ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದ್ದು ನಗರದ ಉದ್ಯಮಿ ರಾಜೇಶ್ ಅವರ ಪತ್ನಿ ಸುಮ (55) ಆಲೇನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಶ್ರೀಮಂತ ಕುಟುಂಬದ ಗೃಹಿಣಿಯ ಈ ದಿಢೀರ್ ಸಾವು ತೀವ್ರ ಆಘಾತ ಮತ್ತು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳನ್ನು ಮೂಡಿಸಿದೆ.
ಘಟನಾ ಸ್ಥಳದಲ್ಲಿ ಸುಮ ಅವರು ಬರೆದಿದ್ದಾರೆನ್ನಲಾದ ಡೆತ್ನೋಟ್ ಪತ್ತೆಯಾಗಿದ್ದು, ಸಾವಿನ ಹಿಂದಿರುವ ನಿಖರ ಕಾರಣವನ್ನು ಪತ್ತೆಹಚ್ಚಲು ಪೊಲೀಸರಿಗೆ ಇದು ಪ್ರಮುಖ ಸಾಕ್ಷಿಯಾಗಿದೆ. ಆದರೆ, ಆ ಪತ್ರದಲ್ಲಿರುವ ಅಂಶಗಳನ್ನು ಪೊಲೀಸರು ಸದ್ಯಕ್ಕೆ ಗೌಪ್ಯವಾಗಿಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಬಸವನಹಳ್ಳಿ ಠಾಣೆಯ ಪೊಲೀಸರು, ಸೋಕೋ (SOCO) ತಂಡ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ರಿವಾಲ್ವರ್ ಮತ್ತು ಡೆತ್ ನೋಟ್ ಸೇರಿದಂತೆ ಪ್ರಮುಖ ಸಾಕ್ಷ್ಯಾಧಾರಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮೃತರ ಪುತ್ರ ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ಇದು ಪಿಸ್ತೂಲಿನಿಂದ ಮಾಡಿಕೊಂಡ ಆತ್ಮಹತ್ಯೆಯಂತೆ ಕಂಡುಬರುತ್ತಿದೆ ಎಂದು ತಿಳಿಸಿದ್ದು ತನಿಖೆಯ ನಂತರವಷ್ಟೇ ಈ ನಿಗೂಢ ಸಾವಿನ ಹಿಂದಿನ ನಿಜವಾದ ಸತ್ಯಾಂಶ ಹೊರಬರಬೇಕಿದೆ.
Suicide case of businessman’s wife escalated
Leave a comment