ಕಡೂರು: ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಗ್ ಒಂದು, ಬಸ್ ಹತ್ತುವ ವೇಳೆ ಮಹಿಳೆಯ ಗಮನ ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ ಬರೋಬ್ಬರಿ 50 ಗ್ರಾಂ ತೂಕದ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿ ಎಗರಿಸಿ ಪರಾರಿಯಾಗಿರುವ ಘಟನೆ ಕಡೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಂಧುಗಳ ಮನೆಯ ಶುಭ ಸಮಾರಂಭದಲ್ಲಿ ಪಾಲ್ಗೊಂಡು ಊರಿಗೆ ಮರಳಲು ಮಹಿಳೆಯೊಬ್ಬರು ತಮ್ಮ ಕುಟುಂಬಸ್ಥರೊಂದಿಗೆ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಸಂಜೆ ವೇಳೆಗೆ ಊರಿಗೆ ತೆರಳುವ ಕೆಎಸ್ಆರ್ಟಿಸಿ ಬಸ್ ಬರುತ್ತಿದ್ದಂತೆ ಪ್ರಯಾಣಿಕರ ತೀವ್ರ ನೂಕುನುಗ್ಗಲು ಉಂಟಾಗಿದೆ. ಇದನ್ನೇ ಹೊಂಚು ಹಾಕುತ್ತಿದ್ದ ಅಪರಿಚಿತ ಖದೀಮರು, ಬಸ್ ಹತ್ತುವ ಧಾವಂತದಲ್ಲಿದ್ದ ಮಹಿಳೆಯ ಗಮನವನ್ನು ಚಾಣಾಕ್ಷತನದಿಂದ ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ.
ಬಸ್ ಹೊರಟು ಮಾರ್ಗಮಧ್ಯೆ ಮಲ್ಲೇಶ್ವರ ಗ್ರಾಮ ಸಮೀಪಿಸುತ್ತಿದ್ದಂತೆ ಕುತ್ತಿಗೆಯಲ್ಲಿದ್ದ ಸರ ನಾಪತ್ತೆಯಾಗಿರುವುದು ಮಹಿಳೆಯ ಗಮನಕ್ಕೆ ಬಂದಿದ್ದು, ತಕ್ಷಣವೇ ಕಂಗಾಲಾಗಿ ಬಸ್ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಕಳವಾಗಿರುವ ಸುಮಾರು 50 ಗ್ರಾಂ ಬಂಗಾರದ ಸರದ ಮೌಲ್ಯ ಅಂದಾಜು ₹4 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಸಂತ್ರಸ್ತೆ ನೀಡಿದ ಲಿಖಿತ ದೂರಿನ ಮೇರೆಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ನಿಲ್ದಾಣದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಿಲಾಡಿ ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
50-gram gold chain stolen at Kadur bus stand.
Leave a comment