ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ ವಿಮೆಗೆ ನೋಂದಣಿ ಹೆಚ್ಚು ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬುಧವಾರ ಶೃಂಗೇರಿ ತಾಲ್ಲೂಕಿನ ಮಳೆಯಿಂದ ಹಾನಿಗೆ ಒಳಗಾದ ಕೃಷಿ ಭೂಮಿ, ತಡೆಗೋಡೆಗಳು ಹಾಗೂ ಬೆಟ್ಟಗೆರೆ-ಕೆರೆಮನೆ ರಸ್ತೆ, ವೈಕುಂಠಪುರ-ಗುಂಡ್ರೆ ರಸ್ತೆ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಈ ಸೂಚನೆ ನೀಡಿದರಲ್ಲದೆ, ಕೆಲವು ಭತ್ತದ ಗದ್ದೆಗಳು ಮಳೆಯಿಂದ ಹಾನಿಗೆ ಒಳಗಾಗಿದ್ದು, ರೈತರು ಬೆಳೆ ವಿಮೆ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದಲ್ಲಿ ಅನುಕೂಲವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ತಾಲ್ಲೂಕಿನಲ್ಲಿ ಮಳೆಯಿಂದ ಹಾನಿಗೆ ಒಳಗಾದ ಬೆಳೆಗಳ ಸಂಪೂರ್ಣ ಮಾಹಿತಿ ಕಲೆಹಾಕಿ ಹಾನಿಯ ವರದಿ ನೀಡುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ತೋಟಗಾರಿಕೆ ಬೆಳೆಗಳಾದ ಅಡಿಕೆ, ಕಾಳುಮೆಣಸು, ಕಾಫಿ, ಸಂಬಾರ ಸಸಿಗಳನ್ನು ನರ್ಸರಿಯಲ್ಲಿ ಬೆಳೆಸಿ ರೈತರಿಗೆ ವಿತರಿಸಬೇಕು. ತಾಲ್ಲೂಕಿನಲ್ಲಿ ನರ್ಸರಿಗೆ ಜಾಗದ ಕೊರತೆ ಇದ್ದಲ್ಲಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಕಳುಹಿಸಿದಲ್ಲಿ ಅಗತ್ಯ ಜಾಗವನ್ನು ಒದಗಿಸಲಾಗುವುದು ಎಂದರು.
ಇಲ್ಲಿನ ಆಸ್ಪತ್ರೆಯು ಪಟ್ಟಣದಿಂದ ೨ ಕಿ.ಮೀ.ಗಳಷ್ಟು ಅಂತರದಲ್ಲಿದ್ದು, ಕೂಡಲೇ ಅಲ್ಲಿನ ಮಿಕ್ಕ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಪಟ್ಟಣದ ಮಧ್ಯದಲ್ಲಿರುವ ಹಳೆಯ ಆಸ್ಪತ್ರೆ ಕಟ್ಟಡದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಬೇಕು ಎಂದು ಸಲಹೆ ನೀಡಿದರು.
ಪಟ್ಟಣದಲ್ಲಿ ನಾಲ್ಕು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಪಟ್ಟಣ ಪಂಚಾಯಿತಿ ಕೂಡಲೇ ಜಾಗ ಗುರುತಿಸಿ ವರದಿ ನೀಡಬೇಕು. ಇಡೀ ತಾಲ್ಲೂಕಿನಲ್ಲಿ ೧೦೫ ಅಂಗನವಾಡಿ ಕೇಂದ್ರಗಳಿದ್ದು, ಈ ನಾಲ್ಕು ಅಂಗನವಾಡಿ ಕೇಂದ್ರಗಳಿಗೆ ಮಾತ್ರ ಕಟ್ಟಡವಿಲ್ಲದೇ ಇರುವುದರಿಂದ ಪಟ್ಟಣ ಪಂಚಾಯಿತಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಇಂದು ಶಾಲಾ ವಿದ್ಯಾರ್ಥಿಗಳು ಕುರುಕಲು ತಿಂಡಿಗಳಿಗೆ ಮೊರೆ ಹೋಗುತ್ತಿರುವುದರಿಂದ ಅವರಿಗೆ ವಿಟಮಿನ್ ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಮೊಟ್ಟೆ ಮತ್ತು ಸೊಪ್ಪಿನ ಪದಾರ್ಥಗಳನ್ನು ತಪ್ಪದೇ ನೀಡಬೇಕು ಎಂದು ಸೂಚನೆ ನೀಡಿದರು.
ಶೃಂಗೇರಿಯು ದೇಶದ ಅತ್ಯಂತ ಪ್ರಮುಖ ಯಾತ್ರಾಸ್ಥಳವಾಗಿದ್ದು, ಈ ಸ್ಥಳದ ಅಭಿವೃದ್ಧಿಯಾಗಬೇಕಲ್ಲದೆ, ಸುತ್ತಮುತ್ತಲಲ್ಲಿರುವ ಇತರ ಪ್ರೇಕ್ಷಣೀಯ ಸ್ಥಳಗಳನ್ನು ಸಹ ಗುರುತಿಸಿ ಅಭಿವೃದ್ಧಿಪಡಿಸಬೇಕು ಎಂದರಲ್ಲದೆ, ಪಟ್ಟಣದ ಭಾರತಿ ಬೀದಿ ಮತ್ತು ಹರಿಹರ ಬೀದಿಗಳು ಹೊಂಡಗಳಿಂದ ತುಂಬಿದ್ದು, ತಕ್ಷಣ ಅವುಗಳನ್ನು ಮುಚ್ಚಿಸಿ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ಈ ಸಮಸ್ಯೆಗಳನ್ನು ಬಗೆಹರಿಸಲು ಖುದ್ದು ಸ್ಪಂದಿಸುವುದಾಗಿಯೂ, ಈ ಎಲ್ಲ ಕಾರ್ಯಗಳಲ್ಲಿ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದೂ ಹೇಳಿದರು.
ತಾಲ್ಲೂಕಿನ ೩೪ ಗ್ರಾಮಗಳಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಉಳಿದ ೧೫ ಗ್ರಾಮಗಳ ಸರ್ವೇಯನ್ನು ಇನ್ನು ೧೫ ದಿನಗಳಲ್ಲಿ ಪೂರ್ಣಗೊಳಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಯ ಅವಶ್ಯಕತೆ ಇರುವುದರಿಂದ ಸಾಮಾಜಿಕ ಅರಣ್ಯ ಇಲಾಖೆಯ ಸಿಬ್ಬಂದಿ ಬಳಸಿಕೊಳ್ಳಬಹುದಾಗಿದ್ದು, ತಕ್ಷಣವೇ ಈ ಸಂಬಂಧ ಆದೇಶ ಹೊರಡಿಸುವುದಾಗಿ ತಿಳಿಸಿದರು.
ತಹಸೀಲ್ದಾರ್ ಅನೂಪ್ ಸಂಜೋಗ್, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಎಚ್.ಸುದೀಪ್, ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
District Collector directs to increase crop insurance registration
Leave a comment