ಬೀರೂರು: ಪ್ರೇಮಿಗಳು ನಾಪತ್ತೆಯಾಗಲು ಸಹಕಾರ ನೀಡಿದ್ದ ಎಂಬ ಆರೋಪದ ಮೇಲೆ ಯುವಕನನ್ನು ಠಾಣೆಗೆ ಕರೆಸಿ ಪೊಲೀಸರು ಕಿರುಕುಳ ನೀಡಿದ್ದರಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಯುವಕನ ಸಂಬಂಧಿಕರು ಹಾಗೂ ದಲಿತ ಪರ ಸಂಘಟನೆಗಳು ಪೊಲೀಸ್ ಠಾಣೆ ಎದುರು ಸೋಮವಾರ ಪ್ರತಿಭಟನೆ ನಡೆಸಿದವು.
ತರೀಕೆರೆ ತಾಲ್ಲೂಕಿನ ಕುಡೂರು ಗ್ರಾಮದ ಚಂದನ್ (21) ಆತ್ಮಹತ್ಯೆ ಮಾಡಿಕೊಂಡಿದ್ದು, ಕುಡೂರು ಗ್ರಾಮದ ಯುವತಿಯೊಬ್ಬಳು ತುಮಕೂರಿನ ಯುವಕನೊಂದಿಗೆ ನಾಪತ್ತೆಯಾಗಿದ್ದು ಅದಕ್ಕೆ ಚಂದನ್ ಕಾರಣ ಎಂದು ಯುವತಿಯ ಕುಟುಂಬದವರು ಪೊಲೀಸರಿಗೆ ದೂರು ಕೊಟ್ಟಿದ್ದರಿಂದ ಯುವಕನನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಬಿಟ್ಟು ಕಳಿಸಿದ್ದರು.
ಇದರಿಂದ ಮನನೊಂದ ಚಂದನ್ ಭಾನುವಾರ ಸಂಜೆ ಕುದ್ದೂರಿನ ತನ್ನ ಅಜ್ಜಿಯ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಪೊಲೀಸರು ಮತ್ತು ಯುವತಿಯ ಕುಟುಂಬದವರೇ ಕಾರಣ. ಮೃತನ ಕುಟುಂಬಕ್ಕೆ ನ್ಯಾಯ ದೊರೆಯುವವರೆಗೆ ಮರಣೋತ್ತರ ಪರೀಕ್ಷೆ ನಡೆಸಲು ಬಿಡುವುದಿಲ್ಲ ಎಂದು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸತತ ಮೂರು ದಿನ ಪೊಲೀಸರು ನೀಡಿದ್ದ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ತಾಳಲಾರದೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಯುವಕನ ಸಂಬಂಧಿ, ‘ಯುವತಿ ತನ್ನ ಪ್ರೇಮಿಯೊಂದಿಗೆ ಹೋಗುವುದಾಗಿ ಮತ್ತು ಈ ವಿಚಾರದಲ್ಲಿ ಚಂದು ಅಣ್ಣನಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪತ್ರದಲ್ಲಿ ಬರೆದಿಟ್ಟಿದ್ದಾಳೆ. ಆದರೆ ಪೊಲೀಸರು ಅದನ್ನು ಪರಿಗಣಿಸದೆ, ಚಂದನ್ನನ್ನು ಠಾಣೆಗೆ ಕರೆಸಿ ಯುವತಿಯ ಮನೆಯವರಿಂದ ಹಣ ಪಡೆದು ಚಂದನ್ಗೆ ಕಿರುಕುಳ ನೀಡಿ ದ್ದಾರೆ. ತಂದೆ-ತಾಯಿಗೆ ಇದ್ದ ಒಬ್ಬನೇ ಮಗ ಇಂದು ಸತ್ತಿದ್ದಾನೆ. ಮುಂದೆ ಆ ಕುಟುಂಬದ ಗತಿಯೇನು? ಈ ಕೃತ್ಯದಲ್ಲಿ ಭಾಗಿಯಾದ ಪೊಲೀಸ್ ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡಬೇಕು. ಕುಟುಂಬದವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಚಿಕ್ಕಮಗಳೂರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್ ನೇತೃತ್ವದಲ್ಲಿ ತರೀಕೆರೆ ಡಿವೈಎಸ್ಪಿ ಪರಶುರಾಮಪ್ಪ, ಬೀರೂರು ಸರ್ಕಲ್ ಇನ್ಸ್ಪೆಕ್ಟರ್ ಎನ್.ಎಸ್.ಹಾಲಪ್ಪ, ಅಜ್ಜಂಪುರ ಸಿಪಿಐ ಶ್ರೀಧರ್, ಬೀರೂರು ಠಾಣೆ ಪಿಎಸ್ಐ ಧನಂಜಯ್ ಡಿ.ಎಚ್., ಕಡೂರು ಪಿಎಸ್ಐ ಜಿ.ಆರ್.ಸಜಿತ್ ಕುಮಾರ್, ಲಕ್ಕವಳ್ಳಿ ಪಿಎಸ್ಐ ಶಶಿಕುಮಾರ್, ಕಡೂರು, ಬೀರೂರು, ಅಜ್ಜಂಪುರ ವೃತ್ತಗಳ ಸಿಬ್ಬಂದಿಯನ್ನು ನಿಯೋಜಿಸಿ ಪರಿಸ್ಥಿತಿಯನ್ನು ತಹಬಂದಿಗೆ ತರಲು ಕ್ರಮ ವಹಿಸಲಾಯಿತು. ಪ್ರತಿಭಟನಾಕಾರರ ಮನವೊಲಿಸಿ ಕೂಲಂಕಷ ವಿಚಾರಣೆ ನಡೆಸಿ ನ್ಯಾಯ ಒದಗಿಸುವುದಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
Protest in front of Birur Police Station condemning police harassment
Leave a comment