ಚಿಕ್ಕಮಗಳೂರು: ಹುತಾತ್ಮ ದಿನದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಒಳಾವರಣದ ಉದ್ಯಾನವನದಲ್ಲಿರುವ ರಾಷ್ಟ್ರಪಿತ ನೆನಪಿನಂಗಳದಲ್ಲಿ ಶುಕ್ರವಾರ ಹುತಾತ್ಮರ ದಿನಾಚರಣೆ ನಡೆಯಿತು.
ಮಹಾತ್ಮ ಗಾಂಧೀಜಿ ಪ್ರತಿಮೆಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದ ನಂತರ ಟಿ.ಎಂ.ಎಸ್. ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಸುರೇಂದ್ರ ನಾಯಕ್ ಮತ್ತು ಲಾಲಿತ್ಯ ತಂಡದವರು ಮಹಾತ್ಮಾ ಗಾಂಧೀಜಿಯವರಿಗೆ ಪ್ರಿಯವಾದ ರಘುಪತಿ ರಾಘವ ರಾಜಾರಾಂ, ವೈಷ್ಣವ ಜನತೋ ಮತ್ತಿತರ ಭಜನೆಗಳನ್ನು ಹಾಡಿದರು.
ಜಿಲ್ಲಾಧಿಕಾರಿ ಎನ್.ಎಂ.ನಾಗರಾಜು ಮಾತನಾಡಿ ಜ.೩೦ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಹುತಾತ್ಮವಾದ ದಿನವಾಗಿದೆ. ಹೀಗಾಗಿ, ಈ ದಿನವನ್ನು ಹುತಾತ್ಮರ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ದುಡಿದು ಹುತಾತ್ಮರಾದ ಎಲ್ಲ ಮಹನೀಯರಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಗಾಂಧೀಜಿ ಭಾರತೀಯ ಮೌಲ್ಯಗಳ ಪ್ರತೀಕ ಭಾರತೀಯ ಉದಾತ್ತ ಮೌಲ್ಯಗಳು ವಿಶ್ವ ಶಾಂತಿಯನ್ನು ಪ್ರತಿಪಾದಿಸುತ್ತವೆ. ವಸುದೈವ ಕುಟುಂಬಕಂ ಎಂಬ ಮಂತ್ರವು, ವೇದ, ವಚನ, ಉಪನಿಷತ್ತುಗಳಲ್ಲಿ ಬಿಟ್ಟರೆ ಯಾವುದೇ ಧರ್ಮಗಳ ಗ್ರಂಥಗಳಲ್ಲಿ ಉಲ್ಲೇಖವಾಗಿಲ್ಲ. ಗಾಂಧಿಯವರು ಸ್ವತಃ ಇದನ್ನೇ ತಮ್ಮಜೀವನದಲ್ಲಿ ಅಳವಡಿಸಿಕೊಂಡಿದ್ದವರು ಎಂದರು.
ಅವರು ಸರಳತೆಯ ಬದುಕಿಗೊಂದು ಉದಾಹರಣೆಯಾಗಿದೆ. ಸತ್ಯ ಮತ್ತು ಪ್ರಾಮಾಣಿಕತೆಯನ್ನು ಬದುಕಿನುದ್ದಕ್ಕೂ ಪ್ರತಿಪಾದಿಸಿದ್ದರು. ಅಖಂಡ ಭಾರತವನ್ನು ಪ್ರತಿನಿಧಿಸಿದ್ದ ಮಹಾತ್ಮಾಗಾಂಧಿಯವರು ಭಾರತ ವಿಭಜನೆಗೆ ಮುನ್ನ ನನ್ನ ದೇಹವನ್ನು ತುಂಡರಿಸಿ ಎಂದಿದ್ದರು. ಭಾರತ ಸ್ವತಂತ್ರವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಹಾರಾಡುವಾಗ ಗಾಂಧೀಜಿ ಪಶ್ಚಿಮ ಬಂಗಾಳದ ನೌಕಾಲಿಯಲ್ಲಿ ನಡೆದ ಕೋಮು ಗಲಭೆಯ ಸಂತ್ರಸ್ತರ ಕಣ್ಣೀರೊರೆಸಲು ತೆರಳಿದ್ದರು ಎಂದರು.
ಸೈರನ್ ಮೊಳಗಿದ ಬಳಿಕ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಚಿಕ್ಕಮಗಳೂರು ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಮಲ್ಲೇಶ್ಸ್ವಾಮಿ, ಕಲಾ ಸಂಘದ ಅಧ್ಯಕ್ಷ ಮೋಹನ್, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪಿ.ಮಂಜುನಾಥ ಜೋಷಿ, ಮುಖಂಡರಾದ ರಾಧಾ ಸುಂದ್ರೇಶ್, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿದ್ದರು.
Tribute to Mahatma Gandhi statue
Leave a comment