ಚಿಕ್ಕಮಗಳೂರು : ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ವತಿಯಿಂದ ಚಿಕ್ಕಮಗಳೂರು ತಾಲೂಕು ಕಾಮೇಹಳ್ಳಿ ಗ್ರಾಮದಲ್ಲಿ ಆಗಸ್ಟ್ ೮ರಂದು ಬೆಳಗ್ಗೆ ೧೧ ಗಂಟೆಗೆ ಅರಣ್ಯ ಸಂತ್ರಸ್ತ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಮುಖ್ಯ ಸಂಚಾಲಕ ಎಸ್ ವಿಜಯ್ ಕುಮಾರ್ ಹೇಳಿದರು.
ನಗರದ ಪ್ರೆಸ್ಕ್ಲಬ್ನಲ್ಲಿಂದು ಕರೆದಿದ್ದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮವನ್ನು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್ ಡಿ ತಮ್ಮಯ್ಯ ಉದ್ಘಾಟಿಸಲಿದ್ದು, ಕಾಮೇನಳ್ಳಿಯ ಹಿರಿಯ ರೈತ ಹೋರಾಟಗಾರ ವೀರಭದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು. ಎಸ್ ವಿಜಯ್ ಕುಮಾರ್ ವಿಚಾರ ಮಂಡನೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ, ಬೆಳೆಗಾರರ ಸಂಘದ ಅಧ್ಯಕ್ಷ ಮಿಥುನ್, ಸಂಘಟನೆಯ ಸಂಚಾಲಕರಾದ ಕೆಕೆ ರಘು ಹಾಗೂ ವಾಸು ಪೂಜಾರಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಹೋಬಳಿ, ಕಸಬಾ ಹೋಬಳಿ ಹಾಗೂ ಜಾಗರ ಹೋಬಳಿ ವ್ಯಾಪ್ತಿಯ ಗ್ರಾಮಗಳಾದ ಅಲ್ಲಂಪುರ, ಅರಳಗುಪ್ಪೆ, ಬೀಕನಹಳ್ಳಿ, ದಾಸರಹಳ್ಳಿ, ಲಕ್ಷ್ಮೀಪುರ, ಅರಿಶಿನಗುಪ್ಪೆ, ಚುರ್ಚೆಗುಡ್ಡ, ಹಳಸುಬಾಳು, ಕೊಂಬುಗತ್ತಿ, ನೀರುಗುಂಡಿ, ಅತ್ತಿಗಿರಿ, ಕಾಮೇನಹಳ್ಳಿ, ನಿಂಗೇನಹಳ್ಳಿ, ಗೊಣ್ಕಲ್, ತೊಗರಿಹಂಕಲ್, ಹೊಸೂರು, ಹೂವೇನಹಳ್ಳಿ, ಪಾದಮನೆ, ಕುಮರಗಿರಿ, ನವಗ್ರಾಮ ಸೇರಿದಂತೆ ಅನೇಕ ಗ್ರಾಮಗಳ ರೈತರು ಹಲವು ವರ್ಷಗಳಿಂದ ಅರಣ್ಯ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಅದೇ ರೀತಿ ಅರಳಗುಪ್ಪೆ, ಮಾವಿನಹಳ್ಳಿ, ಬಿಂಡಿಗ, ನಾಗೇನಹಳ್ಳಿ, ಅತ್ತಿಗಿರಿ, ದೇವರಳ್ಳಿ ಸೇರಿದಂತೆ ಗಿರಿ ತಪ್ಪಲಿನ ಅನೇಕ ಗ್ರಾಮಗಳ ಸರ್ವೇ ನಂಬರುಗಳು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಯೋಜನೆ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಪರಿಣಾಮ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ಸಮಸ್ಯೆಯಿಂದಾಗಿ ಜಮೀನುಗಳ ಪೋಡಿ (ದುರಸ್ತಿ), ಖಾತೆ ಬದಲಾವಣೆ, ಜಮೀನು ಖರೀದಿ ಮಾರಾಟ, ಬ್ಯಾಂಕ್ ಸಾಲ, ಬೆಳೆ ಸಾಲ, ಸರ್ಕಾರಿ ಸೌಲಭ್ಯಗಳ ಪಡೆಯುವುದು ಸೇರಿದಂತೆ ವಿವಿಧ ಕಂದಾಯ ಹಾಗೂ ಕಾನೂನುಬದ್ಧ ವ್ಯವಹಾರಗಳನ್ನು ನಡೆಸಲು ತೊಂದರೆ ಉಂಟಾಗಿದೆ. ಇದರಿಂದ ಸಾವಿರಾರು ರೈತ ಕುಟುಂಬಗಳು ಆತಂಕ ಹಾಗೂ ಅನಿಶ್ಚಿತತೆಯಲ್ಲಿವೆ.
ಈ ಗಂಭೀರ ಸಮಸ್ಯೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಆದ ನಿರ್ಣಯಗಳು ಹಾಗೂ ಈವರೆಗೆ ರೈತ ಪರವಾಗಿ ನಡೆದಿರುವ ಆದೇಶಗಳು ನಡಾವಳಿಗಳ ಬಗ್ಗೆ, ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಗಮನ ಸೆಳೆದು ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಭಾಗದ ರೈತರು ಹಾಗೂ ಗ್ರಾಮಸ್ಥರ ಬೃಹತ್ ರೈತ ಸಮಾವೇಶವನ್ನು ಆಯೋಜಿಸಲಾಗಿದೆಎಂದು ಹೇಳಿದರು.
ಈ ಭಾಗದ ಎಲ್ಲಾ ರೈತ ಬಾಂಧವರು, ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ರೈತಪರ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಮಾವೇಶವನ್ನು ಯಶಸ್ವಿಗೊಳಿಸಿ ರೈತರ ಹಕ್ಕುಗಳ ಹೋರಾಟಕ್ಕೆ ಬಲ ತುಂಬುವಂತೆ ಕೋರಿದರು.
ಜಿಲ್ಲೆಯ ೧೩೭ ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಿರುವ ವಿಚಾರ ತೀವ್ರ ಚರ್ಚೆಗೊಳಗಾಗಿದ್ದು, ಕರಡಿಗೆ ಆಕ್ಷೇಪಣೆ ಸಲ್ಲಿಸಲು ೬೦ ದಿನಗಳ ಕಾಲಾವಕಾಶ ನೀಡಲಾಗಿದೆ. ಪೂರ್ಣ ಯೋಜನೆಯನ್ನೆ ಕೈಬಿಡುವಂತೆ ಒತ್ತಾಯಿಸುವ ಬದಲು ಕರಡಿನಲ್ಲಿರುವ ನ್ಯೂನತೆ ತಿದ್ದುಪಡಿ ಮಾಡುವಂತೆ ಒತ್ತಾಯಿಸಬೇಕಿದೆ ಆನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆ ಹೋರಾಟಕ್ಕಿಳಿಯಲಿದೆ ಎಂದು ಹೇಳಿದರು.
ಗೋಷ್ಟಿಯಲ್ಲಿ ಸಂಚಾಲಕರಾದ ಪೂರ್ಣೇಶ್, ಕುಮಾರ್,ರವಿಕುಮಾರ್,ವೀರಭದ್ರಪ್ಪ,ಶಾಂತಕುಮಾರ್,ಮೋಹನ್ ,ಚಂದ್ರು,ಬೀರೇಗೌಡ,ಮಲ್ಲೇಶಪ್ಪ ಇದ್ದರು.
Massive gathering of forest affected farmers
Leave a comment