ಚಿಕ್ಕಮಗಳೂರು : ಕರ್ನಾಟಕದ ವಿವಿಧ ಸಾರ್ವಜನಿಕ ವಿದ್ಯುತ್ ವಿತರಣಾ ಕಂಪನಿಯ ೧೯ ಕಂದಾಯ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಗಿ ಕೋರಿ ದಿ ಟಾಟಾ ಪವರ್‌ಕಂಪನಿ ಸಲ್ಲಿಸಿರುವ ಅರ್ಜಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ಆಜಾದ್‌ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ರೈತ ಮುಖಂಡರು ವಿದ್ಯುತ್ ಕ್ಷೇತ್ರವನ್ನು ಖಾಸಗೀ ಕರಣಗೊಳಿಸಲು ರಾಜ್ಯ ಸರ್ಕಾರ ಮುಂದಾಗಬಾರದು.ವಿದ್ಯುತ್ ಕ್ಷೇತ್ರದಲ್ಲಿ ಅನುಭವ ಇಲ್ಲದ ಟಾಟಾ ಪವರ್ ಕಂಪನಿಗೆ ಯಾವುದೇ ಕಾರಣಕ್ಕೂ ವಿದ್ಯುತ್ ವಿತರಣೆಗೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಪ್ರತಿಭಟನಾನಿರತರನ್ನುಉದ್ದೇಶಿಸಿ ರೈತ ಮುಖಂಡ ಗುರುಶಾಂತಪ್ಪ ಮಾತನಾಡಿ ಕರ್ನಾಟಕದ ೧೯ ಜಿಲ್ಲೆಗಳಲ್ಲಿ ವಿದ್ಯುತ್ ಖಾಸಗೀಕರಣ ಮಾಡಿ, ಅದನ್ನು ಟಾಟಾ ಪವರ್ ಲಿಮಿಟೆಡ್ ಸಂಸ್ಥೆಗೆ ವಹಿಸಲು ಹುನ್ನಾರ ನಡೆಯುತ್ತಿದೆ ಎಂಬ ಆತಂಕ ಕೇಳಿಬರುತ್ತಿವೆ. ಕರ್ನಾಟಕ ರಾಜ್ಯ ರೈತ ಸಂಘವು ಈ ನಿರ್ಧಾರವನ್ನು ಪ್ರಬಲವಾಗಿ ವಿರೋಧಿಸುತ್ತದೆ ಎಂದರು.
ಇದಕ್ಕೆ ಇರುವ ಪ್ರಮುಖ ಕಾರಣಗಳೆಂದರೆ, ಕರ್ನಾಟಕವು ಅತಿ ಹೆಚ್ಚು ಕೃಷಿಕರನ್ನು ಮತ್ತು ದೇಶದಲ್ಲೇ ಅತಿ ಹೆಚ್ಚು ಅಂದರೆ ಸುಮಾರು ೪೫ ಲಕ್ಷ ಕೃಷಿ ಪಂಪ್‌ಸೆಟ್‌ಗಳನ್ನು ಹೊಂದಿರುವ ರಾಜ್ಯವಾಗಿದೆ. ರೈತರು ಕೊಳವೆ ಬಾವಿಗಳ ಮೂಲಕ ಈ ಪಂಪ್‌ಸೆಟ್‌ಗಳನ್ನು ಬಳಸಿ ತಮ್ಮ ಜಮೀನುಗಳಿಗೆ ನೀರಾವರಿ ಮಾಡಿಕೊಳ್ಳುತ್ತಿದ್ದಾರೆ.
ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡುವುದರಿಂದ ರೈತರಿಗೆ ಸಿಗುತ್ತಿರುವ ವಿದ್ಯುತ್ ಸಬ್ಸಿಡಿಯನ್ನು ತೆಗೆದುಹಾಕುವ ವ್ಯವಸ್ಥೆ ಜಾರಿಗೆ ಬರಬಹುದು. ಇದರಿಂದಾಗಿ ರೈತರ ಬೆಳೆಯುವ ಶಕ್ತಿ ಕುಂಠಿತಗೊಂಡು, ಕೃಷಿ ಉತ್ಪನ್ನಗಳು ಕಡಿಮೆಯಾಗುತ್ತವೆ ಮತ್ತು ದೇಶದ ಆಹಾರ ಭದ್ರತೆಗೆ ದೊಡ್ಡ ಧಕ್ಕೆ ಉಂಟಾಗುವ ಆತಂಕ ವಿದೆ ಎಂದುಹೇಳಿದರು.
ಸರ್ಕಾರವು ಸಣ್ಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು ಹಾಗೂ ಗೃಹಜ್ಯೋತಿ, ಭಾಗ್ಯಜ್ಯೋತಿಯಂತಹ ಯೋಜನೆಗಳ ಮೂಲಕ ಜನರಿಗೆ ವಿದ್ಯುತ್ ಸೌಲಭ್ಯ ನೀಡುತ್ತಿದೆ. ಸದ್ಯದ ವ್ಯವಸ್ಥೆಯಲ್ಲಿ ಸಬ್ಸಿಡಿ ವಿತರಣೆ ಸಮರ್ಪಕವಾಗಿ ನಡೆಯುತ್ತಿದೆ.
ಆದರೆ, ಗ್ರಾಹಕರನ್ನು ಖಾಸಗಿ ಕಂಪನಿಗಳಿಗೆ ಹಂಚಿಕೆ ಮಾಡುವುದರಿಂದ ಖಾಸಗಿಯವರಿಗೆ ಒಂದು ನೀತಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಮತ್ತೊಂದು ನೀತಿಯಾಗಿ ಕ್ರಾಸ್ ಸಬ್ಸಿಡಿ ವ್ಯವಸ್ಥೆಯ ಮೂಲಕ ಒಟ್ಟಾರೆ ಸಬ್ಸಿಡಿ ವ್ಯವಸ್ಥೆಯೇ ಸರ್ವನಾಶವಾಗುವ ಭೀತಿ ಇದೆಎಂದರು.
ಜಿಲ್ಲಾಧ್ಯಕ್ಷ ಡಿ.ಮಹೇಶ್ ಮಾತನಾಡಿ ಈಗಾಗಲೇ ಟಾಟಾ ಪವರ್ ಲಿಮಿಟೆಡ್ ಸಂಸ್ಥೆಯು ಮುಂಬೈ, ಅಜೀರ್, ದೆಹಲಿ, ಬಿಹಾರ್ ಸೇರಿದಂತೆ ಹಲವೆಡೆ ತನ್ನ ಜಾಲವನ್ನು ವಿಸ್ತರಿಸಿದೆ. ಆದರೆ, ಅಲ್ಲಿನ ಸಾರ್ವಜನಿಕ ವಲಯದ ವಿದ್ಯುತ್ ಪೂರೈಕೆಗೆ ಹೋಲಿಸಿದರೆ ಖಾಸಗಿ ಸಂಸ್ಥೆಯು ಕಳಪೆ ಗುಣಮಟ್ಟದ ವಿದ್ಯುತ್ ನೀಡುತ್ತಿದ್ದು, ದರಗಳು ಕೂಡ ಅತ್ಯಂತ ಹೆಚ್ಚಾಗಿವೆ. ಇದು ಅಂತಿಮವಾಗಿ ಸಾರ್ವಜನಿಕರ ಮೇಲೆ ದೊಡ್ಡ ಹೊರೆಯಾಗಿ ಪರಿಣಮಿಸುತ್ತದೆ.
ಕರ್ನಾಟಕದ ೧೯ ಜಿಲ್ಲೆಗಳಲ್ಲಿ ಖಾಸಗೀಕರಣ ಮಾಡುವುದರಿಂದ ಸುಮಾರು ೫೫,೦೦೦ ದಿಂದ ೬೦,೦೦೦ ಉದ್ಯೋಗಗಳು ನಷ್ಟವಾಗುವ ಅಂದಾಜಿದೆ. ಅಷ್ಟೇ ಅಲ್ಲದೆ, ಟಾಟಾ ಪವರ್ ಸಂಸ್ಥೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ಉದ್ಯೋಗ ಭದ್ರತೆ ಇರುವುದಿಲ್ಲ. ನಿವೃತ್ತಿ ವೇತನವಾಗಲಿ ಅಥವಾ ಆರೋಗ್ಯ ವೇತನವಾಗಲಿ ಸಿಗದೆ, ಅವರು ಜೀತದಾಳುಗಳಂತೆ ದುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.
ಯಾವುದೇ ಹೊಸ ಕೈಗಾರಿಕೆಗಳು ಅಥವಾ ಟೌನ್‌ಶಿಪ್‌ಗಳು ಹೆಚ್ಚಾಗಿ ಸ್ಥಾಪನೆಯಾಗದಿದ್ದರೂ, ವಿದ್ಯುತ್ ಬೇಡಿಕೆ ನೆಪವೊಡ್ಡಿ ಈ ರೀತಿ ಖಾಸಗೀಕರಣ ಮಾಡುವುದು ಸರಿಯಲ್ಲ.
ಆದ್ದರಿಂದ, ಈಗಿರುವ ಸರ್ಕಾರಿ ವ್ಯವಸ್ಥೆಯನ್ನೇ ಇನ್ನಷ್ಟು ಸುಧಾರಿಸಿ, ಕರ್ನಾಟಕದ ವಿದ್ಯುತ್ ವಲಯವನ್ನು ಖಾಸಗೀಕರಣದಿಂದ ಮುಕ್ತವಾಗಿ ಉಳಿಸಬೇಕು ಎಂಬುದು ರೈತ ಮುಖಂಡರ ಮತ್ತು ಸಂಘಟನೆಗಳ ಪ್ರಬಲ ಒತ್ತಾಯವಾಗಿದೆ ಎಂದು ಹೇಳಿದ್ದಾರೆ.
ರೈತಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಎಂ.ಬಿ.ಚಂದ್ರಶೇಖರ್, ಮಾಜಿ ಅಧ್ಯಕ್ಷ ಗುರುಶಾಂತಪ್ಪ, ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ಬಸವರಾಜ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇವರಾಜ್, ಜಿಲ್ಲಾ ಉಪಾಧ್ಯಕ್ಷ ಡಿ.ಕುಮಾರಸ್ವಾಮಿ, ಜಿಲ್ಲಾ ವಕ್ತಾರ ಜೆ.ಎಸ್.ಶಿವಣ್ಣ, ತಾಲೂಕು ಅಧ್ಯಕ್ಷ ಭದ್ರೇಗೌಡ, ಕಡೂರು ಈಶಣ್ಣ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Farmers’ union protests against privatization of electricity distribution company
Leave a comment