Home namma chikmagalur chikamagalur ಕಸ್ತೂರಿ ರಂಗನ್ ವರದಿ ಮರುಪರಿಶೀಲಿಸಲು ರೈತ ಸಂಘ ಆಗ್ರಹ
chikamagalurHomeLatest Newsnamma chikmagalur

ಕಸ್ತೂರಿ ರಂಗನ್ ವರದಿ ಮರುಪರಿಶೀಲಿಸಲು ರೈತ ಸಂಘ ಆಗ್ರಹ

Share
Share

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ವೈಫಲ್ಯದಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ತಕ್ಷಣವೇ ಬರಗಾಲವೆಂದು ಘೋಷಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಮಲೆನಾಡಿನ 137 ಗ್ರಾಮಗಳಿಗೆ ಕಂಟಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಪುನಃ ಪರಿಶೀಲಿಸಿ ಜನವಸತಿ ಪ್ರದೇಶಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಚಿಕ್ಕಮಗಳೂರು ಜಿಲ್ಲಾ ಘಟಕ ಆಗ್ರಹಿಸಿದೆ.

ಈ ಸಂಬಂಧ ರೈತ ಸಂಘದ ಜಿಲ್ಲಾಧ್ಯಕ್ಷ ಡಿ. ಮಹೇಶ್ ಸೇರಿದಂತೆ ಪದಾಧಿಕಾರಿಗಳು ಇಂಧನ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ, ಜಿಲ್ಲೆಯಲ್ಲಿ ಮುಂಗಾರು ವೈಫಲ್ಯದಿಂದ ಮಳೆ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಮಲೆನಾಡು, ಅರೆಮಲೆನಾಡು ಹಾಗೂ ಬಯಲು ಪ್ರದೇಶಗಳಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗಿದೆ ಎಂದು ತಿಳಿಸಲಾಗಿದೆ. ಮಲೆನಾಡಿನಲ್ಲಿ ಕೆಲವೇ ದಿನಗಳ ಮಳೆಯ ಹೊರತು ನದಿಗಳಲ್ಲಿ ನೀರಿನ ಹರಿವು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘ ಹೇಳಿದೆ.

ಅರೆಮಲೆನಾಡು ಹಾಗೂ ಬಯಲುಸೀಮೆ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯ ವಿಫಲವಾಗಿದ್ದು, ಕೆಲವೆಡೆ ಬಿತ್ತಿದ ಬೆಳೆಗಳು ಕೂಡ ಬೆಳೆಯದೆ ನಾಶವಾಗಿವೆ. ಕೊಳವೆ ಬಾವಿ ಆಧಾರಿತ ಕೃಷಿಯೂ ನೀರಿನ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕೆರೆ-ಕಟ್ಟೆಗಳು ನೀರಿಲ್ಲದೆ ಬಣಗುಡುತ್ತಿದ್ದು, ಕುಡಿಯುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಆತಂಕವೂ ಇದೆ ಎಂದು ರೈತ ಸಂಘ ಎಚ್ಚರಿಸಿದೆ.

ಜಿಲ್ಲೆಯಲ್ಲಿ ಶೇ.30ರಷ್ಟು ಮಾತ್ರ ಬಿತ್ತನೆಯಾಗಿದ್ದು, ಬೆಳೆಗಳು ಬೆಳೆಯದೆ ಭೂಮಿ ಖಾಲಿಯಾಗಿರುವ ಸ್ಥಿತಿ ನಿರ್ಮಾಣವಾಗಿದೆ. ಮಳೆಯ ಕೊರತೆಯಿಂದ ಅಡಿಕೆ ಬೆಳೆಗಾರರು ಶೇ.30ರಿಂದ 40ರಷ್ಟು ಬೆಳೆ ನಷ್ಟದ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ಸಂಘ ತಿಳಿಸಿದೆ. ಕಡೂರು ಹಾಗೂ ತರೀಕೆರೆ ತಾಲ್ಲೂಕುಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿರುವ ಬಗ್ಗೆ ದೂರುಗಳು ಬಂದಿವೆ ಎಂದು ಹೇಳಿದೆ.

ಸರ್ಕಾರ ಶಾಶ್ವತ ಬರ ನಿರ್ವಹಣಾ ಯೋಜನೆ ರೂಪಿಸದೆ ತಾತ್ಕಾಲಿಕ ಪರಿಹಾರಕ್ಕೆ ಸೀಮಿತವಾಗಿದೆ ಎಂದು ರೈತ ಸಂಘ ಆರೋಪಿಸಿದೆ. ಇದರಿಂದ ರೈತರು ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದೇ ಶಾಶ್ವತ ಪರಿಹಾರ ಎಂದು ಹೇಳಿರುವ ಸಂಘ, ಭದ್ರ ಉಪಕಣಿವೆ ಯೋಜನೆಯ 1 ಮತ್ತು 2ನೇ ಹಂತ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ತರೀಕೆರೆ ಹಾಗೂ ಕಡೂರು ಭಾಗದ ಕೆರೆಗಳಿಗೆ ತಕ್ಷಣ ನೀರು ತುಂಬಿಸಬೇಕು ಎಂದು ಒತ್ತಾಯಿಸಿದೆ. 3ನೇ ಹಂತದ ಕಾಮಗಾರಿಯನ್ನು ಈ ವರ್ಷವೇ ಪೂರ್ಣಗೊಳಿಸಿ ಚಿಕ್ಕಮಗಳೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿದೆ.

ಫಸಲ್ ಭೀಮಾ ಸೇರಿದಂತೆ ಬೆಳೆವಿಮೆ ಯೋಜನೆಗಳಲ್ಲಿ ರೈತರಿಗೆ ಅನ್ಯಾಯವಾಗುತ್ತಿರುವ ನಿಯಮಗಳನ್ನು ಬದಲಾಯಿಸಬೇಕು ಎಂದು ಕೂಡ ಸಂಘ ಒತ್ತಾಯಿಸಿದೆ.

ಕಸ್ತೂರಿ ರಂಗನ್ ವರದಿಗೆ ವಿರೋಧ

ಮಲೆನಾಡಿನ 137 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವ ಕಸ್ತೂರಿ ರಂಗನ್ ವರದಿಯನ್ನು ರೈತ ಸಂಘ ತೀವ್ರವಾಗಿ ವಿರೋಧಿಸಿದೆ. ವರದಿ ಜಾರಿಗೆ ಬಂದರೆ ಮಲೆನಾಡಿನ ಜನಜೀವನದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಸಂಘ ಎಚ್ಚರಿಸಿದೆ.

ಜನರ ವಿರೋಧದ ನಡುವೆಯೂ ವರದಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿರುವುದು ಹಠಮಾರಿ ಧೋರಣೆ ಎಂದು ಆರೋಪಿಸಿರುವ ರೈತ ಸಂಘ, ಜನರ ಅಹವಾಲುಗಳನ್ನು ಪರಿಗಣಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

9 ಪ್ರಮುಖ ಬೇಡಿಕೆಗಳು

ರೈತ ಸಂಘ ಸರ್ಕಾರದ ಮುಂದೆ ಒಟ್ಟು ಒಂಬತ್ತು ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ. ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವುದು, ರೈತರ ಬೆಳೆ ಸಾಲ ಹಾಗೂ ಕೃಷಿ ಸಾಲ ಮನ್ನಾ ಮಾಡುವುದು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳುವುದು, ಬೆಳೆವಿಮೆ ನಿಯಮಗಳನ್ನು ರೈತರಿಗೆ ಪೂರಕವಾಗಿ ಬದಲಿಸುವುದು ಪ್ರಮುಖ ಬೇಡಿಕೆಗಳಾಗಿವೆ.

ಇದರೊಂದಿಗೆ ಭದ್ರ ಉಪಕಣಿವೆ ಯೋಜನೆಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ತುಂಬಿಸುವುದು, ಕಾಡಂಚಿನ ಗ್ರಾಮಗಳಲ್ಲಿ ವನ್ಯಮೃಗಗಳಿಂದ ಉಂಟಾಗುತ್ತಿರುವ ಬೆಳೆ ಹಾಗೂ ಪ್ರಾಣಹಾನಿ ತಪ್ಪಿಸುವುದು, ಜನವಸತಿ ಪ್ರದೇಶಗಳಿಗೆ ಕಾಡುಪ್ರಾಣಿಗಳು ಪ್ರವೇಶಿಸದಂತೆ ಶಾಶ್ವತ ತಡೆಬೇಲಿ ನಿರ್ಮಿಸುವುದು ಹಾಗೂ ಕಸ್ತೂರಿ ರಂಗನ್ ವರದಿಯನ್ನು ಮರುಪರಿಶೀಲಿಸಿ ಜನವಸತಿ ಪ್ರದೇಶಗಳನ್ನು ಹೊರತುಪಡಿಸಿ ವೈಜ್ಞಾನಿಕವಾಗಿ ಪರಿಸರ ಸೂಕ್ಷ್ಮ ವಲಯ ಘೋಷಿಸುವಂತೆ ಸಂಘ ಒತ್ತಾಯಿಸಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಡಿ. ಮಹೇಶ್, ಜಿಲ್ಲಾ ಗೌರವಾಧ್ಯಕ್ಷ ದೇವರಾಜೇಗೌಡ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಪಾಧ್ಯಕ್ಷರು, ಜಿ.ಸಂ. ಕಾರ್ಯದರ್ಶಿ, ಜಿಲ್ಲಾ ಉಪಾಧ್ಯಕ್ಷ ಜೆ.ಎಸ್. ಶಿವಣ್ಣ, ಜಿಲ್ಲಾ ವಕ್ತಾರ ಭದ್ರೆ ಜಯರಾಮ್, ಕಾರ್ಯಾಧ್ಯಕ್ಷ ಮತ್ತಾವರ ವೆಂಕಟೇಶ್, ತಾಲ್ಲೂಕು ಕಾರ್ಯದರ್ಶಿ, ತಾಲ್ಲೂಕು ಖಜಾಂಚಿ ಸುನೀಲ್ ಕುಮಾರ್ ಕೆ.ಟಿ. ಹಾಗೂ ಸಂ. ಕಾರ್ಯದರ್ಶಿ ಸಿದ್ದೇಗೌಡ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Farmers’ association demands reconsideration of Kasturi Rangan report

Share

Leave a comment

Leave a Reply

Your email address will not be published. Required fields are marked *

Don't Miss

ಗ್ರಾಮ ಪಂಚಾಯಿತಿ ನೌಕರರ ಬೇಡಿಕೆ ಈಡೇರಿಸಲು ಸೆ.29ರಂದು ಧರಣಿ

ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಫೆಡರೇಶನ್ (AITUC) ವತಿಯಿಂದ ಸೆ.29ರಂದು...

ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಸುಳ್ಳು ಮಾಹಿತಿ ನೀಡಿ ₹2.20 ಲಕ್ಷ ವಂಚನೆ

ಚಿಕ್ಕಮಗಳೂರು: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಸುಳ್ಳು ವೈಯಕ್ತಿಕ ಮಾಹಿತಿ ನೀಡಿ ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಹಂತ ಹಂತವಾಗಿ *₹2.20 ಲಕ್ಷ ಹಣ ಹಾಗೂ ಮೊಬೈಲ್ ಫೋನ್ ಪಡೆದು ವಂಚಿಸಿರುವ ಆರೋಪ* ಕೇಳಿಬಂದಿದೆ. ಈ...

Related Articles

12 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಜಿಲ್ಲೆಯ 12...

ಕಳಸದಲ್ಲಿ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷ

ಕಳಸ : ಮನೆಯಂಗಳದಲ್ಲೇ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿ ಸ್ಥಳೀಯರನ್ನು ಬೆಚ್ಚಿಬೀಳಿಸಿದ ಘಟನೆ ಕಳಸ ತಾಲೂಕಿನ...

ಕೆಎಸ್‌ಆರ್‌ಟಿಸಿ ಬಸ್–ಟ್ರ್ಯಾಕ್ಟರ್ ಇಂಜಿನ್ ಡಿಕ್ಕಿಗೆ ಚಾಲಕ ಸಾವು

ತರೀಕೆರೆ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟ್ರ್ಯಾಕ್ಟರ್ ಇಂಜಿನ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಟ್ರ್ಯಾಕ್ಟರ್...

ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಪ್ರಜಾಸೇವ ಆಂದೋಲನದ ಉದ್ದೇಶ

ಚಿಕ್ಕಮಗಳೂರು:  ಜನರ ಸಮಸ್ಯೆಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿ ಆಲಿಸಿ, ಸಾಧ್ಯವಾದಷು ಶೀಘ್ರವಾಗಿ ಇತ್ಯರ್ಥ ಪಡಿಸುವ...