ಕಡೂರು: ಬಂಗಾರದ ಆಭರಣಗಳ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು, ಪರಸ್ಪರ ಹಲ್ಲೆ ಹಾಗೂ ಕೊಲೆ ಬೆದರಿಕೆ ಆರೋಪ ಕೇಳಿಬಂದಿರುವ ಘಟನೆ ಸಿಂಗಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆ.9ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಸಂಬಂಧ ಸಿಂಗಟಗೆರೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮೊದಲ ಪ್ರಕರಣದಲ್ಲಿ, ಶಿಕ್ಷಕ ವೃತ್ತಿಯಲ್ಲಿರುವ ಮಹಿಳೆಯೊಬ್ಬರು ನೀಡಿದ ದೂರಿನಂತೆ, ಅವರ ತಮ್ಮ ಕೆ.ಆರ್. ವಿಜಯಕುಮಾರ್ ಹಾಗೂ ಅವರ ಪತ್ನಿ ಆಶಾ ಮನೆ ಬಳಿ ಬಂದು ಬಂಗಾರದ ಒಡವೆಗಳನ್ನು ಬಿಡಿಸಿಕೊಂಡ ವಿಚಾರದಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ. ಆಶಾ ಅವರು ದೂರುದಾರರಿಗೆ ಕೈಯಿಂದ ಹಲ್ಲೆ ಮಾಡಿದ್ದು, ವಿಜಯಕುಮಾರ್ ಅವರು ದೂರುದಾರರ ಪತಿ ಮೂರ್ತಿ ಅವರಿಗೆ ದೊಣ್ಣೆಯಿಂದ ಹೊಡೆದು, ಬಳಿಕ ಮುಷ್ಟಿಯಿಂದ ಬಾಯಿಗೆ ಗುದ್ದಿ ಹಲ್ಲಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದೂರುದಾರರ ಮಗ ದರ್ಶನ್ಗೂ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಾಯಗೊಂಡ ಮೂರ್ತಿ ಹಾಗೂ ದರ್ಶನ್ ಅವರನ್ನು ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಬಳಿಕ ದೂರು ನೀಡಲಾಗಿದೆ. ಈ ಸಂಬಂಧ ಸಿಂಗಟಗೆರೆ ಠಾಣೆ ಮೊ.ನಂ.39/2026ರಲ್ಲಿ ಬಿಎನ್ಎಸ್ನ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಇದಕ್ಕೆ ಪ್ರತಿಯಾಗಿ ದಾಖಲಾಗಿರುವ ಕೌಂಟರ್ ಪ್ರಕರಣದಲ್ಲಿ, ವಿಜಯಕುಮಾರ್ ಅವರ ಪತ್ನಿ ಆಶಾ ಅವರು ನೀಡಿದ ದೂರಿನಂತೆ, ಕೋವಿಡ್ ಸಮಯದ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಸುಮಾರು 250ರಿಂದ 300 ಗ್ರಾಂ ಬಂಗಾರದ ಆಭರಣಗಳನ್ನು ₹7.50 ಲಕ್ಷಕ್ಕೆ ಬೆಂಗಳೂರಿನ ಮುತ್ತೂಟ್ ಹಾಗೂ ಮಣಪ್ಪುರಂ ಫೈನಾನ್ಸ್ನಲ್ಲಿ ಅಡವಿಟ್ಟಿದ್ದರು. ಬಳಿಕ ಮೂರ್ತಿ ಹಾಗೂ ರೇಣುಕಮ್ಮ ಅವರು ಹಣ ನೀಡಿ ಆಭರಣಗಳನ್ನು ಬಿಡಿಸಿಕೊಂಡಿದ್ದರು ಎನ್ನಲಾಗಿದೆ.
ಆಭರಣಗಳನ್ನು ಮೂರು–ನಾಲ್ಕು ವರ್ಷಗಳ ಬಳಿಕ ವಾಪಸ್ ಪಡೆಯುವುದಾಗಿ ಹೇಳಿದ್ದರೂ, ಆ.9ರಂದು ಈ ವಿಚಾರವಾಗಿ ಕೇಳಲು ಹೋದಾಗ ಮೂರ್ತಿ ಹಾಗೂ ರೇಣುಕಮ್ಮ ಅವರು ಆಭರಣಗಳನ್ನು ಮಾರಾಟ ಮಾಡಿದ್ದು, ತಮ್ಮ ಬಳಿ ಬಂಗಾರ ಇಲ್ಲ ಎಂದು ತಿಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವೇಳೆ ಮೂರ್ತಿ, ರೇಣುಕಮ್ಮ, ದರ್ಶನ್ ಹಾಗೂ ನಿರಂಜನ್ ಸೇರಿಕೊಂಡು ತಮಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದರ್ಶನ್ ಸಿಮೆಂಟ್ ಶೀಟ್ ತುಂಡಿನಿಂದ ತಲೆ, ಹಣೆ ಹಾಗೂ ಬೆನ್ನಿಗೆ ಹೊಡೆದಿದ್ದು, ನಿರಂಜನ್ ಸೈಕಲ್ ಪಂಪ್ನಿಂದ ಬೆನ್ನು ಮತ್ತು ಸೊಂಟಕ್ಕೆ ಹೊಡೆದಿದ್ದಾರೆ. ರೇಣುಕಮ್ಮ ದೊಣ್ಣೆಯಿಂದ ತಲೆಗೆ ಹೊಡೆದಿದ್ದು, ಮೂರ್ತಿ ಕೂಡ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಎಲ್ಲರೂ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಗಾಯಗೊಂಡ ಮಹಿಳೆಯನ್ನು ಪತಿ ವಿಜಯಕುಮಾರ್ ಕಡೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಈ ಸಂಬಂಧ ಸಿಂಗಟಗೆರೆ ಠಾಣೆ ಮೊ.ನಂ.40/2026ರಲ್ಲಿ ಬಿಎನ್ಎಸ್ನ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಬಂಗಾರದ ಆಭರಣಗಳ ವಿಚಾರಕ್ಕೆ ಸಂಬಂಧಿಸಿದ ಹಣಕಾಸಿನ ವಿವಾದವೇ ಎರಡು ಕುಟುಂಬಗಳ ನಡುವಿನ ಗಲಾಟೆಗೆ ಕಾರಣವಾಗಿದೆ ಎನ್ನಲಾಗಿದ್ದು, ಪ್ರಕರಣಗಳ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Clashes between two families over gold jewelry
Leave a comment