ಚಿಕ್ಕಮಗಳೂರು: ವಿಶ್ವಕರ್ಮ ಸಮುದಾಯ ಎಲ್ಲ ರಂಗಗಳಲ್ಲೂ ಮುಂಚೂಣಿಗೆ ಬರಬೇಕು ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಗುರುವಾರ ನಗರದ ಕುವೆಂಪು ಕಲಾಂಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ವಿಶ್ವಕರ್ಮ ಜಯಂತಿ ಆಚರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ ಇಂದಿನ ತಾಂತ್ರಿಕ ಯುಗದಲ್ಲಿ ದಿಕ್ಸೂಚಿ (ಕಂಪಾಸ್), ಸ್ಕೇಲ್ ಸೇರಿದಂತೆ ಅನೇಕ ಆಧುನಿಕ ಉಪಕರಣಗಳಿವೆ. ಆದರೆ, ಯಾವುದೇ ತಾಂತ್ರಿಕ ಪರಿಕರಗಳಿಲ್ಲದ ಕಾಲದಲ್ಲೇ ಬೇಲೂರಿನ ಶಿಲ್ಪಕಲೆಯನ್ನು ವಿಶ್ವವೇ ಬೆರಗಾಗುವಂತೆ ವಿಶ್ವಕರ್ಮರು ನಿರ್ಮಿಸಿದ್ದಾರೆ. ಇಂದ್ರಪ್ರಸ್ಥ, ದ್ವಾರಕೆ, ಲಂಕೆ ಸೇರಿದಂತೆ ದೇವತೆಗಳ ಆಯುಧ-ರಥಗಳನ್ನು ನಿರ್ಮಿಸಿದ ಇತಿಹಾಸ ಈ ಸಮಾಜಕ್ಕಿದೆ. ಆದರೂ, ಇತಿಹಾಸದ ಕಾಲಗರ್ಭದಲ್ಲಿ ಶಿಲ್ಪಿಗಳ ಶ್ರಮ ಮರೆಯಾಗಿ, ರಾಜ-ರಾಣಿಯರ ಹೆಸರುಗಳು ಮಾತ್ರ ಉಳಿದುಕೊಂಡಿರುವುದು ವಿಷಾದನೀಯ ಎಂದರು.
೨೧ನೇ ಶತಮಾನದಲ್ಲೂ ಅಸ್ಪೃಶ್ಯತೆ ಹಾಗೂ ಸಾಮಾಜಿಕ ಅಸಮಾನತೆಯ ನೆರಳು ಉಳಿದಿರುವುದು ಬೇಸರದ ಸಂಗತಿ. ವಿಶ್ವಕರ್ಮ ಸಮಾಜದ ಬಂಧುಗಳು ಕೇವಲ ಸಾಂಪ್ರದಾಯಿಕ ಪಂಚ ಕಸುಬುಗಳಿಗೆ ಸೀಮಿತರಾಗಬಾರದು. ಶಿಕ್ಷಣ, ಐಎಎಸ್, ಐಪಿಎಸ್, ರಾಜಕೀಯ ಹಾಗೂ ಆರ್ಥಿಕ ರಂಗಗಳಲ್ಲಿ ಮುಂಚೂಣಿಗೆ ಬರಬೇಕು. ಆರ್ಥಿಕ ಹಾಗೂ ರಾಜಕೀಯ ಸಬಲೀಕರಣಗೊಂಡಾಗ ಮಾತ್ರ ಸಮಾಜದಲ್ಲಿ ದೂರ ಉಳಿಯುವ ಸ್ಥಿತಿ ತಪ್ಪುತ್ತದೆ ಎಂದರು.
ಶಾಸಕ ಹೆಚ್.ಡಿ.ತಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಕರ್ಮ ಜಯಂತಿ ಎನ್ನುವುದು ಕೇವಲ ಒಂದು ಧಾರ್ಮಿಕ ಆಚರಣೆಗೆ ಸೀಮಿತವಾದ ದಿನವಲ್ಲ. ಬದಲಾಗಿ, ಇದು ಭಾರತೀಯ ತಾಂತ್ರಿಕ ಪರಂಪರೆ, ಶ್ರಮ ಸಂಸ್ಕೃತಿ ಹಾಗೂ ಅಪಾರ ಕೌಶಲ್ಯವನ್ನು ಸ್ಮರಿಸುವ ಪವಿತ್ರ ದಿನವಾಗಿದೆ ಎಂದರು.
ಇಡೀ ಜಗತ್ತನ್ನು ಸೃಷ್ಟಿಸಿದ ಬ್ರಹ್ಮನ ಪುತ್ರರಾದ ವಿಶ್ವಕರ್ಮ ಆಚಾರ್ಯರು ಭಾರತೀಯ ವಾಸ್ತುಶಿಲ್ಪ, ಕಲೆ ಮತ್ತು ತಂತ್ರಜ್ಞಾನಕ್ಕೆ ಬಲವಾದ ಅಡಿಪಾಯ ಹಾಕಿಕೊಟ್ಟಿದ್ದಾರೆ. ಇಂದಿನ ಆಧುನಿಕ ಯುಗದಲ್ಲೂ ವಿಶ್ವಕರ್ಮ ಜನಾಂಗದ ಪಂಚ ಕಸುಬುಗಳಾದ ಕಬ್ಬಿಣ, ಮರ, ಚಿನ್ನ-ಬೆಳ್ಳಿ, ಶಿಲ್ಪಕಲೆ ಹಾಗೂ ಕಲ್ಲಿಗೆ ಜೀವ ತುಂಬುವ ಕಾರ್ಯಗಳು ಅತ್ಯಂತ ಶ್ರೇಷ್ಠವಾದವುಗಳಾಗಿವೆ ಎಂದರು.
ವಿಶ್ವಕರ್ಮ ಆಚಾರ್ಯರ ಕೊಡುಗೆ ಹಾಗೂ ಶಿಲ್ಪಕಲೆಯ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ, ೨೦೧೫ ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿವರ್ಷ ಸೆಪ್ಟೆಂಬರ್ ೧೭ ರಂದು ರಾಜ್ಯಾದ್ಯಂತ ವಿಶ್ವಕರ್ಮ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆದೇಶ ಹೊರಡಿಸಿದ್ದರು ಎಂದು ಶಾಸಕರು ಸ್ಮರಿಸಿದರು.
ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ದೇಶದ ಇತಿಹಾಸ, ಸಂಸ್ಕೃತಿ ಹಾಗೂ ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು ಮಕ್ಕಳಿಗೆ ಮತ್ತು ಯುವಜನರಿಗೆ ಸಮುದಾಯದ ಹಾಗೂ ದೇಶದ ಪರಂಪರೆಯನ್ನು ತಿಳಿಸಿಕೊಡುವ ಕೆಲಸವಾಗಬೇಕು ಎಂದರು.
ಹಿಂದುಳಿದ ವರ್ಗಗಳು ಸಾಂಸ್ಕೃತಿಕ ಹಾಗೂ ಆರ್ಥಿಕವಾಗಿ ಮುನ್ನೆಲೆಗೆ ಬರಬೇಕಾದರೆ ರಾಜಕೀಯವಾಗಿ ಸಬಲರಾಗುವುದು ಅಗತ್ಯ. ಪ್ರತಿಯೊಂದು ಸರ್ಕಾರವೂ ಹಿಂದುಳಿದ ಸಮುದಾಯಗಳ ಏಳಿಗೆಗೆ ಹೆಚ್ಚಿನ ಗಮನ ಹರಿಸಬೇಕು. ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ಮಟ್ಟದಲ್ಲಿ ಸಮಾಜದ ಹೆಣ್ಣುಮಕ್ಕಳು ಹಾಗೂ ಯುವಕರು ಸ್ಪರ್ಧಿಸಿ ನಾಯಕತ್ವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಬೇಲೂರು, ಹಳೆಬೀಡು, ಬೆಳವಾಡಿ ಹಾಗೂ ಅಮೃತಪುರದ ದೇವಸ್ಥಾನಗಳಲ್ಲಿರುವ ಶಿಲ್ಪಕಲೆಗಳು ಜಗತ್ತೇ ಮೆಚ್ಚುವಂತಿವೆ. ಯಾವುದೇ ತಾಂತ್ರಿಕ ಸೌಲಭ್ಯಗಳಿಲ್ಲದ ಕಾಲದಲ್ಲೂ ಅದ್ಭುತ ಕಲಾಕೃತಿಗಳನ್ನು ಕೆತ್ತಿದ ಶಿಲ್ಪಿಗಳ ಸಾಹಸ ಸಮಾಜಕ್ಕೆ ಗೌರವ ತಂದಿದೆ. ಗೃಹಪ್ರವೇಶದಿಂದ ಹಿಡಿದು ದೇವಸ್ಥಾನಗಳ ವಿಗ್ರಹ ಪ್ರಾಣ ಪ್ರತಿಷ್ಠಾಪನೆವರೆಗೆ ವಿಶ್ವಕರ್ಮ ಆಚಾರ್ಯರ ಕೊಡುಗೆ ಪ್ರತಿಯೊಬ್ಬರ ಜೀವನದಲ್ಲೂ ಅಡಗಿದೆ ಎಂದರು.
ಸಾಮಾಜಿಕ ಚಿಂತಕ ಹರ್ಷವರ್ಧನ್ ನಿಟ್ಟೆ ಉಪನ್ಯಾಸ ನೀಡಿ, ವಿಶ್ವಕರ್ಮ ಸಮುದಾಯವು ಕೇವಲ ಗತಕಾಲದ ಇತಿಹಾಸ ಮತ್ತು ಪರಂಪರೆಯನ್ನು ಸ್ಮರಿಸಿಕೊಳ್ಳುವುದಕ್ಕೆ ಸೀಮಿತವಾಗದೆ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ರಾಜಕೀಯ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸ್ವಂತ ನಾಯಕತ್ವ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ವಿಶ್ವದ ವಿವಿಧ ದೇಶಗಳ ಜನರು ಇಂದಿಗೂ ಭಾರತಕ್ಕೆ ಭೇಟಿ ನೀಡಿ ನಮ್ಮಲ್ಲಿರುವ ಶಿಲ್ಪಕಲೆಯನ್ನು ವೀಕ್ಷಿಸುತ್ತಿದ್ದಾರೆ ಎಂದರೆ, ಅದಕ್ಕೆ ವಿಶ್ವಕರ್ಮ ಸಮುದಾಯ ನೀಡಿದ ಕೊಡುಗೆಯೇ ಕಾರಣ. ೧೨ನೇ ಶತಮಾನದಲ್ಲಿ ನಿರ್ಮಾಣಗೊಂಡ ಅಮೃತಪುರದ ಅಮೃತೇಶ್ವರ ದೇವಾಲಯ, ಬೇಲೂರು ಹಾಗೂ ಹಳೆಬೀಡಿನ ಕಲ್ಲಿನ ಕೆತ್ತನೆಗಳು ಭಾರತದ ಜೀವಂತ ಇತಿಹಾಸವಾಗಿವೆ. ಅಂದಿನ ಕಾಲದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಥವಾ ಸಿಎಡಿ ವಿನ್ಯಾಸ ತಂತ್ರಜ್ಞಾನಗಳಿರಲಿಲ್ಲ. ಯಾವುದೇ ವೈಜ್ಞಾನಿಕ ಉಪಕರಣಗಳಿಲ್ಲದಿದ್ದರೂ ಅತ್ಯಂತ ಅದ್ಭುತ ಕಲಾಕೃತಿಗಳನ್ನು ಕೆತ್ತಿದ ಹೆಗ್ಗಳಿಕೆ ನಮ್ಮ ಪೂರ್ವಜರದ್ದು ಎಂದು ಬಣ್ಣಿಸಿದರು.
ಜಯಂತಿಗಳ ಆಚರಣೆ ಎಂದರೆ ಕೇವಲ ಇತಿಹಾಸ ಮಾತನಾಡುವ ಹಾಗೂ ವೇದಿಕೆ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಸ್ವಯಂ ವಿಮರ್ಶೆ ಮಾಡಿಕೊಳ್ಳುವ ಮೂಲಕ ‘ಮುಂದಿನ ದಿನಗಳಲ್ಲಿ ಸಮುದಾಯದ ಕೊಡುಗೆ ಏನು?’ ಎಂಬುದರ ಕುರಿತು ಚರ್ಚೆಯಾಗಬೇಕು. ರಾಜಕೀಯವಾಗಿ ನಮ್ಮ ಸಮುದಾಯದ ಧ್ವನಿಯಾಗಬಲ್ಲ ನಾಯಕರನ್ನು ನಾವೇ ಗುರುತಿಸಿ ಬೆಳೆಸಬೇಕು. ಸಂಘ ಸಂಸ್ಥೆಗಳು ಒಗ್ಗಟ್ಟಿನಿಂದ ಅರ್ಹ ನಾಯಕರಿಗೆ ಬೆಂಬಲ ನೀಡಿದಾಗ ಮಾತ್ರ ರಾಜಕೀಯ ಸಶಕ್ತೀಕರಣ ಸಾಧ್ಯ ಎಂದರು.
ಹಿಂದಿನ ಕಾಲದ ಪಂಚ ಕಸುಬುಗಳಾದ ಕಬ್ಬಿಣ, ಚಿನ್ನ-ಬೆಳ್ಳಿ, ಕಂಚು ಹಾಗೂ ಮರದ ಕೆಲಸಗಳು ಅಂದಿನ ಪ್ರಮುಖ ಕೈಗಾರಿಕಾ ಕ್ಷೇತ್ರಗಳಾಗಿದ್ದವು. ಆದರೆ, ಕಾಲಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ನಾವು ಸ್ವಲ್ಪ ಹಿನ್ನಡೆ ಅನುಭವಿಸಿದ್ದೇವೆ. ನಮ್ಮ ಸಮುದಾಯವೂ ಎಐನಂತಹ ಆಧುನಿಕ ತಂತ್ರಜ್ಞಾನಗಳನ್ನು ಕಸುಬುಗಳಲ್ಲಿ ಬಳಸಿ ಉದ್ಯಮ ಕ್ಷೇತ್ರದಲ್ಲಿ ಮುನ್ನಡೆಯಬೇಕು ಎಂದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ’ಪಿಎಂ ವಿಶ್ವಕರ್ಮ’ ಯೋಜನೆಯಡಿ ಇದುವರೆಗೆ ರೂ. ೫,೩೦೦ ಕೋಟಿಗೂ ಅಧಿಕ ಸಾಲ ಸೌಲಭ್ಯ ಒದಗಿಸಲಾಗಿದೆ. ೩೦ ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. ಆದರೆ ನಮ್ಮ ಸಮುದಾಯದ ಪ್ರತಿಯೊಬ್ಬ ಅರ್ಹ ವ್ಯಕ್ತಿಗೂ ಈ ಸೌಲಭ್ಯ ತಲುಪಿಸುವ ಕೆಲಸ ಸಂಘ-ಸಂಸ್ಥೆಗಳಿಂದಾಗಬೇಕು. ಆರ್ಥಿಕ ಮತ್ತು ತಾಂತ್ರಿಕ ಬೆಂಬಲದ ಮೂಲಕ ಯುವಜನತೆಯನ್ನು ಆಕರ್ಷಿಸಿದಾಗ ಮಾತ್ರ ಜಯಂತಿ ಆಚರಣೆ ಸಾರ್ಥಕತೆ ಪಡೆಯುತ್ತದೆ ಎಂದು ಹೇಳಿದರು.
May the Vishwakarma community come to the forefront in all fields.
Leave a comment