ಚಿಕ್ಕಮಗಳೂರು: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ವಿವಿಧ ಏಜೆನ್ಸಿಗಳ ಆಮೆಗತಿಯ ಕಾರ್ಯವೈಖರಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಬಿಗಿ ನಿರ್ದೇಶನಗಳನ್ನು ನೀಡಿದ್ದಾರೆ.
ಕಳೆದ ಮಳೆಗಾಲದಲ್ಲಿ ಮೂಡಿಗೆರೆ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಮಾಪನ ಯಂತ್ರಗಳ ದೋಷದಿಂದಾಗಿ ರೈತರು ಬೆಳೆವಿಮೆಯಿಂದ ವಂಚಿತರಾಗಿರುವ ಕುರಿತು ಆತಂಕ ವ್ಯಕ್ತಪಡಿಸಿದ ಅವರು, ಜಿಲ್ಲೆಯ 242 ಮಳೆಮಾಪನ ಯಂತ್ರಗಳ ಪೈಕಿ ಕೇವಲ 107 ಮಾತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ತರಾಟೆಗೆ ತೆಗೆದುಕೊಂಡರು.
ನೆಟ್‌ವರ್ಕ್ ಸಮಸ್ಯೆ ಇರುವ ಕಡೆಗಳಲ್ಲಿ ಬಿಎಸ್‌ಎನ್‌ಎಲ್ ಮೂಲಕ ತಕ್ಷಣವೇ ದೋಷ ನಿವಾರಿಸುವಂತೆ ಸೂಚಿಸಿದ ಸಂಸದರು, ಇನ್ನು 15 ದಿನಗಳ ಒಳಗಾಗಿ ಜಿಲ್ಲೆಯ ಎಲ್ಲಾ ನಿಷ್ಟ್ರಯೋಜಕ ಯಂತ್ರಗಳನ್ನು ಕಡ್ಡಾಯವಾಗಿ ದುರಸ್ತಿಗೊಳಿಸಬೇಕು ಎಂದು ಕಟ್ಟುನಿಟ್ಟಿನ ಗಡುವು ವಿಧಿಸಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಕುಸುಮ್’ ಸೋಲಾರ್ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ವಿಳಂಬ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಿದರು.
ಕುಸುಮ್ ‘ಎ’ ಸೂರ್ಯಘರ್ ಯೋಜನೆಯಡಿ ₹78,000 ಸಬ್ಸಿಡಿ ಲಭ್ಯವಿದ್ದರೂ ಕೇವಲ 171 ಫಲಾನುಭವಿಗಳಿಗೆ ಮಾತ್ರ ಹಣ ತಲುಪಿರುವುದರಿಂದ, ಈ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೆಯೇ, ರೈತರು ತಮ್ಮ ಪಾಲಿನ ಹಣ ಪಾವತಿಸಿದ್ದರೂ ಶೇ. 80ರಷ್ಟು ಸಬ್ಸಿಡಿಯ ಕುಸುಮ್ ‘ಬಿ’ ಯೋಜನೆಯಡಿ ಸೋಲಾರ್ ಪಂಪ್‌ಸೆಟ್ ಅಳವಡಿಸಲು ವಿಳಂಬ ಮಾಡುತ್ತಿರುವ ಏಜೆನ್ಸಿಗಳನ್ನು ಮೆಸ್ಕಾಂ ಅಧಿಕಾರಿಗಳ ಸಮ್ಮುಖದಲ್ಲೇ ತರಾಟೆಗೆ ತೆಗೆದುಕೊಂಡು, ಬಾಕಿ ಕಾಮಗಾರಿ ಮುಗಿಸಲು 15 ದಿನಗಳ ಕಾಲಾವಕಾಶ ನೀಡಿದರು.
ಇನ್ನು ಜಿಲ್ಲೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣದ ಕುರಿತಾದ ಕುಸುಮ್ ‘ಸಿ’ ಯೋಜನೆಗೆ ಸೂಕ್ತ ಜಾಗದ ಕೊರತೆಯಿದ್ದು, ಈ ಎಲ್ಲಾ ತಾಂತ್ರಿಕ ಸಮಸ್ಯೆಗಳ ನಿವಾರಣೆಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮತ್ತೊಂದು ಪ್ರತ್ಯೇಕ ವಿಶೇಷ ಸಭೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಇದರೊಂದಿಗೆ ಕಾಫಿನಾಡಿನ ಪ್ರಮುಖ ಅಡುಗೆ ಅನಿಲ ಪೈಪ್‌ಲೈನ್ ಯೋಜನೆಗಳ ಕುರಿತೂ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.
MPs unhappy with officials’ negligence
Leave a comment