ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.
ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ ಕುರಿತು ಪ್ರಮುಖ ಹೇಳಿಕೆ ನೀಡಿದ್ದಾರೆ. ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಪೂರ್ಣ ವರದಿಯನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಗೌಪ್ಯವಾಗಿ ಸೀಲ್ಡ್ ಕವರ್ನಲ್ಲಿ ಇಡಲಾಗಿದೆ ಎಂದು ಸಿ.ಟಿ. ರವಿ ತಿಳಿಸಿದ್ದಾರೆ. ಸದ್ಯ ರಾಜ್ಯ ಬಿಜೆಪಿ ಅಧ್ಯಕ್ಷರು ದೆಹಲಿ ಪ್ರವಾಸದಲ್ಲಿದ್ದು, ನಾಳೆ ಸಂಜೆ ಅವರು ಬೆಂಗಳೂರಿಗೆ ಮರಳಲಿದ್ದಾರೆ.
ಆ ಬಳಿಕ ಸಮಿತಿಯ ಮೂವರು ಸದಸ್ಯರು ಅಧ್ಯಕ್ಷರನ್ನು ಭೇಟಿಯಾಗಿ ವರದಿಯನ್ನು ಹಸ್ತಾಂತರಿಸಲಿದ್ದಾರೆ. ಈ ವರದಿಯನ್ನು ಯಾವ ಆಧಾರದ ಮೇಲೆ, ಹೇಗೆ ಸಿದ್ಧಪಡಿಸಲಾಗಿದೆ ಎಂಬ ವಿವರಣೆಯನ್ನು ನೀಡಿದ ಬಳಿಕವಷ್ಟೇ ಅದನ್ನು ಪಕ್ಷದ ಮುಖಂಡರಿಗೆ ಒಪ್ಪಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ಸೂಕ್ಷ್ಮ ವಿಷಯದ ಕುರಿತು ಮಾತನಾಡಿದ ಅವರು, ವರದಿಯ ಸಿದ್ಧತೆಗಾಗಿ ಹಲವು ವ್ಯಕ್ತಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಲಭ್ಯವಾದ ನಿಖರ ಮಾಹಿತಿಗಳನ್ನು ಆಧರಿಸಿ ವರದಿ ರೂಪಿಸಲಾಗಿದೆ. ಆದರೆ ಪಕ್ಷದ ಆಂತರಿಕ ಶಿಸ್ತಿನ ದೃಷ್ಟಿಯಿಂದ ಯಾವುದೇ ಸಂಗತಿಯನ್ನು ಸಾರ್ವಜನಿಕವಾಗಿ ಚರ್ಚಿಸಲು ತಾವು ಬಯಸುವುದಿಲ್ಲ ಎಂದಿದ್ದಾರೆ.
ವಿಶೇಷವಾಗಿ ಮತದಾನದ ಪ್ರಕ್ರಿಯೆಯು ‘ಸೀಕ್ರೆಟ್ ವೋಟಿಂಗ್’ (ಗೌಪ್ಯ ಮತದಾನ) ಆಗಿರುವುದರಿಂದ, ಕೇವಲ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಕೆಲವರನ್ನು ಅನುಮಾನಿಸಬಹುದೇ ಹೊರತು, ಯಾರನ್ನೂ ನೇರವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ ಎಂದು ಸಿ.ಟಿ. ರವಿ ಅಭಿಪ್ರಾಯಪಟ್ಟಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಲ್ಲಿ 250 ಕೋಟಿ ರೂಪಾಯಿಗೂ ಅಧಿಕ ಹಣದ ಹಗರಣ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಈ ಪ್ರಕರಣವನ್ನು ತಕ್ಷಣವೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರದ ಯಾವುದೇ ತನಿಖೆಯಿಂದಲೂ ಈ ಪ್ರಕರಣದಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ. ನಕಲಿ ಖಾತೆಗಳನ್ನು ಪತ್ತೆ ಹಚ್ಚಿದ್ದು ಸರ್ಕಾರವಲ್ಲ, ಬದಲಿಗೆ ಸಿಐಜಿ ಈ ಮಹಾ ವಂಚನೆಯನ್ನು ಬಯಲಿಗೆಳೆದಿದೆ ಎಂದು ಸ್ಪಷ್ಟಪಡಿಸಿದರು.
ಒಂದೇ ಬ್ಯಾಂಕ್ ಖಾತೆಗೆ ಸಾವಿರಾರು ಜನರ ಹಣ ವರ್ಗಾವಣೆಯಾಗಿದೆ ಎಂದರೆ ಇದು ಸಾಮಾನ್ಯ ಸಂಗತಿಯಲ್ಲ. ಅರ್ಹ ಮಹಿಳೆಯರ ಕನಸಿನ ಯೋಜನೆ ಈಗ ಕಳ್ಳರ ಪಾಲಾಗುತ್ತಿದೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಭ್ರಷ್ಟಾಚಾರದ ಕುರಿತು ಮುಖ್ಯಮಂತ್ರಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳು ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಹಿಂದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಮೌನವು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ ಎಂದರು.
ಈ ನಕಲಿ ಖಾತೆಗಳ ಹಣದ ಪಾಲು ಆಳುವವರಿಗೂ ಸಿಕ್ಕಿದೆಯೇ ಎಂಬ ಸಂಶಯ ಮೂಡುತ್ತಿದ್ದು, ಗೃಹಲಕ್ಷ್ಮಿಯರ ಹೆಸರಿನಲ್ಲಿ ಹಣ ಲೂಟಿ ಮಾಡಿರುವುದು ರಾಜ್ಯದ ಮಹಿಳೆಯರಿಗೆ ಎಸಗಿದ ದ್ರೋಹವಾಗಿದೆ ಎಂದು ಕಿಡಿಕಾರಿದರು.
ಪ್ರಭಾವಿಗಳ ಪತ್ನಿಯರಿಗೂ ಈ ಯೋಜನೆ ತಲುಪುತ್ತದೆ ಎಂದು ನಂಬಿಸಿ, ಈಗ ಇಂತಹ ಲೂಟಿ ನಡೆಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದ್ದು, ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಯೊಂದೇ ದಾರಿ ಎಂದು ಅವರು ಒತ್ತಾಯಿಸಿದ್ದಾರೆ.
Cross-voting fact-finding committee report ready
Leave a comment