ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಕುರಿತ 7ನೇ ಕರಡು ಅಧಿಸೂಚನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಸುಮಾರು 137 ಗ್ರಾಮಗಳನ್ನು ಸೇರಿಸಿರುವುದಕ್ಕೆ ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಉಪಗ್ರಹ ಆಧಾರಿತ ನಕ್ಷೆಯ ಬದಲಿಗೆ ಭೌತಿಕ ಸರ್ವೆ ನಡೆಸಿ ಅರಣ್ಯ, ತೋಟ, ಕೃಷಿ ಪ್ರದೇಶ ಹಾಗೂ ಗ್ರಾಮಗಳ ಗಡಿಯನ್ನು ನಿಖರವಾಗಿ ಗುರುತಿಸಿದ ಬಳಿಕವೇ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.
ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ವಿಜಯ್ ಕುಮಾರ್, ಈ ಹಿಂದೆ 6ನೇ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಿದ್ದರೂ ಅವುಗಳನ್ನು ಸಮರ್ಪಕವಾಗಿ ಪರಿಗಣಿಸದೆ 7ನೇ ಅಧಿಸೂಚನೆ ಹೊರಡಿಸಲಾಗಿದೆ ಎಂದು ಆರೋಪಿಸಿದರು.
“ಪ್ರಸ್ತುತ ಕರಡು ಅಧಿಸೂಚನೆಯಲ್ಲಿ ಗುರುತಿಸಿರುವ ನಕ್ಷೆ ಉಪಗ್ರಹ ಆಧಾರಿತವಾಗಿದೆ. ಇದರಿಂದ ಕಾಫಿ, ಅಡಿಕೆ, ರಬ್ಬರ್ ಸೇರಿದಂತೆ ತೋಟಗಾರಿಕಾ ಬೆಳೆಗಳ ಪ್ರದೇಶಗಳೂ ಸ್ವಾಭಾವಿಕ ಅರಣ್ಯದ ವ್ಯಾಪ್ತಿಯೊಳಗೆ ಸೇರಿರುವಂತೆ ತೋರಿಸಲಾಗಿದೆ. ಹೀಗಾಗಿ ಭೂಮಿಯ ವಾಸ್ತವ ಸ್ಥಿತಿಯನ್ನು ತಿಳಿಯಲು ಭೌತಿಕವಾಗಿ ಭೂಮಾಪನ ನಡೆಸಬೇಕು. ಅರಣ್ಯ–ಗ್ರಾಮ, ಅರಣ್ಯ–ತೋಟ ಹಾಗೂ ಅಧಿಕೃತ ಸ್ವಾಭಾವಿಕ ಅರಣ್ಯದ ಗಡಿಗಳನ್ನು ನಿಖರವಾಗಿ ಗುರುತಿಸಬೇಕು. ರೈತರ ಜಮೀನು, ಗ್ರಾಮಗಳು, ಶಾಲೆಗಳು, ಆಟದ ಮೈದಾನಗಳು ಹಾಗೂ ಸ್ಮಶಾನಗಳನ್ನು ಗುರುತಿಸಿದ ನಂತರ ಸೀಮಿತ ಪ್ರದೇಶಗಳಿಗೆ ಮಾತ್ರ ESA ಅಧಿಸೂಚನೆ ಅನ್ವಯಿಸಬೇಕು” ಎಂದು ಅವರು ಹೇಳಿದರು.
ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಸಾವಿರಾರು ಬಡವರು ಆಶ್ರಯ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ನಿವೇಶನ ರಹಿತರ ಪಟ್ಟಿಯೂ ಸಿದ್ಧವಾಗಿದೆ. ಆದರೆ ಅರಣ್ಯ ಮತ್ತು ಕಂದಾಯ ಇಲಾಖೆಯ ಸಮಸ್ಯೆಗಳಿಂದ ಸಾವಿರಾರು ಎಕರೆ ಕಂದಾಯ ಭೂಮಿ ಲಭ್ಯವಿದ್ದರೂ ಸುಮಾರು 25 ವರ್ಷಗಳಿಂದ ಅರ್ಹರಿಗೆ ನಿವೇಶನ ನೀಡಲು ಸಾಧ್ಯವಾಗಿಲ್ಲ ಎಂದು ವಿಜಯ್ ಕುಮಾರ್ ತಿಳಿಸಿದರು.
ಇತ್ತೀಚೆಗೆ ಎಸ್‌ಐಟಿ ಮೂಲಕ ಜಂಟಿ ಸರ್ವೆ ನಡೆಸಿ ನಿವೇಶನ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ಈ ಸರ್ವೆ ಪೂರ್ಣಗೊಳಿಸಿ ಬಡವರಿಗೆ ಕನಿಷ್ಠ 20×40 ಅಳತೆಯ ನಿವೇಶನಗಳನ್ನು ನೀಡಿದ ಬಳಿಕವೇ ESA ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು.
ಅದೇ ರೀತಿ ಭೂಹೀನರಿಗೆ ಸರ್ಕಾರದಿಂದ ಮಂಜೂರು ಮಾಡಲಾಗುವ ನಮೂನೆ 50, 53, 57 ಹಾಗೂ 94(ಸಿ) ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸಕ್ರಮಗೊಳಿಸಿದ ನಂತರವೇ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಸ್ವಾಭಾವಿಕ ಅರಣ್ಯದ ಗಡಿಯಿಂದ ಬಫರ್ ವಲಯವನ್ನು ಶೂನ್ಯ ಕಿ.ಮೀ.ಗೆ ನಿಗದಿಪಡಿಸಬೇಕು. ESA ವ್ಯಾಪ್ತಿಯ ಅಕ್ಕಪಕ್ಕದಲ್ಲಿರುವ ಹಳ್ಳಿಗಳು ಹಾಗೂ ರೈತರ ಕೃಷಿ ಚಟುವಟಿಕೆಗಳಿಗೆ ಅನಗತ್ಯ ನಿರ್ಬಂಧ ವಿಧಿಸಬಾರದು. ಗ್ರಾಮಗಳ ಅಭಿವೃದ್ಧಿ ಹಾಗೂ ರೈತರ ಕೃಷಿ ಪದ್ಧತಿಗಳಿಗೆ ಅಗತ್ಯ ಸ್ವಾಯತ್ತತೆ ನೀಡಬೇಕು ಎಂದು ವಿಜಯ್ ಕುಮಾರ್ ಹೇಳಿದರು.
“ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಾವಿರಾರು ವರ್ಷಗಳಿಂದ ಜನರು ಅರಣ್ಯ, ಜಲಮೂಲ ಹಾಗೂ ವನ್ಯಜೀವಿಗಳನ್ನು ರಕ್ಷಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿ ನೂರಾರು ಗ್ರಾಮಗಳು ಮತ್ತು ಗ್ರಾಮ ಪಂಚಾಯಿತಿಗಳಿವೆ. ಮುಂದಿನ ವರ್ಷಗಳಲ್ಲಿ ಹೆಚ್ಚಾಗುವ ಜನಸಂಖ್ಯೆಯ ಅಗತ್ಯತೆ ಹಾಗೂ ಗೋಮಾಳಗಳಿಗಾಗಿ ಅಗತ್ಯ ಕಂದಾಯ ಭೂಮಿಯನ್ನು ಮುಂಚಿತವಾಗಿ ಮೀಸಲಿಡಬೇಕು. ಬಳಿಕವೇ ESA ಅಧಿಸೂಚನೆ ಹೊರಡಿಸಬೇಕು” ಎಂದು ಅವರು ತಿಳಿಸಿದರು.
ಅಧಿಕೃತ ಸ್ವಾಭಾವಿಕ ಅರಣ್ಯ ಪ್ರದೇಶಗಳ ಸುತ್ತ ಮಾನವ–ವನ್ಯಜೀವಿ ಸಂಘರ್ಷ ತಡೆಯಲು ಸೋಲಾರ್ ಬೇಲಿ, ಆನೆ ತಡೆ ಕಂದಕ, ರೈಲ್ವೆ ಬ್ಯಾರಿಕೇಡ್‌ಗಳಂತಹ ಸುರಕ್ಷತಾ ವ್ಯವಸ್ಥೆಗಳನ್ನು ನಿರ್ಮಿಸಬೇಕು. ಇದರಿಂದ ರೈತರು ಹಾಗೂ ಗ್ರಾಮಸ್ಥರನ್ನು ಪ್ರಾಣಹಾನಿ ಮತ್ತು ಬೆಳೆ ಹಾನಿಯ ಆತಂಕದಿಂದ ರಕ್ಷಿಸಬೇಕು ಎಂದು ಅವರು ಆಗ್ರಹಿಸಿದರು.
ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಬಗೆಹರಿಯದೆ ಉಳಿದಿರುವ ಇನಾಂ ಭೂಮಿ, ಸೊಪ್ಪಿನ ಬೆಟ್ಟ ಭೂಮಿ, ಭದ್ರಾ ಹಿನ್ನೀರಿನ ರೈತರ ಮರುವಸತಿ ಭೂಮಿ ಹಾಗೂ ಮಸಗಲಿ ಅರಣ್ಯವಾಸಿಗಳ ಸಮಸ್ಯೆ ಸೇರಿದಂತೆ ವಿವಿಧ ಅರಣ್ಯ ಮತ್ತು ಕಂದಾಯ ಸಮಸ್ಯೆಗಳನ್ನು ಮೊದಲು ಪರಿಹರಿಸಬೇಕು. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿದ ಬಳಿಕವೇ ESA ಅಧಿಸೂಚನೆ ಹೊರಡಿಸಬೇಕು ಎಂದು ವಿಜಯ್ ಕುಮಾರ್ ಒತ್ತಾಯಿಸಿದರು.
“ನಮ್ಮ ನ್ಯಾಯಸಮ್ಮತ ಆಕ್ಷೇಪಣೆಗಳನ್ನು ಪರಿಗಣಿಸಿ, ವಾಸ್ತವ ಪರಿಸ್ಥಿತಿಯನ್ನು ಆಧರಿಸಿ ಪರಿಸರ ಸೂಕ್ಷ್ಮ ಪ್ರದೇಶವನ್ನು ಗುರುತಿಸಬೇಕು. ಜನವಸತಿ, ಕೃಷಿ ಮತ್ತು ತೋಟಗಾರಿಕಾ ಪ್ರದೇಶಗಳನ್ನು ಸ್ವಾಭಾವಿಕ ಅರಣ್ಯದೊಂದಿಗೆ ಗೊಂದಲಗೊಳಿಸಬಾರದು” ಎಂದು ಅವರು ಹೇಳಿದರು.
ಜುಲೈ 27ರಂದು 7ನೇ ಕರಡು ಅಧಿಸೂಚನೆ ಹೊರಡಿಸಿರುವುದು ಪಶ್ಚಿಮ ಘಟ್ಟ ಪ್ರದೇಶದ ಜನರು, ರೈತರು ಹಾಗೂ ವಿವಿಧ ವರ್ಗಗಳ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಜಿಲ್ಲಾ ಒಕ್ಕಲಿಗ ಸಂಘದ ಟಿ. ರಾಜಶೇಖರ್ ಹೇಳಿದರು.
“ಇದು ಕೇವಲ ರೈತರ ಸಮಸ್ಯೆಯಲ್ಲ. ESA ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ವಾಸಿಸುವ ಕೂಲಿ ಕಾರ್ಮಿಕರು, ಶ್ರಮಿಕರು ಸೇರಿದಂತೆ ಎಲ್ಲ ಜನವರ್ಗಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆಯಿದೆ. ರೈತರ ಜಮೀನಿನ ವಿಚಾರದ ಜೊತೆಗೆ ಜನವಸತಿ ಮತ್ತು ಗ್ರಾಮಗಳ ಅಭಿವೃದ್ಧಿಯ ಮೇಲೂ ಪರಿಣಾಮ ಉಂಟಾಗಬಹುದು” ಎಂದು ಅವರು ಹೇಳಿದರು.
ಕರಡು ಅಧಿಸೂಚನೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಲವು ನಿರ್ಬಂಧಗಳನ್ನು ಉಲ್ಲೇಖಿಸಲಾಗಿದೆ. ರಸ್ತೆ ಸೇರಿದಂತೆ ಸರ್ಕಾರದ ಅನುದಾನಿತ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಹ ಅನುಮತಿ ಅಗತ್ಯವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಹೀಗಾಗಿ ಅಧಿಸೂಚನೆಯಲ್ಲಿರುವ ಅಂಶಗಳನ್ನು ಜನಪ್ರತಿನಿಧಿಗಳು ಮತ್ತು ಸರ್ಕಾರ ಗಂಭೀರವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಪಶ್ಚಿಮ ಘಟ್ಟ ವ್ಯಾಪ್ತಿಗೆ ಸಂಬಂಧಿಸಿದಂತೆ ಕೇರಳ ಸರ್ಕಾರ ಸ್ಥಳೀಯ ಪರಿಸ್ಥಿತಿಯನ್ನು ಪರಿಗಣಿಸಿ ತನ್ನದೇ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಕ್ರಮ ಕೈಗೊಂಡಿದೆ. ಜನವಸತಿ, ಕೃಷಿ ಪ್ರದೇಶ ಹಾಗೂ ವಾಸ್ತವ ಅರಣ್ಯ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸುವ ಮೂಲಕ ಸ್ಥಳೀಯರ ಹಿತಾಸಕ್ತಿಯನ್ನು ರಕ್ಷಿಸುವ ಪ್ರಯತ್ನ ಮಾಡಲಾಗಿದೆ ಎಂದು ರಾಜಶೇಖರ್ ಹೇಳಿದರು.
“ಪಶ್ಚಿಮ ಘಟ್ಟ ವ್ಯಾಪ್ತಿಯ ಆರು ರಾಜ್ಯಗಳ ಪೈಕಿ ಕೇರಳ ಸರ್ಕಾರ ಸ್ಥಳೀಯ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತನ್ನ ನಿಲುವು ರೂಪಿಸಿಕೊಂಡಿದೆ. ಕರ್ನಾಟಕದಲ್ಲಿಯೂ ಇದೇ ರೀತಿಯಲ್ಲಿ ವಾಸ್ತವ ಪರಿಸ್ಥಿತಿಯನ್ನು ಆಧರಿಸಿ ನಿರ್ಧಾರ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದರು.
ESA ಕುರಿತು 7ನೇ ಅಧಿಸೂಚನೆ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಕಾನೂನುಬದ್ಧವಾಗಿ ಹೋರಾಟ ನಡೆಸುವ ಅಗತ್ಯವಿದೆ. ಜಿಲ್ಲೆಯ ಸಂಸದರು ಹಾಗೂ ಎಲ್ಲ ಜನಪ್ರತಿನಿಧಿಗಳು ಈ ವಿಚಾರವನ್ನು ಸಂಸತ್‌ನಲ್ಲಿ ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದು ರಾಜಶೇಖರ್ ಒತ್ತಾಯಿಸಿದರು.
“ಇದು ಪ್ರಾಥಮಿಕ ಹಂತದಲ್ಲಿರುವ ವಿಚಾರವಲ್ಲ. ಈಗಾಗಲೇ ಏಳು ಕರಡು ಅಧಿಸೂಚನೆಗಳು ಬಂದಿವೆ. ಆದ್ದರಿಂದ ಕಾನೂನುಬದ್ಧವಾಗಿ ಎದುರಿಸಬೇಕಾಗಿದೆ. ಸಂಸತ್‌ನಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿ ಜನರ ಹಕ್ಕುಗಳನ್ನು ರಕ್ಷಿಸುವ ಕೆಲಸವಾಗಬೇಕು. ಇಲ್ಲದಿದ್ದರೆ ಅಧಿಕಾರಿಗಳು ಅಧಿಸೂಚನೆಯಂತೆ ತಮ್ಮ ಕೆಲಸ ಮುಂದುವರಿಸುತ್ತಾರೆ. ಈ ಅಧಿಸೂಚನೆ ಪಶ್ಚಿಮ ಘಟ್ಟ ಪ್ರದೇಶದ ಜನರಿಗೆ ಮರಣ ಶಾಸನವಾಗುವ ಅಪಾಯವಿದೆ” ಎಂದು ಅವರು ಎಚ್ಚರಿಸಿದರು.
ಕೇಂದ್ರ ಸರ್ಕಾರದ ಪರಿಷ್ಕರಣೆ ಸಮಿತಿಯು ಕರ್ನಾಟಕದ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರ ಅಹವಾಲುಗಳನ್ನು ಸಮಗ್ರವಾಗಿ ಆಲಿಸದೆ ವರದಿ ಸಿದ್ಧಪಡಿಸಿರುವುದು ಸರಿಯಲ್ಲ. ರಾಜ್ಯ ಸರ್ಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಕೇಂದ್ರದಿಂದ ಅಗತ್ಯ ಕಾಲಾವಕಾಶ ಪಡೆದು ಸಮಗ್ರ ಭೌತಿಕ ಸರ್ವೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬೆಳೆಗಾರರ ಒಕ್ಕೂಟ (ಕೆಜಿಎಫ್) ಅಧ್ಯಕ್ಷ ರತೀಶ್, ಜಿಲ್ಲಾ ಒಕ್ಕಲಿಗ ಸಂಘದ ಟಿ. ರಾಜಶೇಖರ್, ಕೆರೆಮಕ್ಕಿ ರಮೇಶ್, ಕೆ.ಕೆ. ರಘು, ಮೋಹನ್ ಕುಮಾರ್, ರವಿ ಕಾಮೇನಹಳ್ಳಿ ಹಾಗೂ ಕುಮಾರಸ್ವಾಮಿ ಉಪಸ್ಥಿತರಿದ್ದರು.
ESA draft notification: Insistence on final notification only after physical survey
Leave a comment