ಚಿಕ್ಕಮಗಳೂರು : ವಾಮಮಾರ್ಗಗಳ ಮೂಲಕ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಅಕ್ರಮವಾಗಿ ಚುನಾವಣೆ ನಡೆಸಲು ಮುಂದಾಗಿದ್ದಾರೆ ಎಂದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹೇಮಂತ್ ಗಂಭೀರವಾಗಿ ಆರೋಪಿಸಿದ್ದಾರೆ.
ನೂರಾರು ಸದಸ್ಯರನ್ನು ಅನರ್ಹಗೊಳಿಸಿ ಏಕ ಪಕ್ಷಿಯ ನಿರ್ಧಾರ ಕೈಗೊಂಡು ಮತ ಪಟ್ಟಿಯಲ್ಲಿ ಹೆಸರುಗಳೇ ಇಲ್ಲದಂತೆ ಮಾಡಿದ್ದಾರೆ. ಅಲ್ಲದೆ ಚುನಾವಣೆಯ ವೇಳೆ ನಿರ್ದೇಶಕರುಗಳಿಗೆ ಆಮಿಷ, ಬೆದರಿಕೆಯನ್ನು ಒಡ್ಡಿದ್ದು, ಹತಾಶರಾಗಿ ನಮ್ಮ ವಿರುದ್ಧ ಆಣೆ-ಪ್ರಮಾಣ ಹಾಗೂ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಹೇಮಂತ್ ಹಾಗೂ ತಂಡ ದೇವೇಂದ್ರಪ್ಪ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ತಾವು ನಿರ್ಮಿಸಿರುವ ಲೇಔಟ್ ಸೈಟ್ಗಳ ಮಾರಾಟಕ್ಕೆ ಮತ್ತೊಮ್ಮೆ ಅಧ್ಯಕ್ಷರಾಗಲು ಮುಂದಾಗಿದ್ದಾರೆ. ಈ ಹಿಂದೆ ನೌಕರರ ಕ್ಯಾಂಟೀನ್ ನಿರ್ಮಿಸಲು ರಸೀದಿ ನೀಡದೆ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾರೆ. ಸುಳ್ಳು ಭರವಸೆಗಳನ್ನು ನೀಡಿ ಹೆಸರಿಗೆ ತಕ್ಕಂತೆ ದೇವೇಂದ್ರ ಅವರ ಕುತಂತ್ರ ಹಲವು ನಡೆಸಿದ್ದಾರೆ ಎಂದು ಪ್ರಾಥಮಿಕ ಶಿಕ್ಷಕರ ಸಂಘದ ನೌಕರರ ತಾಲೂಕು ಅಧ್ಯಕ್ಷ ಕಿರಣ್ ಕುಮಾರ್ ಇದೆ ವೇಳೆ ಆರೋಪಿಸಿದರು.
ಜೂನಿಯರ್ ಕಾಲೇಜಿನ ಉಪನ್ಯಾಸಕ ಮಂಜುನಾಥ್ ಅಧ್ಯಕ್ಷ ಸ್ಥಾನದ ಆಕಾಂಕ್ಷೆ ಎಂದು ತಿಳಿದು ಅವರು ಸ್ಪರ್ಧಿಸಲೇಬಾರದೆಂದು ಅವರನ್ನು ಅನರ್ಹಗೊಳಿಸಿ ಪಾರದರ್ಶಕತೆ ಇಲ್ಲದೆ ಮತದಾರರ ಪಟ್ಟಿಯಿಂದಲೇ ಕೈ ಬಿಟ್ಟಿದ್ದಾರೆ. ಈ ಬಗ್ಗೆ ನೌಕರರ ಸಂಘದ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದರು ಯಾವುದೇ ಉತ್ತರ ಇನ್ನೂ ಬಂದಿಲ್ಲ ಎಂದು ಮಂಜುನಾಥ್ ಆರೋಪಿಸಿದರು.
ಇಡೀ ಚುನಾವಣೆ ಪ್ರಕ್ರಿಯೆ ಬಗ್ಗೆ ಸಾಕಷ್ಟು ಅನುಮಾನಗಳು ಇದ್ದು, ಚುನಾವಣಾ ಅಧಿಕಾರಿಗೆ ಈಗಾಗಲೇ ದೂರು ನೀಡಿದ್ದೇವೆ. ಆದರೂ ಚುನಾವಣೆಗೆ ಇನ್ನೇನು ಎರಡು ದಿನ ಬಾಕಿ ಇರುವಂತೆ ಮತ್ತಷ್ಟು ಅಕ್ರಮಗಳು ನಡೆಯುವ ಸಂಶಯವಿದೆ. ಹಾಗಾಗಿ ಈ ಬಗ್ಗೆ ಚುನಾವಣಾ ಅಧಿಕಾರಿ ಗಮನಹರಿಸಬೇಕು ಎಂದು ಹೇಮಂತ್ ಮತ್ತು ತಂಡದವರು ಒತ್ತಾಯಿಸಿದ್ದಾರೆ.
Leave a comment