ಶೃಂಗೇರಿ: ಪರವಾನಗಿ ಇಲ್ಲದೆ 407 ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರೋಪದ ಮೇಲೆ ಶೃಂಗೇರಿ ಪೊಲೀಸರು ಲಾರಿಯನ್ನು ಮರಳು ಸಮೇತ ವಶಪಡಿಸಿಕೊಂಡು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಆ.21ರಂದು ಸಂಜೆ ಶೃಂಗೇರಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಅಭಿಷೇಕ್.ಕೆ. ಅವರು ನಗರ ಗಸ್ತಿನಲ್ಲಿದ್ದಾಗ ಆಗುಂಬೆ ರಸ್ತೆಯಿಂದ ಶೃಂಗೇರಿ ಕಡೆಗೆ 407 ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ ಎಂಬ ಬಗ್ಗೆ ಭಾತ್ಮೀದಾರರಿಂದ ಮಾಹಿತಿ ಬಂದಿದೆ.
ಮಾಹಿತಿ ಆಧರಿಸಿ ಪೊಲೀಸ್ ಸಿಬ್ಬಂದಿ ಹಾಗೂ ಪಂಚರೊಂದಿಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಶೃಂಗೇರಿ-ಜಯಪುರ ರಾಜ್ಯ ಹೆದ್ದಾರಿ-27ರಲ್ಲಿ ಶಾರದಾ ಕಂಫರ್ಟ್ ಸಮೀಪ ಕೆಎ-18-ಎ-4964 ನೋಂದಣಿಯ ನೀಲಿ ಬಣ್ಣದ 407 ಲಾರಿಯನ್ನು ತಡೆದು ಪರಿಶೀಲಿಸಿದ್ದಾರೆ. ಲಾರಿಯ ಹಿಂಭಾಗದಲ್ಲಿ ಮರಳು ತುಂಬಿರುವುದು ಪತ್ತೆಯಾಗಿದೆ.
ಮರಳು ಸಾಗಾಟಕ್ಕೆ ಅಗತ್ಯ ಪರವಾನಗಿ ಇದೆಯೇ ಎಂದು ಚಾಲಕನನ್ನು ವಿಚಾರಿಸಿದಾಗ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದಾನೆ. ವಿಚಾರಣೆ ವೇಳೆ ಲಾರಿ ಮಾಲೀಕ ಆನೆಗುಂದ ಕುಮಾರ್ ಅವರ ಸೂಚನೆಯಂತೆ ಮೀಗಾದ ಮಾಲತಿ ಹಳ್ಳದಿಂದ ಮರಳನ್ನು ಅಕ್ರಮವಾಗಿ ತುಂಬಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದುದಾಗಿ ಚಾಲಕ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾರಿ ಚಾಲಕನನ್ನು ತಿಮ್ಮೇಶ್ (34) ಎಂದು ಗುರುತಿಸಲಾಗಿದೆ. ಪೊಲೀಸರು ಲಾರಿ ಹಾಗೂ ಅದರಲ್ಲಿದ್ದ ಮರಳನ್ನು ಪಂಚರ ಸಮಕ್ಷಮ ಮಹಜರ್ ಮೂಲಕ ಅಮಾನತುಗೊಳಿಸಿ, ಲಾರಿಯನ್ನು ಪೊಲೀಸ್ ವಸತಿ ಗೃಹದ ಆವರಣದಲ್ಲಿ ನಿಲ್ಲಿಸಿದ್ದಾರೆ. ಚಾಲಕ ತಿಮ್ಮೇಶ್ನನ್ನು ವಶಕ್ಕೆ ಪಡೆದು ಠಾಣೆಗೆ ಕರೆತರಲಾಗಿದೆ.
ಈ ಸಂಬಂಧ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ತಿಮ್ಮೇಶ್ ಹಾಗೂ ಮರಳನ್ನು ಅಕ್ರಮವಾಗಿ ತುಂಬಿಸಿಕೊಂಡು ಬರಲು ಸೂಚಿಸಿದ ಆರೋಪದ ಮೇರೆಗೆ ಕುಮಾರ್ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Illegal sand transportation: 407 lorries seized driver taken into police custody
Leave a comment