ಚಿಕ್ಕಮಗಳೂರು: ಯುವಕರೇ ದೇಶದ ಆಸ್ತಿ, ಇಂದು ರಾಷ್ಟ್ರ ಜಾಗತಿಕವಾಗಿ ಮುಂದುವರೆಯಲು ಯುವ ಶಕ್ತಿಯೇ ಕಾರಣ. ಸ್ಪರ್ಧಾತ್ಮಕ ಜಗತ್ತಿನಲ್ಲಿ ದೇಶದ ವಿದ್ಯಾರ್ಥಿಗಳು, ವಿಜ್ಞಾನಿಗಳು, ತಂತ್ರಜ್ಞರು ಪ್ರಪಂಚದಾದ್ಯಂತ ಮುಂಚೂಣಿಯಲ್ಲಿದ್ದಾರೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಜಿಲ್ಲಾ ಎನ್ಎಸ್ಎಸ್. ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ವಿವೇಕ-ಕುವೆಂಪು-ಪೂರ್ಣಚಂದ್ರ ತೇಜಸ್ವಿ ಪ್ರೇರಣೆ ಮತ್ತು ಪ್ರಭಾವ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ದೆಸೆಯಲ್ಲಿ ಹಾಗೂ ರಾಜಕೀಯದಲ್ಲಿ ಸ್ವಾಮಿ ವಿವೇಕಾನಂದರ ಆದರ್ಶಗಳು ನನಗೆ ಮಾರ್ಗದರ್ಶನವಾಗಿವೆ. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಸ್ವಾಭಿಮಾನ ಮೈಗೂಡಿಸಿಕೊಳ್ಳಿ, ರಾಷ್ಟ್ರಸೇವೆ ಮಾಡಿ ಎಂದು ವಿವೇಕಾನಂದರು ಕರೆ ನೀಡಿದ್ದಾರೆ. ೧೮೯೩ರಲ್ಲಿ ಅಮೇರಿಕಾದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ಇಡೀ ಜಗತ್ತು ಭಾರತದ ದೇಶದ ಕಡೆ ನೋಡುವಂತೆ ಮಾಡಿತು ಎಂದರು.
ಇಂದಿಗೂ ಸಹ ರಾಮಕೃಷ್ಣ ಮಿಷನ್ ಹೆಸರಿನಲ್ಲಿ ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ಆಶ್ರಮಗಳು, ಶಾಲಾ, ಕಾಲೇಜು, ಶಿಕ್ಷಣ ಸಂಸ್ಥೆಗಳನ್ನು ದೇಶದಾದ್ಯಂತ ನಡೆಯುತ್ತಿವೆ. ಮೂಲತಃ ನಾನು ಕೊಡಗು ಜಿಲ್ಲೆಯವನು, ಚಿಕ್ಕಂದಿನಲ್ಲಿ ಮೈಸೂರಿನ ರಾಮಕೃಷ್ಣ ಮಿಷನ್ ಶಾಲೆಯಲ್ಲಿ ಓದಿದ ಮಕ್ಕಳು ಊರಿಗೆ ಬಂದಾಗ ನಡೆದುಕೊಳ್ಳುವ ರೀತಿ ನೋಡಿ ನಮಗೆ ಪ್ರೇರಣೆ ಸಿಗುತಿತ್ತು ಎಂದು ಹೇಳಿದರು.
ಸಾವಿರಾರು ವರ್ಷಗಳಿಂದ ಹಿಂದೂ ಧರ್ಮದ ಉಳಿವಿಗೆ ದೇಶದಲ್ಲಿ ಹಲವಾರು ಮಹನೀಯರು ಶ್ರಮಿಸಿದ್ದಾರೆ. ಇದರಲ್ಲಿ ವಿವೇಕಾನಂದರದು ಕೂಡ ಪ್ರಮುಖ ಕೊಡುಗೆಯಿದೆ. ಸಹಿಷ್ಣುತೆಗೆ ಹಿಂದೂ ಧರ್ಮ ಹೆಸರುವಾಸಿಯಾಗಿದೆ. ಜಾತ್ಯತೀತ ಮನೋಭಾವದಿಂದ ನಾವು ಭಾರತೀಯರು ಒಟ್ಟಾಗಿ ಬಾಳಬೇಕು. ಯಾರು ಸಹ ಇಂತಹದೇ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಸಲ್ಲಿಸಿ ಜನಿಸಿಲ್ಲ. ಹುಟ್ಟು ಆಕಸ್ಮಿಕ, ಪ್ರತಿಯೊಂದು ಧರ್ಮಗಳು ಮಾನವೀಯ ಮೌಲ್ಯಗಳನ್ನು ಸಾರುತ್ತವೆ ಎಂದರು..
ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ, ಸ್ವಾಮಿ ವಿವೇಕಾನಂದರು ಹೇಳಿದಂತೆ, ಯುವ ಜನತೆಯು ಬದಲಾದರೆ ದೇಶ ಬದಲಾಗಲಿದೆ. ಪ್ರತಿಯೊಬ್ಬ ಯುವಕ-ಯುವತಿಯರು ತಮ್ಮ ಜೀವನವನ್ನು ಸಮಾಜದ ಹಿತಕ್ಕಾಗಿ ಸಮರ್ಪಿಸಿಕೊಂಡಾಗ ಮಾತ್ರ ಯುವ ಜನೋತ್ಸವಕ್ಕೆ ಮಹತ್ವ ಹಾಗೂ ಅರ್ಥ ದೊರೆಯಲಿದೆ. ಯುವ ಜನತೆಯು ತಮ್ಮ ಮುಂದಿನ ಉತ್ತಮ ಭವಿಷ್ಯದ ಕುರಿತು ಚಿಂತನೆ ಮಾಡಬೇಕಿದೆ. ಯುವ ಜನರ ಮೇಲೆ ಸಾಕಷ್ಟು ಜವಾಬ್ದಾರಿ ಇದ್ದು, ಯುವ ಜನತೆಯು ಮಾದಕ ವಸ್ತು ಸೇರಿದಂತೆ ಯಾವುದೇ ದುಶ್ಚಟಗಳಿಗೆ ದಾಸರಾಗಬೇಡಿ ಎಂದು ಕಿವಿಮಾತು ಹೇಳಿದರು.
ಅಮೇರಿಕಾದ ಚಿಕಾಗೋದಲ್ಲಿ ನಡೆದ ಸಮ್ಮೇಳನದಲ್ಲಿ ಭಾರತದ ಪರವಾಗಿ ಸ್ವಾಮಿ ವಿವೇಕಾನಂದರು ಭಾಗವಹಿಸುತ್ತಾರೆ. ವಿವೇಕಾನಂದರಿಗೆ ಚಿಕಾಗೋ ನಗರಕ್ಕೆ ಹೋಗಲು ಚಿಕ್ಕಮಗಳೂರಿನ ಪುರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಳಸಿಂಗ ಪೆರುಮಾಳ್ ಸಹಾಯ ಮಾಡಿದ್ದರು ಎಂದರು.
ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ನಿವೃತ್ತ ತರಬೇತಿ ನಿರ್ದೇಶಕ ಜಿ.ಎಂ.ಸರ್ವೇಶ್ವರ್ ಅವರು ‘ಸ್ವಾಮಿ ವಿವೇಕಾನಂದ-ಯುವ ಕಣ್ಮಣಿ’ ಕುರಿತು, ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಶುಭ ಮರವಂತೆ ಅವರು ‘ಶ್ರೀ ಕುವೆಂಪು-ಯುವ ಸಂದೇಶ’ ಕುರಿತು ಹಾಗೂ ಚಿಕ್ಕಮಗಳೂರಿನ ಯುವ ತರಬೇತುದಾರ ಎಚ್.ಎಸ್.ಶಿವಕುಮಾರ್ ಅವರು ‘ಶ್ರೀ ಪೂರ್ಣಚಂದ್ರ ತೇಜಸ್ವಿ-ಯುವ ಮಾರ್ಗದರ್ಶಕರು’ ಕುರಿತು ಉಪನ್ಯಾಸ ನೀಡಿದರು.
ಶೃಂಗೇರಿ ಶಾಸಕರು ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಅಧ್ಯಕ್ಷ ಟಿ.ಡಿ.ರಾಜೇಗೌಡ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಹೆಚ್.ಹರೀಶ್, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಎಸ್.ಕೀರ್ತನಾ, ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಡಾ.ಎಚ್.ಪಿ.ಮಂಜುಳಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.
Youth power is the reason why the nation is moving forward globally.
Leave a comment