ಚಿಕ್ಕಮಗಳೂರು : ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಸಂದರ್ಭದಲ್ಲೇ ಕೇವಲ ಎರಡು ಗಂಟೆಗಳ ಸಂಕ್ಷಿಪ್ತ ಹೆಲಿಕಾಪ್ಟರ್ ಪ್ರವಾಸ ಕೈಗೊಳ್ಳುವ ಬದಲು ಜನರ ನೈಜ ಸಮಸ್ಯೆಗಳನ್ನು ಕಣ್ಣಾರೆ ಕಾಣಲು ರಸ್ತೆ ಮೂಲಕ ಸಂಚರಿಸುವಂತೆ ಮಾಜಿ ಸಚಿವ ಸಿ.ಟಿ. ರವಿ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದು ನೇರ ಆಗ್ರಹ ಮಂಡಿಸಿದ್ದಾರೆ.
ಹೆಲಿಕಾಪ್ಟರ್ನಲ್ಲಿ ಬಂದು ಹೋಗುವ ಅವಸರದ ಭೇಟಿಯಲ್ಲಿ ಶಿಷ್ಟಾಚಾರದಲ್ಲೇ ಬಹುಪಾಲು ಸಮಯ ಕಳೆದುಹೋಗಲಿದ್ದು, ಜನರ ಅಳಲು ಆಲಿಸಲು ಸಮಯ ಸಿಗುವುದಿಲ್ಲ. ಮಲೆನಾಡಿನ ವಾಸ್ತವ ಪರಿಸ್ಥಿತಿ ಅರ್ಥವಾಗಬೇಕಿದ್ದರೆ ತೀರ್ಥಹಳ್ಳಿ ಅಥವಾ ಬಾಳೆಹೊನ್ನೂರು ಮಾರ್ಗವಾಗಿ ರಸ್ತೆ ಮೂಲಕವೇ ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಬೇಕು. ಗುಂಡಿಬಿದ್ದ ರಸ್ತೆಗಳ ದುಸ್ಥಿತಿಯನ್ನು ಖುದ್ದು ವೀಕ್ಷಿಸಿ, ಮಲೆನಾಡು ಹಾಗೂ ಕರಾವಳಿ ಭಾಗದ ಸಂಪರ್ಕ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರ ತಕ್ಷಣವೇ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಪಶ್ಚಿಮಘಟ್ಟ ಸಂರಕ್ಷಣೆ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಕಸ್ತೂರಿ ರಂಗನ್ ಕರಡು ಅಧಿಸೂಚನೆಯು ಮಲೆನಾಡಿಗರಲ್ಲಿ ತೀವ ಆತಂಕ ಹುಟ್ಟಿಸಿದೆ. ಅರಣ್ಯ ಸಂರಕ್ಷಣೆಗೆ ಯಾರ ವಿರೋಧವೂ ಇಲ್ಲ, ಆದರೆ ಕೃಷಿಭೂಮಿ, ಜನವಸತಿ ಪ್ರದೇಶಗಳು ಹಾಗೂ ಸಾರ್ವಜನಿಕ ಮೂಲಸೌಕರ್ಯದ ಜಾಗಗಳನ್ನು ಪರಿಸರ ಸೂಕ್ಷ್ಮ ವಲಯದಿಂದ ಸಂಪೂರ್ಣವಾಗಿ ಹೊರಗಿಡಬೇಕು. ಗ್ರಾಮ ಮಟ್ಟದ ನಿಖರ ಭೂನಕ್ಷೆ ರೂಪಿಸಿ, ಜನರ ಬದುಕಿಗೆ ಧಕ್ಕೆಯಾಗದಂತೆ ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಸಮಗ್ರ ಆಕ್ಷೇಪಣೆ ಸಲ್ಲಿಸಬೇಕೆಂದು ಸಿ.ಟಿ. ರವಿ ಒತ್ತಾಯಿಸಿದ್ದಾರೆ.
ಕಡೂರು ಹಾಗೂ ಚಿಕ್ಕಮಗಳೂರು ತಾಲೂಕುಗಳ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ತೀವ್ರಗೊಂಡಿದ್ದು, ಸಮಸ್ಯೆ ನಿವಾರಣೆಗೆ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತುರ್ತಾಗಿ ವಿಶೇಷ ಟಾಸ್ಕ್ಫೋರ್ಸ್ ರಚಿಸಬೇಕು. ಇದರೊಂದಿಗೆ ಮಹತ್ವಾಕಾಂಕ್ಷೆಯ ‘ಜಲ ಜೀವನ್ ಮಿಷನ್’ ಕಾಮಗಾರಿಗಳಲ್ಲಿ ಗಂಭೀರ ಅಕ್ರಮಗಳು ನಡೆದಿವೆ. ಕಾಮಗಾರಿ ಅರ್ಧಕ್ಕೆ ನಿಂತಿರುವುದು, ಸೋರುತ್ತಿರುವ ಟ್ಯಾಂಕ್ಗಳು ಹಾಗೂ ನಲ್ಲಿಗಳಲ್ಲಿ ನೀರು ಬಾರದಿರುವ ಲೋಪಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದಲೇ ನಷ್ಟ ವಸೂಲಿ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಹಿರಂಗ ಪತ್ರದ ಮೂಲಕ ಎಚ್ಚರಿಸಿದ್ದಾರೆ.
Open letter from C.T. Ravi to the State Chief Minister.
Leave a comment