ಚಿಕ್ಕಮಗಳೂರು: ಅತೀ ವೇಗ ಮತ್ತು ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟು ಇನ್ನಿಬ್ಬರು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಚಾಲಕನಿಗೆ ನಗರದ ಒಂದನೇ ಅಧಿಕ ಹಿರಿಯ ಸಿ.ಜೆ. ಮತ್ತು ಜೆ.ಎಂ.ಎಂ.ಸಿ. ನ್ಯಾಯಾಲಯವು ೯ ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.
ಬೇಲೂರು ತಾಲ್ಲೂಕು ಬಿಳುಗುಲಿ ಗ್ರಾಮದ ಬಿ.ಎಸ್.ಮೋಹಿತ್ ಎಂಬಾತನೇ ಶಿಕ್ಷೆಗೆ ಒಳಗಾದ ವ್ಯಕ್ತಿ. ಈತ ೨೦೨೩ರ ಮಾರ್ಚ್ ೨೩ರ ರಾತ್ರಿ ವಿವೇಕ್ ಮುನ್ಸಿ, ದರ್ಶನ್ ಆರಾಧ್ಯ ಹಾಗೂ ಕಾರ್ತಿಕ್ ಎಂಬುವವರೊಂದಿಗೆ ನಗರದ ಹೌಸಿಂಗ್ ಬೋರ್ಡ್‌ನ ಟೀಚರ್‍ಸ್ ಕಾಲೋನಿಯಿಂದ ಕಣಿವೆದಾಸರಹಳ್ಳಿಗೆ ತೆರಳಿ ಮರಳುತ್ತಿದ್ದಾಗ ರಸ್ತೆಯ ಇಳಿಜಾರಿನಲ್ಲಿ ಅಜಾಗರೂಕತೆಯಿಂದ ಕಾರು ಚಲಾಯಿಸಿದ ಪರಿಣಾಮವಾಗಿ ನಿಯಂತ್ರಣ ತಪ್ಪಿದ ಕಾರು ಫಾರೆಸ್ಟ್ ಗೇಟ್ ಸಮೀಪ ಮಗುಚಿ ಬಿದ್ದಿತೆನ್ನಲಾಗಿದೆ.
ಘಟನೆಯಲ್ಲಿ ಮುಂದಿನ ಸೀಟಿನಲ್ಲಿ ಕುಳಿತಿದ್ದ ವಿವೇಕ್ ಮುನ್ಸಿ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವಿಗೀಡಾದರೆ, ಹಿಂದಿನ ಸೀಟಿನಲ್ಲಿದ್ದ ದರ್ಶನ್ ಆರಾಧ್ಯ ಮತ್ತು ಕಾರ್ತಿಕ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಬಗ್ಗೆ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಬಗ್ಗೆ ಒಂದನೇ ಅಧಿಕ ಹಿರಿಯ ಸಿ.ಜೆ. ಮತ್ತು ಜೆ.ಎಂ.ಎಂ.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ದ್ಯಾವಪ್ಪ ಅವರು ವಿಚಾರಣೆ ನಡೆಸಿದ ಸಂದರ್ಭ ಮೋಹಿತ್ ವಿರುದ್ಧ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಆಗಸ್ಟ್ ೧ ರಂದು ತೀರ್ಪು ನೀಡಿದ್ದು, ಆರೋಪಿಗೆ ೯ ತಿಂಗಳು ಕಾರಾಗೃಹ ಶಿಕ್ಷೆ ಹಾಗೂ ೪ ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ ಮತ್ತೆ ೬೦ ದಿನಗಳ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಕವಿತಾ ಎಚ್.ಡಿ. ಅವರು ವಾದ ಮಂಡಿಸಿದ್ದರು. ಗ್ರಾಮಾಂತರ ಪೊಲೀಸರು ಸಾಕ್ಷಿದಾರರನ್ನು ಸಮರ್ಪಕವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಹಕರಿಸಿದ್ದರು.
Driver sentenced to 9 months in prison for death in accident
Leave a comment