ಚಿಕ್ಕಮಗಳೂರು: ಶಾಂತಿಯುತವಾಗಿ ನಡೆಯಬೇಕಿದ್ದ ರೈತರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯೊಂದು ನೋಡನೋಡುತ್ತಿದ್ದಂತೆ ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಹಂಗರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ. ಸಭೆಯಲ್ಲಿ ಅಧ್ಯಕ್ಷರು ಹಾಗೂ ನಿರ್ದೇಶಕರ ನಡುವೆ ಮಾತಿಗೆ ಮಾತು ಬೆಳೆದು, ಕೊನೆಗೆ ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ ತೀವು ಗದ್ದಲ ಸೃಷ್ಟಿಯಾಗಿದೆ.
ಕಣತಿ ಸಮೀಪವಿರುವ ಸರ್ಕಾರಿ ಜಾಗದ ಬಳಕೆಯ ವಿಚಾರವೇ ಈ ಗಲಾಟೆಗೆ ಕಿಡಿ ಹೊತ್ತಿಸಿದೆ. ಸದರಿ ಜಾಗವನ್ನು ಸರ್ಕಾರದಿಂದ ಸಂಘದ ಹೆಸರಿಗೆ ಮಂಜೂರು ಮಾಡಿಸಿಕೊಂಡು, ಅಲ್ಲಿ ವಾಣಿಜ್ಯ ಮಳಿಗೆಗಳು ಹಾಗೂ ಪೆಟ್ರೋಲ್ ಬಂಕ್ ನಿರ್ಮಿಸಲು ಸಂಘದ ಅಧ್ಯಕ್ಷ ಅರುಣ್ ಹಾಗೂ ನಿರ್ದೇಶಕ ದಿಲೀಪ್ ಮುಂದಾಗಿದ್ದರು ಎನ್ನಲಾಗಿದೆ.
ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮತ್ತೋರ್ವ ನಿರ್ದೇಶಕ ಬೈಗೂರು ನಾಗೇಶ್, ಆ ಜಾಗದಲ್ಲಿ ಬಡ ಜನರಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಕಡಾಖಂಡಿತವಾಗಿ ಪಟ್ಟು ಹಿಡಿದಿದ್ದಾರೆ.
ಈ ಹಿಂದೆ ಈ ಜಾಗವನ್ನು ಬಡವರ ಅನುಕೂಲಕ್ಕಾಗಿ ಬಳಸಿಕೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು ಎನ್ನಲಾಗಿದ್ದು
ವಾರ್ಷಿಕ ಮಹಾಸಭೆಯಲ್ಲಿ ಈ ಜಾಗದ ಪ್ರಸ್ತಾಪ ಮುನ್ನೆಲೆಗೆ ಬರುತ್ತಿದ್ದಂತೆ ಎರಡೂ ಬಣಗಳ ನಡುವೆ ಏಕಾಏಕಿ ಮಾತಿನ ಚಕಮಕಿ ಶುರುವಾಗಿದೆ. ಪರಸ್ಪರ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿ ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ, ನೂಕಾಟ-ತಳ್ಳಾಟ ಹಾಗೂ ಮಾರಾಮಾರಿ ನಡೆದಿದೆ.
ಸಭಾಂಗಣದಲ್ಲೇ ಆಡಳಿತ ಮಂಡಳಿ ಮುಖಂಡರು ರಂಪಾಟಕ್ಕಿಳಿದಿದ್ದು ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
Clash at the Farmers’ Cooperative Society’s annual general meeting.
Leave a comment