ಚಿಕ್ಕಮಗಳೂರು-ನಗರಸಭೆ ನೂತನ ಅಧ್ಯಕ್ಷರಾಗಿ ೩೨ನೇ ವಾರ್ಡಿನ ಬಿಜೆಪಿ ಸದಸ್ಯೆ ಭವ್ಯ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರಸಭೆ ಸಭಾಂಗಣದಲ್ಲಿ ಇಂದು ನೆಡೆದ ಅಧ್ಯಕ್ಷರ ಚುನಾವಣೆಗೆ ಭವ್ಯ ಮಂಜುನಾಥ್ ಅವರ ನಾಮಪತ್ರ ಹೊರತುಪಡಿಸಿ ಬೇರೆ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ನಟೇಶ್ ರವರು ಭವ್ಯ ಮಂಜುನಾಥ್ ಅವರು ನಗರಸಭೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ರವರು ಮಹಿಳಾ ಮೀಸಲಾತಿ ಬಂದಾಗ ೧೦ ತಿಂಗಳಿಗೆ ಒಬ್ಬರಂತೆ ೩ ಅವಧಿ ಹಂಚಿಕೆಯನ್ನು ಬಿಜೆಪಿ ಜೆಡಿಎಸ್ ಕೂಡಿ ಮಾಡಿಕೊಂಡಿದ್ದು, ಮೊದಲ ಅವಧಿಗೆ ಸುಜಾತ ಶಿವಕುಮಾರ್, ೨ ನೇ ಅವಧಿಗೆ ಶೀಲಾದಿನೇಶ್ ಹಾಗೂ ೩ನೇ ಅವಧಿಗೆ ಭವ್ಯ ಮಂಜುನಾಥ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು ಇದಕ್ಕೆ ಸಹಕರಿಸಿದ ಸಂಸದರು, ವಿಧಾನಪರಿಷತ್ ಸದಸ್ಯರು ಹಾಗೂ ಬಿಜೆಪಿಯ ಎಲ್ಲಾ ಮುಖಂಡರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಹಲವು ಸದಸ್ಯರು ಆಕಾಂಕ್ಷಿಗಳಾಗಿದ್ದರು ಭವ್ಯ ಮಂಜುನಾಥ್ ಹೆಸರು ಪ್ರಸ್ತಾಪವಾದಾಗ ಅವರೆಲ್ಲರು ಸರ್ವಾನುಮತದಿಂದ ಸಹಕರಿಸಿ ಅವಿರೋಧ ಆಯ್ಕೆ ಮಾಡಲು ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.
ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರು ಹೆಚ್ಚಿನ ಅಪೇಕ್ಷೆ ವ್ಯಕ್ತಪಡಿಸದಿದ್ದರು ಸಂದರ್ಭ ಬಂದಾಗ ಸ್ಪಂದಿಸಲು ಇದೊಂದು ಅವಕಾಶವಾಗಿದೆ, ಸಿಕ್ಕಿರುವ ಅವಧಿಯಲ್ಲಿ ನೂತನ ಅಧ್ಯಕ್ಷರು ಜನಪರ ಕಾರ್ಯಕ್ಕೆ ಒತ್ತು ಕೊಡಬೇಕು, ಕಸ ನಿರ್ವಹಣೆ, ಬೇಸಿಗೆ ಕಾಲವಾಗಿರುವುದರಿಂದ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಾಸವಾಗದಂತೆ ಕ್ರಮ ವಹಿಸಬೇಕು, ಬೀದಿ ದೀಪ, ಒಳ ಚರಂಡಿ ವ್ಯವಸ್ಥೆ, ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ನಗರದ ನಾಗರೀಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಗಂಭೀರ ಚಿಂತನೆ ಮಾಡಿದಾಗ ಮಾತ್ರ ಜನಸ್ನೇಹಿ ಆಡಳಿತ ಕೊಡಲು ಸಾಧ್ಯ, ಇದನ್ನು ಒಂದು ಸವಾಲಾಗಿ ಸ್ವೀಕರಿಸಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು, ಹಿರಿಯ ನಗರಸಭೆ ಮಾರ್ಗದರ್ಶನದೊಂದಿಗೆ ಉತ್ತಮ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಈಗ ಹಾರ ಹಾಕಿ ಶುಭಾಷಯ ಕೋರಿದಂತೆ ಅವಧಿ ಮುಗಿದ ಬಳಿಕವು ಮೆಚ್ಚುಗೆ ವ್ಯಕ್ತಪಡಿಸುವ ರೀತಿ ಆಡಳಿತದಲ್ಲಿ ಹೆಜ್ಜೆ ಗುರುತು ಮೂಡಿಸಿ ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಎಂದು ಶುಭ ಹಾರೈಸಿದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ ಮಾತನಾಡಿ ಕಳೆದ ೨೦ ವರ್ಷಗಳಿಂದ ನಗರಸಭೆ ಅಧಿಕಾರವನ್ನು ಬಿಜೆಪಿ ಹಿಡಿದು ಅಭಿವೃದ್ಧಿ ಸಾಧಿಸಿದೆ ಈ ನಿಟ್ಟಿನಲ್ಲಿ ಭವ್ಯ ಮಂಜುನಾಥ್ ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಹಣದಿಂದಲೇ ಅಧ್ಯಕ್ಷರಾಗುತ್ತಾರೆ ಎಂಬ ಆರೋಪ ಇಂದು ದೂರವಾಗಿದೆ, ಜೊತೆಗೆ ಇದು ಸಮಂಜಸವಾಗಿದೆ ಹಣದಿಂದಲೇ ಎಲ್ಲವೂ ಸಾಧ್ಯವಿಲ್ಲ ಎಂಬುದನ್ನು ದೃಢಪಡಿಸಿದ್ದಾರೆ, ಭವ್ಯ ಮಂಜುನಾಥ್ ರವರು ಬಡ ಕುಟುಂಬದಿಂದ ಬಂದವರಾಗಿದ್ದು, ಬಿಜೆಪಿ ಪಕ್ಷದಲ್ಲಿ ಕಳೆದ ೨೫ ವರ್ಷಗಳಿಂದ ಸಲ್ಲಿಸಿದ ಪಕ್ಷ ನಿಷ್ಠೆಗೆ ಇಂದು ಗೌರವ ಸಂದಿದೆ ಎಂದರು.
ಇವರನ್ನು ಆಯ್ಕೆ ಮಾಡಿರುವುದು ನಗರದ ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ತಾರತಮ್ಯ ಮಾಡದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನೆಡೆಸಿ ಎಂದು ಶುಭ ಹಾರೈಸಿದರು.
ನೂತನ ಅಧ್ಯಕ್ಷೆ ಭವ್ಯ ಮಂಜುನಾಥ್ ಮಾತನಾಡಿ ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಉತ್ತಮ ಸ್ಥಾನ ನೀಡಿದ್ದಾರೆ, ನನ್ನ ಅಧಿಕಾರ ಅವಧಿಯಲ್ಲಿ ಜನಸಾಮಾನ್ಯರ ಕೆಲಸಗಳನ್ನು ಮಾಡಿ ಪಕ್ಷಕ್ಕೆ ಹೆಸರನ್ನು ತಂದುಕೊಡುತ್ತೇನೆ, ನಮ್ಮ ಮನೆಯವರು ಪೇಂಟಿಂಗ್ ಕಂಟ್ರ್ಯಾಕ್ಟರ್ ಆಗಿದ್ದು, ಪಕ್ಷದಲ್ಲಿ ೨೫ ವರ್ಷಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ್ದಾರೆ ಎಂದರು.
ಬಿಜೆಪಿ, ಜೆಡಿಎಸ್ ಮುಖಂಡರು ಹಾಗೂ ನಗರಸಭೆ ಸದಸ್ಯರು ಒಗ್ಗಟ್ಟಿನಿಂದ ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ, ಅವರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ತಮ್ಮ ಅಧಿಕಾರ ಅವಧಿಯಲ್ಲಿ ಸ್ವಚ್ಚತೆ, ಬೀದಿ ದೀಪ, ಕುಡಿಯುವ ನೀರು, ಒಳ ಚರಂಡಿ ಮುಂತಾದ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ, ನಗರಮಂಡಲ ಅಧ್ಯಕ್ಷ ಕೆ.ಎಸ್ ಪುಷ್ವರಾಜ್, ಮುಖಂಡ ಕೋಟೆ ರಂಗನಾಥ್, ನಗರಸಭೆ ಉಪಾಧ್ಯಕ್ಷೆ ಲಲಿತಾ ರವಿನಾಯಕ್, ಸದಸ್ಯರುಗಳಾದ ರೂಪಕುಮಾರ್, ಕವಿತಾ ಶೇಖರ್, ಸುಜಾತ ಶಿವಕುಮಾರ್, ಶೀಲಾ ದಿನೇಶ್, ಮಧುಕುಮಾರ್ ರಾಜ್ ಅರಸ್, ಎ.ಸಿ ಕುಮಾರ್, ಗೋಪಿ, ವರಸಿದ್ಧಿ ವೇಣುಗೋಪಾಲ್, ಆಯುಕ್ತರಾದ ಬಸವರಾಜ್ ನೂತನ ಅಧ್ಯಕ್ಷರನ್ನು ಅಭಿನಂಧಿಸಿದರು. ಮತ್ತಿತರರು ಉಪಸ್ಥಿತರಿದ್ದರು.
Bhavya Manjunath elected unopposed as new Municipal Council President
Leave a comment