ಚಿಕ್ಕಮಗಳೂರು: ಹಲವಾರು ಮಹಾನ್ ದಾರ್ಶನಿಕರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಫಲವಾಗಿ ಇಂದು ಎಲ್ಲಾ ಬಡವರ್ಗದ ಜನರನ್ನು ಸಮಾಜದ ಮುನ್ನಲೆಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ಅವರು ಇಲ್ಲಿನ ಲಯನ್ಸ್ ಸೇವಾ ಭವನದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಲಯನ್ಸ್ ಸೇವಾ ಸಂಸ್ಥೆ ಇವರುಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ನ್ಯಾಯದ ಹರಿಕಾರ ಪ್ರವಾದಿ ಮಹಮದ್ ಕುರಿತ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಬುದ್ಧ, ಬಸವ, ಅಬೇಡ್ಕರ್, ಕನಕದಾಸರು, ಪ್ರವಾದಿ ಮಹಮದ್ ಪೈಗಂಬರ್, ಕುವೆಂಪು, ಸ್ವಾಮಿ ವಿವೇಕಾನಂದ, ವಾಲ್ಮೀಕಿ ಮುಂತಾದ ಹಲವಾರು ದಾರ್ಶನಿಕರು ಎಲ್ಲಾ ಧರ್ಮದ ಶೋಷಿತರನ್ನು ಸಮಾಜದ ಮುನ್ನಲೆಗೆ ತರುವ ಪ್ರಯತ್ನ ಮಾಡಿ ಮೂಢನಂಬಿಕೆ, ಮೌಢ್ಯ, ಕಂದಾಚಾರಗಳಿಂದ ಹೊರತರುವ ಕೆಲಸ ಮಾಡಿದ್ದಾರೆಂದು ಶ್ಲಾಘಿಸಿದರು.
ಮಹಾನ್ ದಾರ್ಶನಿಕರ ವಿಚಾರಧಾರೆ, ತತ್ವಾದರ್ಶಗಳಿಗೆ ಇಂದೂ ಸಹ ಬೆಂಬಲ ವ್ಯಕ್ತವಾಗುತ್ತಿರುವುದು ಅಭಿನಂದನೀಯ. ಸರ್ವಧರ್ಮಗಳ ದೇಶ ಭಾರತ. ಏಕತೆ, ಐಕ್ಯತೆ, ಭಾವೈಕ್ಯತೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ನಾವೆಲ್ಲಾ ಭಾರತೀಯರು ಎಂಬ ಮನೋಭಾವವನ್ನು ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಬೇಕೆಂದು ಕರೆನೀಡಿದರು.
ದೇಶವಾಸಿಗಳ ನೆಮ್ಮದಿ ಬದುಕಿಗೆ ನಾಂದಿಯಾಗಿರುವ ಸೈನಿಕರನ್ನು ಗೌರವಿಸಬೇಕಾಗಿದೆ. ಯಾವುದೇ ವ್ಯಕ್ತಿ ಯಾವುದೇ ಧರ್ಮದಲ್ಲಿ ಜನಿಸಿದ್ದರೂ ನಾವು ದೇಶವನ್ನು ಗೌರವಿಸಬೇಕು. ಇನ್ನೊಂದು ಧರ್ಮವನ್ನು ಪ್ರೀತಿಸಬೇಕು ಎಂಬುದನ್ನು ದಾರ್ಶನಿಕರು ಹೇಳಿರುವುದು ಆಚರಣೆಗೆ ಬಂದಾಗ ದೇಶದಲ್ಲಿ ಶಾಂತಿ ಮೂಡುತ್ತದೆ ಎಂದರು.
ನಿವೃತ್ತ ಉಪನ್ಯಾಸಕ ಹಾಗೂ ಸಾಹಿತಿ ಬಿ.ತಿಪ್ಪೇರುದ್ರಪ್ಪ ಮಾತನಾಡಿ, ಕೆಟ್ಟ ಪ್ರಚೋದನೆಗಳಿಗೆ ಅವಕಾಶ ನೀಡದೆ ಹಿಂದೂ, ಮುಸ್ಲಿಂ ಸಮುದಾಯ ಒಟ್ಟಿಗೆ ಸೇರಿದಾಗ ಭಾವೈಕ್ಯತೆ ಬೆಳೆಯುತ್ತದೆ. ಜಗತ್ತಿನಲ್ಲಿ, ನಾಡಿನಲ್ಲಿ ಅನ್ಯಾಯ, ಅಶಾಂತಿ, ಮೌಢ್ಯತೆ ನಡೆಯುತ್ತಿದ್ದಾಗ ಏಸುಕ್ರಿಸ್ತ, ಪ್ರವಾದಿ ಮಹಮದ್ ಪೈಗಂಬರ್, ಬಸವಣ್ಣ ಮುಂತಾದವರು ಆಯಾ ಕಾಲಘಟ್ಟದಲ್ಲಿ ಈ ಸಮುದಾಯಗಳ ಮಧ್ಯೆ ಇದ್ದ ಅಡ್ಡಗೋಡೆಯನ್ನು ಕೆಡವಿ ನಾವೆಲ್ಲಾ ಒಂದು ಎಂಬ ಭಾವನೆ ಮೂಡಿಸಿದ್ದರು ಎಂದು ವಿಶ್ಲೇಷಿಸಿದರು,
ಜಾತಿ, ಮತ, ಕುಲ, ಗೋತ್ರ, ಧರ್ಮ ಇವೆಲ್ಲವನ್ನು ಮೀರಿ ಒಂದು ಮಾನವೀಯ ಮೌಲ್ಯದ ಮನುಷ್ಯತ್ವದ ಧರ್ಮ ಪಾಲಿಸಿಕೊಂಡು ಹೋಗಬೇಕೆಂಬುದು ದೇವರ ರೂಪದಲ್ಲಿ ಇವರು ಅವತರಿಸಿ ಸಂದೇಶ ನೀಡಿದ್ದಾರೆಂದು ಹೇಳಿದರು.
ಈ ಅವತಾರ ಪುರುಷರು ಆಗಾಗ್ಗೆ ಈ ಭೂಮಿ ಮೇಲೆ ಜನಿಸಿ ಎಲ್ಲರೂ ಒಂದೇ ಎಂಬ ಸಮ ಸಮಾಜ ನಿರ್ಮಾಣ ಮಾಡಲು ಕಾರಣೀಭೂತರಾಗಿದ್ದಾರೆ. ಧರ್ಮದ ಹೆಸರಿನಲ್ಲಿ ತಿದ್ದಿ ತೀಡಿ ಜಾಗೃತಿ ಮೂಡಿಸಿದ ಪರಿಣಾಮ ದೇಶದಲ್ಲಿಂದು ಧಾರ್ಮಿಕತೆ ಕಾಣಲು ಸಾಧ್ಯವಾಗಿದೆ ಎಂದರು.
ಸಮಾಜದ ಕಟ್ಟುಪಾಡುಗಳು ಇಂದು ಮಕ್ಕಳನ್ನು ಬಂದಿಸುತ್ತಿದ್ದು, ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಪುನಹಾ ವಿಶ್ವಮಾನವರಾಗಲು ಕಾರಣವಾಗಿದೆ ಎಂದು ಶ್ಲಾಘಿಸಿದರು.
ನಿವೃತ್ತ ಪ್ರಾಂಶುಪಾಲ ಗಫಾರ್ ಬೇಗ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಯನ್ಸ್ ಅಧ್ಯಕ್ಷ ಕುಮಾರ್, ಸಿಡಿಎ ಅಧ್ಯಕ್ಷ ನಯಾಜ್ ಅಹಮದ್, ಡಾ. ಮಹಮದ್ ಸಾಲಿ ಉಪಸ್ಥಿತರಿದ್ದರು. ಜಿಲ್ಲಾ ಸಂಘದ ರಿಜ್ವಾನ್ ಅಹಮದ್ ಸ್ವಾಗತಿಸಿದರು.
Philosophers have strived to bring the poor to the forefront of society.
Leave a comment