಾಲ್ಕು ರೈಲುಗಳನ್ನು ಅಜ್ಜಂಪುರದಲ್ಲಿ ನಿಲುಗಡೆ ಮಾಡುವಂತೆ ಸಚಿವ ಸೋಮಣ್ಣ ಹಾಗೂ ಹಿರಿಯ ರೈಲ್ವೆ ಅಧಿಕಾರಿಗಳಿಗೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ಸಂಸದರು ತಿಳಿಸಿದರು.
ಅಜ್ಜಂಪುರ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆಗಳಿಲ್ಲ ಹಾಗೂ ಪಾರ್ಕಿಂಗ್ ಸಮಸ್ಯೆ ಇದೆ ಎಂಬ ದೂರುಗಳು ಕೇಳಿಬಂದಿವೆ. ಹೀಗಾಗಿ ನಿಲ್ದಾಣದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕಿದೆ. ಇದರೊಂದಿಗೆ, ಅಜ್ಜಂಪುರ ಪಟ್ಟಣದ ಗುರು ಸಿದ್ದೇಶ್ವರ ವೃತ್ತದಿಂದ ಗೌರಾಪುರ ರಸ್ತೆಯವರೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೂ ಸಾರ್ವಜನಿಕರು ಮನವಿ ಮಾಡಿದ್ದು, ಇವೆಲ್ಲವನ್ನೂ ಆದಷ್ಟು ಬೇಗ ಮಂಜೂರು ಮಾಡಿಕೊಡಬೇಕು ಎಂದು ಸಚಿವರಲ್ಲಿ ವಿನಂತಿಸಿದರು. ಇದೇ ವೇಳೆ ಅಜ್ಜಂಪುರ ಭಾಗದ ಕೆರೆಗಳನ್ನು ತುಂಬಿಸುವ ಜಲಶಕ್ತಿ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳಿಗೂ ಶೀಘ್ರದಲ್ಲೇ ಅನುಮೋದನೆ ನೀಡುವಂತೆ ಅವರು ಒತ್ತಾಯಿಸಿದರು.
ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ಸಚಿವ ವಿ.ಸೋಮಣ್ಣ ಅವರು ಅಭಿವೃದ್ಧಿ ವಿಚಾರದಲ್ಲಿ ಎಂದೂ ರಾಜಕಾರಣ ಮಾಡಿದವರಲ್ಲ. ಅವರು ಸಚಿವರಾದ ಮೇಲೆ ಇಡೀ ರಾಜ್ಯಕ್ಕೆ, ವಿಶೇಷವಾಗಿ ಕರ್ನಾಟಕಕ್ಕೆ ರೈಲ್ವೆ ಇಲಾಖೆಯಿಂದ ಹಲವಾರು ಕೊಡುಗೆಗಳನ್ನು ತಂದಿದ್ದಾರೆ. ರೈಲ್ವೆ ಮೇಲ್ಸೇತುವೆಗಳು ಮತ್ತು ರಸ್ತೆಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಈ ಜನಪರ ಕೆಲಸಗಳನ್ನು ನಾವೆಲ್ಲರೂ ಕೊಂಡಾಡಲೇಬೇಕು ಎಂದರು.
ಚಿಕ್ಕಮಗಳೂರು, ಸಾಗರ, ಸೊರಬ ಮುಂತಾದ ಸಣ್ಣ ನಿಲ್ದಾಣಗಳು ಈಗಾಗಲೇ ಅಭಿವೃದ್ಧಿಗೊಂಡಿವೆ. ಆದರೆ ಪ್ರಮುಖ ನಿಲ್ದಾಣವಾದ ತರೀಕೆರೆ ಇನ್ನೂ ಹಿಂದುಳಿದಿದೆ. ಸೋಮಣ್ಣನವರು ಮೊದಲ ಬಾರಿ ಸಚಿವರಾದಾಗಲೇ ನಾನು ಈ ಬಗ್ಗೆ ಮನವಿ ಮಾಡಿದ್ದೆ. ಇದಕ್ಕಾಗಿ ಸುಮಾರು ೨೦ ಕೋಟಿ ರೂ. ಗಳ ಅಗತ್ಯವಿದ್ದು, ಕೂಡಲೇ ಈ ಯೋಜನೆಗೆ ಅನುಮೋದನೆ ನೀಡಿ, ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಸಚಿವರನ್ನು ಕೋರಿದರು.
ತರೀಕೆರೆ-ಅಜ್ಜಂಪುರ ರಸ್ತೆ ಮೇಲ್ಸೇತುವೆ ಹಲವು ವರ್ಷಗಳ ಸಾರ್ವಜನಿಕರ ಬೇಡಿಕೆಯಾಗಿದ್ದು, ಇದನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಅಜ್ಜಂಪುರದ ಗೌರಪುರ ಹಾಗೂ ಮಾಳೆನಹಳ್ಳಿ ರೈತರು ಜಮೀನುಗಳಿಗೆ ತೆರಳಲು ಅನುಕೂಲವಾಗುವಂತೆ ರೈಲ್ವೆ ಹಳಿಗಳ ಕೆಳಗೆ ಅಂಡರ್‌ಪಾಸ್ ನಿರ್ಮಿಸಿಕೊಡಬೇಕು. ಹೊಸೂರು ಕ್ರಾಸ್ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ಅಜ್ಜಂಪುರವು ಈಗ ತಾಲೂಕು ಕೇಂದ್ರವಾಗಿರುವುದರಿಂದ, ಇಲ್ಲಿ ಹೆಚ್ಚಿನ ರೈಲುಗಳು ನಿಲ್ಲುವಂತೆ ಕ್ರಮ ಕೈಗೊಳ್ಳಬೇಕು. ತಾಲೂಕಿನಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ೪೦:೬೦ ಅನುಪಾತದ ಅಡಿಯಲ್ಲಿ ಹಣ ಬಿಡುಗಡೆಯಾಗಬೇಕಿದ್ದು, ಬಾಕಿ ಇರುವ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಲು ನೆರವಾಗಬೇಕು ಎಂದು ಕೋರಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಸಾರ್ವಜನಿಕರ ಹಿತದೃಷ್ಟಿಯಿಂದ ಈ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಕೇಂದ್ರ ಸಚಿವರಾದ ವಿ.ಸೋಮಣ್ಣ ಅವರ ಕಾರ್ಯವೈಖರಿ ಶ್ಲಾಘಿಸಿದ ಭೋಜೇಗೌಡರು, ಸೋಮಣ್ಣ ಎಂದರೆ ಕೆಲಸಗಾರ ಎಂದೇ ಅರ್ಥ ಎಂದು ಬಣ್ಣಿಸಿದರು. ಅತ್ಯಂತ ಕೆಳಮಟ್ಟದ ರಾಜಕಾರಣದಿಂದ ಬಂದು ಇಂದು ಕೇಂದ್ರ ಸಚಿವರಾಗಿರುವ ಅವರು ಶಿಸ್ತು ಮತ್ತು ಸಮಯ ಪಾಲನೆಗೆ ಹೆಸರಾದವರು. ಅವರು ಬೆಂಗಳೂರಿನ ಕಾರ್ಪೊರೇಟರ್ ಆಗಿದ್ದ ಅವಧಿಯಲ್ಲೇ ಇಡೀ ಕಾರ್ಪೊರೇಷನ್‌ಗೆ ಕೆಲಸದ ಪಾಠ ಕಲಿಸಿಕೊಟ್ಟಿದ್ದರು. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ನಿಗದಿತ ಅವಧಿಯಲ್ಲಿ ಮುಗಿಸುವ ಕಟಿಬದ್ಧತೆ ಅವರಿಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಮಗಾರಿಗೆ ಹಣಕಾಸಿನ ಹಾಗೂ ಇತರೆ ಯಾವುದೇ ತಾಂತ್ರಿಕ ತೊಂದರೆಗಳಿಲ್ಲ. ಆದರೆ ಭೂಸ್ವಾಧೀನ ಪ್ರಕ್ರಿಯೆ ಮಾತ್ರ ಬಾಕಿ ಇದೆ. ಶಾಸಕರು ಸ್ಥಳೀಯ ರೈತರ ಸಭೆ ನಡೆಸಿ, ಅವರ ಮನವೊಲಿಸಬೇಕು. ರೈಲ್ವೆ ಇಲಾಖೆಯು ರೈತರಿಗೆ ಉತ್ತಮ ಪರಿಹಾರವನ್ನೇ ನೀಡುತ್ತದೆ. ಆದ್ದರಿಂದ ವಿಳಂಬ ಮಾಡದೆ ತಕ್ಷಣವೇ ಪರಿಹಾರ ವಿತರಿಸಿ, ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಅಜ್ಜಂಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ರೇವಣ್ಣ, ಉಪಾಧ್ಯಕ್ಷೆ ಕವಿತಾ ಕೇಶವಮೂರ್ತಿ ಹಾಗೂ ರೈಲ್ವೆ ಇಲಾಖೆಯ ಡಿಆರ್‌ಎಂ ಮುದ್ರಾ ಮಿತ್ತಲ್ ಮತ್ತಿತರರು ಉಪಸ್ಥಿತರಿದ್ದರು.
Work on the railway level crossing and road overbridge at Ajjampur has begun.
Leave a comment