ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ ಕಂದಾಯ ಮತ್ತು ಅರಣ್ಯ ಭೂಮಿಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ವಿವಿಧ ರೈತ ಪರ ಸಂಘಟನೆಗಳು ಜೂ.೯ ರಂದು ಹಮ್ಮಿಕೊಂಡಿರುವ ಜನಾಂದೋಲನ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ತಿಳಿಸಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಜಿಲ್ಲೆಯಲ್ಲಿ ಜನಾಂದೋಲನ ಆರಂಭವಾಗಿದೆ. ಜೂ.೯ ರಂದು ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಜನಪರ ಚಳವಳಿ ಆಗಿರುವುದರಿಂದ ಕಾಂಗ್ರೆಸ್ ನೈತಿಕ ಮತ್ತು ಬಾಹ್ಯ ಬೆಂಬಲ ನೀಡಲಿದೆ ಎಂದರು.
ಈ ಚಳವಳಿಗೆ ಜಿಲ್ಲೆಯ ಎಲ್ಲ ಶಾಸಕರು, ಎಂಎಲ್ಸಿಗಳು, ಸಂಸದರು ಭಾಗವಹಿಸುವುದರಿಂದ ಜಿಲ್ಲೆಯಲ್ಲಿ ಕಳೆದ ೩೦ ವರ್ಷದಿಂದ ಇರುವ ಡೀಮ್ಡ್, ೪(೧), ಒತ್ತುವರಿ ಸಮಸ್ಯೆಗಳಿಗೆ ಚುನಾಯಿತ ಪ್ರತಿನಿಗಳು ಚಳವಳಿ ಸ್ಥಳದಲ್ಲೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತೇನೆ. ಕೇಂದ್ರದ ಮೇಲೆ ರಾಜ್ಯ, ರಾಜ್ಯ ಸರಕಾರದ ಮೇಲೆ ಕೇಂದ್ರದ ಆರೋಪ ಪ್ರತ್ಯಾರೋಪಗಳನ್ನು ಬಿಟ್ಟು ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ರೈತ ಬೆಳೆಗಾರರ ಸಮಸ್ಯೆಗಳಿಗೆ ಅಧಿಕಾರಿಗಳೆ ಮೂಲಕಾರಣವಾಗಿದ್ದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೆಂದರ್‌ಕುಮಾರ್ ಕಟಾರಿಯಾ ಅವರನ್ನು ಜಿಲ್ಲೆಯಿಂದ ಬದಲಾಯಿಸಬೇಕು ಎಂದರು. ಸರಕಾರ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡಲು ಆದೇಶಿಸಿದೆ. ಆದರೆ, ಇಲ್ಲಿನ ಡಿಸಿಸಿ ಬ್ಯಾಂಕ್ ನಬಾರ್ಡ್ ನೆಪ ಹೇಳಿಕೊಂಡು ರೈತರಿಗೆ ಸಾಲ ನೀಡುತ್ತಿಲ್ಲ. ಇದೇ ರೀತಿ ಮುಂದುವರಿದರೆ ಡಿಸಿಸಿ ಬ್ಯಾಂಕಿನ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆಪಿಸಿಸಿ ಮತ್ತೋರ್ವ ವಕ್ತಾರ ರವೀಶ್‌ಬಸಪ್ಪ ಮಾತನಾಡಿ, ಸಂಘಟಿತ ಹೋರಾಟದ ಮೂಲಕ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ವಿವಿಧ ರೈತ ಸಂಘಟನೆಗಳು ಹಮ್ಮಿಕೊಂಡಿರುವ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದರು.
ಅರಣ್ಯ ಅಧಿಕಾರಿಗಳು ಕೂಡ ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು. ಜನಸಾಮಾನ್ಯರ ಬದುಕನ್ನು ಕಸಿದುಕೊಂಡು ಅಧಿಕಾರ ಮಾಡುವುದು ಸರಿಯಲ್ಲ. ಈ ಬಗ್ಗೆ ಅವರು ಗಡಿರೇಖೆ ಹಾಕಿಕೊಳ್ಳಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ತನೂಜ್ ನಾಯ್ಡು, ಇಂದಾವರ ಲೋಕೇಶ್, ಶಾಂತಕುಮಾರ್ ಉಪಸ್ಥಿತರಿದ್ದರು.
Congress supports farmers’ movement on June 9
Leave a comment