ಚಿಕ್ಕಮಗಳೂರು: ತತ್ವ ಸಿದ್ದಾಂತ, ವಿಚಾರಗಳನ್ನು ಬಲಿಕೊಡದೆ ಸಂಘಟನೆಯನ್ನು ಬೆಳೆಸಬೇಕು. ಯುವ ಪೀಳಿಗೆ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಮೈಸೂರು ಪ್ರಕಾಶ್ ಹೇಳಿದರು.
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಆಯೋಜಿಸಿದ್ದ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ವಾಹನ ಜಾಥಾ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
1980ರಲ್ಲಿ ಗುಂಡೂರಾವ್ ಸರ್ಕಾರದ ಅವಧಿಯಲ್ಲಿ ನಡೆದ ಗಲಭೆಯಲ್ಲಿ ರೈತರ ಸೇರಿ ಈವರೆಗೆ ಸಾವಿರಾರು ರೈತರ ಬಲಿದಾನವಾಗಿದೆ. ಅವರ ನೆನಪಿಗಾಗಿ ರೈತ ಹುತಾತ್ಮ ದಿನ ಆಚರಿಸಲಾಗುತ್ತಿದೆ ಎಂದರು.
‘ಯುವ ಪೀಳಿಗೆ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಒಬ್ಬನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳಬಾರದು. ಇಂದು ನಾವು ಬಿತ್ತುವ ಬೀಜ ಹೆಮ್ಮರವಾಗಿ ಬೆಳೆಯುತ್ತದೆ ಎಂದು ಭಾವಿಸಿ ಸಂಘಟನೆ ಕಟ್ಟಬೇಕು ಎಂದು ತಿಳಿಸಿದರು.
ಈ ಹಿಂದೆ ಶಿಸ್ತುಬದ್ಧವಾಗಿ ಕಟ್ಟಿದ ಸಂಘಟನೆ ಛಿದ್ರವಾಗಿದೆ. ರೈತರ ಹೋರಾಟದ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಬೇಕು. ಪ್ರಾಮಾಣಿಕ ಮತ್ತು ಬದ್ಧತೆಯಿಂದ ಸಂಘಟನೆ ಕಟ್ಟಬೇಕು ಎಂದು ಅವರು ಹೇಳಿದರು.
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ವಸಂತಕುಮಾರ್ ಮಾತನಾಡಿ, ‘ದೇಶದ ಜನರಿಗೆ ಅನ್ನ ನೀಡುವ ಶಕ್ತಿ ರೈತರಿಗೆ ಇದೆ. ಆಳುವ ಸರ್ಕಾರ ರೈತ ಕಾರ್ಮಿಕರಿಗೆ ಸಂಬಳ ನಿಗದಿ ಮಾಡಬೇಕು. ಇಎಸ್ಐ, ಪಿಎಫ್ ನೀಡಬೇಕು. ರೈತರ ಸಾಲಮನ್ನಾ ಮಾಡಬೇಕು. ವಾಹನಗಳಿಗೆ ಟೋಲ್ನಲ್ಲಿ ಹಣ ವಸೂಲಿ ಮಾಡುವುದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ವಿವಿಧ ಇಲಾಖೆ ಅಧಿಕಾರಿಗಳು ರೈತ ಅದಾಲತ್ ಮಾಡುವ ಮೂಲಕ ಸ್ಥಳದಲ್ಲಿ ರೈತರ ಸಮಸ್ಯೆ ಬಗೆಹರಿಸುವ ಚಿಂತನೆಯನ್ನು ಸರ್ಕಾರ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಮಸಗಲಿ ಸಂತ್ರಸ್ತ ಹಾಗೂ ಹೋರಾಟಗಾರ ಎಂ.ಸಿ. ಬಸವರಾಜ್ ಮಾತನಾಡಿ, ‘ನಾವು ಎಲ್ಲಾ ಸರ್ಕಾರಗಳನ್ನು ನೋಡಿದ್ದೇವೆ. ಮಸಗಲಿ ನಿರಾಶ್ರಿತರ ಪರವಾಗಿ ಯಾವ ಸರ್ಕಾರವೂ ಬರಲಿಲ್ಲ’ ಎಂದರು.
ರೈತ ಮುಖಂಡ ಕೆ.ಕೆ. ಕೃಷ್ಣಗೌಡ ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರೈತ ಸಂಘದ ಸಂಘಟನಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
Farmers’ Association-Green Army protest against central and state governments
Leave a comment