ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಜಿಪಂ–ತಾಪಂ ಸದಸ್ಯ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಆನಂದ ನಾಯಕ್ ಒತ್ತಾಯಿಸಿದರು.
ಸಖರಾಯಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 13ರಂದು ನಡೆಯಲಿರುವ ವಿಧಾನಸಭೆ ಹಾಗೂ ವಿಧಾನಪರಿಷತ್ ಅಧಿವೇಶನದಲ್ಲಿ ಸಖರಾಯಪಟ್ಟಣ ಭಾಗದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚಿಸಿ, ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆ ಮಾಡಿಸಬೇಕು ಎಂದು ಮನವಿ ಮಾಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ: ಸಖರಾಯಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ 24×7 ವೈದ್ಯರು, ತಜ್ಞ ವೈದ್ಯರು, ಹೆರಿಗೆ ಹಾಗೂ ಪ್ರಯೋಗಾಲಯದಂತಹ ಅಗತ್ಯ ಸೌಲಭ್ಯಗಳ ಕೊರತೆಯಿದೆ. ಇದರಿಂದ ಜನರು ಚಿಕಿತ್ಸೆಗಾಗಿ ಚಿಕ್ಕಮಗಳೂರು ಹಾಗೂ ಕಡೂರಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಆರೋಗ್ಯ ಕೇಂದ್ರವನ್ನು ಕೂಡಲೇ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು ಎಂದು ಆಗ್ರಹಿಸಿದರು.
ವಿವಿಧ ಇಲಾಖೆಗಳ ಕಟ್ಟಡಕ್ಕೆ ಜಾಗ, ಅನುದಾನ: ಸಖರಾಯಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಕಚೇರಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಹಾಸ್ಟೆಲ್ ಹಾಗೂ ಪೊಲೀಸ್ ಸಿಬ್ಬಂದಿಗೆ ವಸತಿಗೃಹ ನಿರ್ಮಿಸಲು ಸೂಕ್ತ ಸರ್ಕಾರಿ ಜಾಗ ಗುರುತಿಸಿ, ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಕಸ ವಿಲೇವಾರಿ ಘಟಕಕ್ಕೆ ಜಾಗ: ದೊಡ್ಡ ಗ್ರಾಮ ಪಂಚಾಯಿತಿಯಾಗಿರುವ ಸಖರಾಯಪಟ್ಟಣದಲ್ಲಿ ಪ್ರತಿದಿನ ಸಾವಿರಾರು ಕೆ.ಜಿ. ಕಸ ಉತ್ಪತ್ತಿಯಾಗುತ್ತಿದೆ. ಆದರೆ ಕಸ ವಿಲೇವಾರಿಗೆ ಸೂಕ್ತ ಜಾಗದ ಕೊರತೆಯಿದ್ದು, ಇದರಿಂದ ಸಮಸ್ಯೆ ಎದುರಾಗಿದೆ. ಆದ್ದರಿಂದ ಕಸ ವಿಲೇವಾರಿ ಘಟಕ ಸ್ಥಾಪಿಸಲು ಸೂಕ್ತ ಸರ್ಕಾರಿ ಜಾಗ ಗುರುತಿಸಿ, ಅಗತ್ಯ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಬಾಕಿ ಪಿಂಚಣಿ ಹಣ ಬಿಡುಗಡೆಗೆ ಒತ್ತಾಯ: ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮನಸ್ವಿನಿ ಹಾಗೂ ಅಂಗವಿಕಲರ ಪಿಂಚಣಿ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಹಣ ಹಲವು ತಿಂಗಳಿಂದ ಬಾಕಿಯಿದ್ದು, ಬಡವರು, ವಿಧವೆಯರು ಹಾಗೂ ಅಂಗವಿಕಲರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬಾಕಿ ಇರುವ ಎಲ್ಲ ಪಿಂಚಣಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ನಿವೇಶನ ರಹಿತರಿಗೆ ನಿವೇಶನ: ಸಖರಾಯಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ ಸುಮಾರು ಒಂದೂವರೆ ಸಾವಿರ ಮಂದಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಇವರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಹಾಗೂ ಬಡವರಾಗಿದ್ದಾರೆ. ಮನೆ ಇಲ್ಲದೆ ಸಂಕಷ್ಟದಲ್ಲಿರುವವರಿಗೆ ಸರ್ಕಾರಿ ಜಾಗ ಗುರುತಿಸಿ ಉಚಿತ ನಿವೇಶನ ಮಂಜೂರು ಮಾಡುವುದರ ಜೊತೆಗೆ ಮನೆ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಐದು ಬೇಡಿಕೆಗಳನ್ನು ಮುಂಬರುವ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಸರ್ಕಾರದಿಂದ ಸೂಕ್ತ ಅನುದಾನ ತಂದು ಸಖರಾಯಪಟ್ಟಣ ಭಾಗದ ಜನರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆನಂದ ನಾಯಕ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವಿಕೆ ಮೂರ್ತಿ, ಚೇತನ್ ಗೌಡ, ಶ್ರೀಕಾಂತ್, ತರುಣ್ ಹಾಗೂ ಚೇತನ್ ನಾಯಕ್ ಉಪಸ್ಥಿತರಿದ್ದರು.
5 demands to solve Sakharayapattana’s infrastructure problems
Leave a comment