ಚಿಕ್ಕಮಗಳೂರು: ಸುಮಾರು ೨ ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ದಾಸರಹಳ್ಳಿ ಕೆರೆಯನ್ನು ಸೆಪ್ಟಂಬರ್ ೧೦ ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು.
ಸೋಮವಾರ ಕೆರೆಯ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು, ಈ ಕೆರೆಯಲ್ಲಿ ನೀರು ನಿಲ್ಲುತ್ತಿರಲಿಲ್ಲ, ಜನವರಿ, ಫೆಬ್ರವರಿ ತಿಂಗಳಿನಲ್ಲಿ ನೀರು ಖಾಲಿ ಆಗುತ್ತಿತ್ತು. ಕೆರೆ ಏರಿಯನ್ನು ರಿವೀಟ್ಮೆಂಟ್ ಮಾಡಿದರೆ ನೀರು ಇನ್ನಷ್ಟು ಸಮಯ ನಿಲ್ಲಿಸಬಹುದು ಎಂಬ ಕಾರಣಕ್ಕಾಗಿ ೨ ಕೋಟಿ ರುಪಾಯಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಇನ್ನು ಒಂದೂವರೆ ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ ಎಂದರು.
ಲಕ್ಯಾ, ಹಿರೇಗೌಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಜೀವನಾಡಿ. ಈ ಕೆರೆಯ ಕೆಲವು ಭಾಗ ಅರಣ್ಯ ಪ್ರದೇಶ ವ್ಯಾಪ್ತಿಗೆ ಸೇರಲಿದೆ. ಹಾಗಾಗಿ ತಾಂತ್ರಿಕ ಅಡಚಣೆ ಇತ್ತು. ಈ ತೊಡಕನ್ನು ಬಗೆಹರಿಸಲಾಗಿದೆ. ಈ ಭಾಗದಲ್ಲಿ ಕೆರೆಗೆ ಹೋಗುವ ಪ್ರದೇಶ ಹೋಗುತ್ತದೆಯೋ ಅಷ್ಟು ಪ್ರದೇಶವನ್ನು ಅರಣ್ಯ ಇಲಾಖೆಗೆ ಬೇರೆಡೆ ನೀಡಲಾಗುವುದು ಎಂದು ಹೇಳಿದರು.
ಸತತವಾಗಿ ಮೂರು ವರ್ಷಗಳ ಕಾಲ ಬೆಳವಾಡಿ ಕೆರೆ ಕೋಡಿ ಬಿದ್ದಿರುವುದು ನಾವ್ಯಾರು ಕೂಡ ಹಿಂದೆ ನೋಡಿರಲಿಲ್ಲ. ಬೆಳವಾಡಿ, ದೇವನೂರು, ಮಾಚೇನಹಳ್ಳಿ ಕೆರೆ ಸೇರಿದಂತೆ ಬಯಲು ಸೀಮೆಯ ಕೆರೆಗಳನ್ನು ತುಂಬಿಸಬೇಕೆಂದು ಹಲವು ಮಂದಿ ಹೋರಾಟ ಮಾಡಿದ್ದಾರೆ. ಸಿರಿಗೆರೆಯ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಹಲವು ಸಭೆಗಳು ನಡೆದಿದ್ದವು, ಇವರೆಲ್ಲರ ಹೋರಾಟದ ಫಲ ರಣಘಟ್ಟ ಯೋಜನೆ, ಭದ್ರ ಉಪ ಕಣವೆ ಯೋಜನೆ. ಡಿ.ಕೆ. ಶಿವಕುಮಾರ್ ಅವರು ಈ ಹಿಂದೆ ನೀರಾವರಿ ಸಚಿವರಾಗಿದ್ದಾಗ ಎತ್ತಿನಹೊಳೆ ಯೋಜನೆಗೆ ಅವರು ಗುದ್ದಲಿ ಪೂಜೆ ಮಾಡಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಉದ್ಘಾಟನೆ ಮಾಡಲಾಯಿತು ಎಂದ ಶಾಸಕರು, ವಿರೋಧ ಪಕ್ಷದವರು ಎತ್ತಿನಹೊಳೆ ಯೋಜನೆ ಜಾರಿಗೆ ಬರುವುದಿಲ್ಲ ಎಂದು ನಗುತ್ತಿದ್ದರು. ಸಕಲೇಶಪುರದಿಂದ ನೀರನ್ನು ಎತ್ತಿ ತರಲು ಸಾಧ್ಯವೇ ಎಂದು ಟೀಕೆ ಮಾಡಿದರು. ನೀರು ತರುವ ಮೂಲಕ ನಮ್ಮ ಸರ್ಕಾರ ಅಂತವರಿಗೆ ಉತ್ತರ ನೀಡಿದೆ ಎಂದು ಹೇಳಿದರು.
ಹಳೇಬೀಡು ಹಾಗೂ ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮಾತ್ರ ಎತ್ತಿನಹೊಳೆ ನೀರು ಬಳಕೆ ಇತ್ತು. ಹಳೇಬೀಡು ಕೆರೆಯಿಂದ ಬೆಳವಾಡಿಕೆರೆಗೆ ನೀರು ಕೊಡಬೇಕೆಂದು ಹಿಂದಿನ ಜನಪ್ರತಿನಿಧಿಗಳು ಪ್ರಯತ್ನ ಮಾಡಲಿಲ್ಲ, ಆದರೆ, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ರೈತ ಸಂಘದ ಮುಖಂಡರು, ನಮ್ಮಗಳ ಮನವಿ ಮೇರೆಗೆ ಡಿ.ಕೆ. ಶಿವಕುಮಾರ್ ಅವರು ಎರಡು ವರ್ಷದ ಹಿಂದೆ ನೀರಾವರಿ ಸಚಿವರಾಗಿದ್ದಾಗ ಅಡಗೂರು ಹತ್ತಿರ ತಾಂತ್ರಿಕ ತೊಂದರೆ ಇರುವುದರಿಂದ ನಮಗೆ ನೀರು ಕೊಟ್ಟಿದ್ದರ ಫಲ ಕಳೆದ ಎರಡು ವರ್ಷ ಬೆಳವಾಡಿ ಮಾಚೇನಹಳ್ಳಿ ಕುರುಬರಹಳ್ಳಿ ಹಿರೇವಡ್ಡು ದೇವನೂರು ಕೆರೆಗಳು ತುಂಬಿದವು. ೨೦೨೬ ರಲ್ಲಿ ಮತ್ತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಇನ್ನೂ ೧೫ ದಿನ ಕಾಲ ಎತ್ತಿನಹೊಳೆಯಲ್ಲಿ ನೀರು ಪಂಪ್ ಮಾಡಿದರೆ ಮಾಚೇನಹಳ್ಳಿ ಕೆರೆ ತುಂಬಲಿದೆ, ಕುರುಬರಹಳ್ಳಿ ತುಂಬಲಿದೆ, ಹಿರೇವಡ್ಡು ಈಗಾಗಲೇ ತುಂಬಿದೆ. ದೇವನೂರು ಕೆರೆ ಕೂಡ ತುಂಬಲಿದೆ. ಇಂತಹ ಬರಗಾಲದಲ್ಲಿ ಎಲ್ಲಾ ಕೆರೆಗಳು ತುಂಬಿದರೆ ನಮ್ಮ ಕಾಂಗ್ರೆಸ್ ಸರ್ಕಾರ ನನ್ನನ್ನು ಶಾಸಕನಾಗಿ ಮಾಡಿದ್ದಕ್ಕೆ ಸಾರ್ಥಕ ಆಗಲಿದೆ ಎಂದರು.
ಸುಳ್ಳೇ ಮನೆ ದೇವರಾಗಿದೆ
ಕಣಿವೆ ಕೆಳ ಭಾಗದ ಕೆರೆ ತುಂಬಿಸಬೇಕೆಂದು ರೈತರು ಹೇಳಿದ್ದರು ಅದರಂತೆ ಕೆರೆ ತುಂಬಿಸುವ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಮಳೆ ನೀರಿನಿಂದಾಗಿ ೨೦೧೦ ರಲ್ಲಿ ಬೆಳವಾಡಿ ಕೆರೆ ತುಂಬಿತ್ತು. ಎತ್ತಿನಹೊಳೆಯಿಂದ ನೀರು ಬಂದಿರುವುದು ೨೦೨೪, ೨೦೨೫ ಹಾಗೂ ೨೦೨೬ ರಲ್ಲಿ. ಹಾಗಾಗಿ ಯಾರ್ಯಾರು ಎಷ್ಟು ಶ್ರಮ ಹಾಕಿದ್ದಾರೆಂದು ಹೇಳುವ ಅವಶ್ಯಕತೆ ಇದೆ. ಕೆಲವರಿಗೆ ಸುಳ್ಳೇ ಮನೆ ದೇವರಾಗಿದೆ. ನಾನು ಮಾಡಿದ್ದು ಎಂದು ಕೆಲವರು ಎದೆಯ ಮೇಲೆ ಬೋರ್ಡ್ ಹಾಕಿಕೊಂಡಿದ್ದಾರೆ. ಆ ಬೋರ್ಡನ್ನು ಆಗಾಗ ತೋರಿಸುತ್ತಾರೆ. ಈ ಕೆಲಸ ನಾವು ಮಾಡಿದ್ದು ಎಂದು ಹೇಳಿಲ್ಲ ಅಂದ್ರೆ, ಅವರು ಹೇಳುವ ಸುಳ್ಳನ್ನೇ ನಿಜವೆಂದು ಜನ ಅಂದುಕೊಳ್ಳುತ್ತಾರೆ, ಹಾಗಾಗಿ ಅದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.
ಹಿಂದಿದ್ದ ಸರ್ಕಾರದಲ್ಲಿ ಏನೂ ಮಾಡಿಲ್ಲ ಎಂದು ಹೇಳುವುದಿಲ್ಲ. ಭದ್ರ ಉಪ ಕಣಿವೆಯ ಎರಡು ಹಂತದ ಟೆಂಡರ್ ಮಾಡಿದ್ದರು. ಆದರೆ ನಮ್ಮ ಸರ್ಕಾರ ಬಂದ ಮೇಲೆ ಕಡೂರು ಶಾಸಕ ಕೆ.ಎಸ್. ಆನಂದ್ ಹಾಗೂ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಿ ಕೋರಿ ಕೊಂಡ ಮೇರೆಗೆ ಮೂರನೇ ಹಂತದ ಟೆಂಡರ್ ಕರೆದು ಕೆಲಸ ಆರಂಭವಾಗಿದೆ, ನಾಲ್ಕನೇ ಹಂತದ ಟೆಂಡರ್ ಕರೆದು ಎಷ್ಟು ಸಾಧ್ಯವೋ ಅಷ್ಟು ಬೇಗ ಆ ಯೋಜನೆಯನ್ನು ಜನರಿಗೆ ಲೋಕಾರ್ಪಣೆ ಮಾಡಬೇಕೆಂಬುದು ನಮ್ಮ ಗುರಿ ಎಂದರು.
ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿಯ ಮುಖಂಡರುಗಳಾದ ರವೀಶ್ ಕ್ಯಾತನಬೀಡು, ಗುರುಶಾಂತಪ್ಪ, ನಟರಾಜ್ ಎಸ್. ಕೊಪ್ಪಲು, ಹೆಚ್.ಎಂ. ರೇಣುಕಾರಾಧ್ಯ ಹಾಗೂ ರೈತರು ಹಾಜರಿದ್ದರು.
Dasarahalli lake dedicated on September 10
Leave a comment