ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ ಕಚೇರಿ ಆವರಣದಲ್ಲಿ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿದ ಕೆಲವೇ ಗಂಟೆಗಳಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ನಗರದ ರೈತ ಸಂಘದ ಕಚೇರಿ ಮುಂಭಾಗದಲ್ಲಿ ಬೆಳಿಗ್ಗೆ 7.55ಕ್ಕೆ ಧ್ವಜಾರೋಹಣ ನೆರವೇರಿಸಲಾಗಿದ್ದು, ಸುಮಾರು ನಾಲ್ಕು ಗಂಟೆಗಳ ಬಳಿಕ 11.55ರ ವೇಳೆಗೆ ಧ್ವಜವನ್ನು ಕೆಳಗಿಳಿಸಲಾಗಿದೆ ಎಂದು ಮತ್ತೊಂದು ಬಣದವರು ಆರೋಪಿಸಿದ್ದಾರೆ. ರಾಷ್ಟ್ರಧ್ವಜವನ್ನು ನಿಗದಿತ ಸಮಯಕ್ಕೂ ಮುನ್ನವೇ ಕೆಳಗಿಳಿಸಿರುವುದು ಧ್ವಜ ಸಂಹಿತೆಯ ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಕಳೆದ ಕೆಲ ತಿಂಗಳಿಂದ ಚಿಕ್ಕಮಗಳೂರು ಜಿಲ್ಲಾ ರೈತ ಸಂಘದಲ್ಲಿ ಭಿನ್ನಮತ ತೀವ್ರಗೊಂಡಿದ್ದು, ಸಂಘಟನೆ ಎರಡು ಬಣಗಳಾಗಿ ವಿಭಜನೆಯಾಗಿದೆ. ಸಂಘ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪದ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಕೆಲವರನ್ನು ಸಂಘದಿಂದ ಉಚ್ಚಾಟಿಸಿದ್ದರು ಎನ್ನಲಾಗಿದೆ.
ಉಚ್ಚಾಟಿತ ಬಣದವರು ಸ್ವಾತಂತ್ರ್ಯ ದಿನದಂದು ಬೆಳಿಗ್ಗೆ ರೈತ ಸಂಘದ ಕಚೇರಿ ಆವರಣಕ್ಕೆ ಆಗಮಿಸಿ ಧ್ವಜಾರೋಹಣ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬಣಗಳ ನಡುವಿನ ತಿಕ್ಕಾಟದ ಹಿನ್ನೆಲೆಯಲ್ಲಿ ಸಮಸ್ಯೆ ಇತ್ಯರ್ಥವಾಗುವವರೆಗೆ ಎರಡೂ ಬಣದವರು ಕಚೇರಿ ಪ್ರವೇಶಿಸದಂತೆ ಪೊಲೀಸರು ಸೂಚನೆ ನೀಡಿದ್ದರು ಎನ್ನಲಾಗಿದೆ.
ಈ ನಡುವೆ ಧ್ವಜಾರೋಹಣ ನೆರವೇರಿಸಿದ ಕೆಲವೇ ಗಂಟೆಗಳಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಿರುವುದು ವಿವಾದಕ್ಕೆ ಮತ್ತಷ್ಟು ಕಾರಣವಾಗಿದೆ. ಈ ಕುರಿತು ಮುಖಂಡರೊಂದಿಗೆ ಚರ್ಚಿಸಿ ಕಾನೂನು ಹೋರಾಟ ನಡೆಸುವುದರ ಜತೆಗೆ ಪೊಲೀಸ್ ದೂರು ದಾಖಲಿಸುವುದಾಗಿ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ರೈತ ಸಂಘದ ಆಂತರಿಕ ಬಣ ಸಂಘರ್ಷ ಇದೀಗ ರಾಷ್ಟ್ರಧ್ವಜದ ವಿಚಾರಕ್ಕೂ ತಲುಪಿದ್ದು, ಧ್ವಜವನ್ನು ನಿಗದಿತ ಸಮಯಕ್ಕೂ ಮುನ್ನವೇ ಕೆಳಗಿಳಿಸಲಾಯಿತೇ ಎಂಬ ಆರೋಪದ ಕುರಿತು ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
The national flag was taken down within hours of being hoisted…?
Leave a comment