ಚಿಕ್ಕಮಗಳೂರು : ಜಿಲ್ಲೆ ಅಜ್ಜಂಪುರ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ರಸ್ತೆ ದಾಟುತ್ತಿದ್ದ ನಾಗರಹಾವನ್ನು ಕಂಡು ಬೈಕ್ ಸವಾರ ಏಕಾಏಕಿ ವಾಹನ ನಿಲ್ಲಿಸಿದ ಪರಿಣಾಮ, ಹಿಂದಿನಿಂದ ಬರುತ್ತಿದ್ದ ಸರ್ಕಾರಿ ಬಸ್ ಬೈಕ್ಗೆ ಡಿಕ್ಕಿಯಾಗಿ ತೋಟಕ್ಕೆ ನುಗ್ಗಿದ ಘಟನೆ ನಡೆದಿದೆ.
ರಸ್ತೆಯ ಮಧ್ಯೆ ನಾಗರಹಾವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೈಕ್ ಸವಾರ ದಿಢೀರನೆ ಬೈಕ್ ನಿಲ್ಲಿಸಿದ್ದಾನೆ. ಈ ವೇಳೆ ಹಿಂದಿನಿಂದ ಬಂದ ಸರ್ಕಾರಿ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟದೊಳಗೆ ನುಗ್ಗಿದೆ.
ಘಟನೆಯ ವೇಳೆ ಬಸ್ ಚಾಲಕ ಸಮಯಪ್ರಜ್ಞೆ ಮೆರೆದು ವಾಹನವನ್ನು ನಿಯಂತ್ರಿಸಲು ಪ್ರಯತ್ನಿಸಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾನೆ. ಬಸ್ ಮುಂದೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಇದ್ದರೂ, ಚಾಲಕನ ಚಾಣಾಕ್ಷತನದಿಂದ ಅದು ತಪ್ಪಿದೆ. ತೋಟದೊಳಗೆ ನುಗ್ಗಿದ ಬಸ್ ಕೊನೆಗೆ ನಿಂತಿದ್ದು, ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಅಪಘಾತದ ಸಮಯದಲ್ಲಿ ಬಸ್ಸಿನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಬೈಕ್ ಸವಾರ ಸೇರಿದಂತೆ ಎಲ್ಲರೂ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
KSRTC bus collides with bike and enters garden
Leave a comment