ಚಿಕ್ಕಮಗಳೂರು: ಗ್ರಾಮೀಣ ಜನರ ಬದುಕು ಹಸನಾಗಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಜಾರಿಗೆ ತಂದಿದ್ದ ಮನ್ ರೇಗಾ ಯೋಜನೆಗೆ ಕೆಲವು ತಿದ್ದುಪಡಿ ತರುವ ಮೂಲಕ ‘ವಿಬಿ ಜಿ ರಾಮ್ ಜಿ’ ಹೆಸರು ಬದಲಾಯಿಸಿ ಕೇಂದ್ರದ ಬಿಜೆಪಿ ಸರ್ಕಾರ ಕೂಲಿ ಕಾರ್ಮಿಕರು, ರೈತರಿಗೆ ಅನ್ಯಾಯ ಮಾಡಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಹೊಂದಿರುವ ಇಂಧನ ಸಚಿವ ಕೆ.ಜೆ. ಜಾರ್ಜ್ ದೂರಿದ್ದಾರೆ.
“ಗ್ರಾಮೀಣ ಜನರ ಜೀವನ ಮಟ್ಟ ಸುಧಾರಣೆಯಾಗಬೇಕು. ಸ್ಥಳೀಯವಾಗಿ ಎಲ್ಲಾ ಕಾಲದಲ್ಲೂ ಅವರಿಗೆ ಕೂಲಿ ಕೆಲಸ ಸಿಗಬೇಕು. ಅವರ ಶ್ರಮವನ್ನು ಸ್ಥಳೀಯ ಅಭಿವೃದ್ಧಿ ಕೆಲಸಕ್ಕೆ ಬಳಕೆ ಮಾಡಬೇಕೆಂಬ ಉದ್ದೇಶದಿಂದ ಗ್ರಾಮ ಪಂಚಾಯ್ತಿಗಳ ಮೂಲಕ ಮನ್ ರೇಗಾ ಯೋಜನೆಯನ್ನು 2005 ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತು ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
“ಎರಡು ದಶಕಗಳ ಬಳಿಕ ಬಿಜೆಪಿ ಈ ಯೋಜನೆಯ ಹೆಸರು ಬದಲಾಯಿಸಿ ಕಾರ್ಯಕ್ರಮದ ಸ್ವರೂಪವನ್ನು ಬದಲಾವಣೆ ಮಾಡುವ ಮೂಲಕ ಗ್ರಾಮ ಸ್ವರಾಜ್ಯದ ಪರಿಕಲ್ಪನೆಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಗ್ರಾಮ ಪಂಚಾಯ್ತಿಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಅಧಿಕಾರವನ್ನು ಕೇಂದ್ರಿಕರಣ ಮಾಡಲು ಹೊರಟಿದೆ,” ಎಂದು ಸಚಿವರು ಆರೋಪಿಸಿದರು.
“ಮನ್ ರೇಗಾ ಯೋಜನೆ ಈ ದೇಶದ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಅನ್ವಯವಾಗಲಿದೆ. ಉದ್ಯೋಗವು ಸಂವಿಧಾನಿಕ ಹಕ್ಕು, ನಿರಂತರವಾಗಿ ಲಭ್ಯವಿರಬೇಕು. ಆದರೆ, ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಮೂಲಕ ತನ್ನ ಅಣತಿಯಂತೆ ದೇಶವನ್ನು ನಡೆಸಿಕೊಳ್ಳಲಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ಗ್ರಾಮಸಭೆ ಮತ್ತು ಗ್ರಾಮ ಪಂಚಾಯ್ತಿಗಳಿಗೆ ಯೋಜನೆ ರೂಪಿಸುವ ಸಂಪೂರ್ಣ ಸ್ವಾತಂತ್ರ್ಯ ಇರುತ್ತದೆ. ಆದರೆ, ಕೇಂದ್ರ ಸರ್ಕಾರ ರಾಷ್ಟ್ರಾದ್ಯಂತ ರೂಪಿಸಿರುವ ಏಕ ರೂಪ ಮಾದರಿಯನ್ವಯ ಮಾತ್ರವೇ ಗ್ರಾಮ ಪಂಚಾಯ್ತಿಗಳು ಕೆಲಸಗಳನ್ನು ಮಾಡಬೇಕು. ಆದರೆ, ವಿಬಿ ಜಿ ರಾಮ್ ಜಿಯಿಂದಾಗಿ ಗ್ರಾಮ ಸಭೆ ಹಾಗೂ ಪಂಚಾಯ್ತಿಗಳಿಗೆ ಅವಶ್ಯಕವಿರುವ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಅಧಿಕಾರ ಮೊಟಕುಗೊಳ್ಳಲಿದೆ,” ಎಂದು ಆರೋಪಿಸಿದರು.
“ವರ್ಷದ 365 ದಿನ ಯಾವ ಸಮಯದಲ್ಲಾದರೂ ಕೆಲಸ ಕೇಳಬಹುದು. ಯಾರ ಮುಲಾಜಿಗೂ ಬೀಳದಂತೆ ಬಡ ಜನರು ವರ್ಷ ಪೂರ್ತಿ ಬೇಡಿಕೆಯ ಅಧಾರದ ಮೇಲೆ ಉದ್ಯೋಗ ಮಾಡುವ ವ್ಯವಸ್ಥೆ ಇತ್ತು. ವಿಬಿ ಜಿ ಗ್ರಾಮ್ ಜಿ ಪ್ರಕಾರ ಪೂರ್ವ ನಿರ್ಧಾರಿತ 60 ದಿನ ಕೆಲಸಕ್ಕೆ ನಿರ್ಬಂಧ ಹೇರಲಾಗಿದೆ. ಈ ಸಂದರ್ಭದಲ್ಲಿ ಕಾರ್ಮಿಕರು ಕೆಲಸದ ಬೇಡಿಕೆ ಸಲ್ಲಿಸಲು ಅವಕಾಶ ಇಲ್ಲ. ಗುತ್ತಿಗೆದಾರರು ಪರೋಕ್ಷವಾಗಿ ಒಳ ಬರಲು ಅವಕಾಶ ಇದೆ. ಜಟಿಲವಾದ ತಾಂತ್ರಿಕ ವ್ಯವಸ್ಥೆಗಳ ಹೇರಿಕೆಯ ಮೂಲಕ ಯೋಜನೆಯಡಿ ಉದ್ಯೋಗದ ಅವಕಾಶ ವಂಚಿಸುವ ಯತ್ನ ಮಾಡಲಾಗಿದೆ,” ಎಂದು ಹೇಳಿದರು.
“ಕೆಲಸ ಕೇಳುವ ಪ್ರತಿಯೊಬ್ಬರಿಗೂ ಕೆಲಸ ಮತ್ತು ನ್ಯಾಯಬದ್ಧ ಕೂಲಿ ಸಿಗಬೇಕು ಎಂಬುದು ಕಾನೂನಾತ್ಮಕ ಹಕ್ಕು. ಜನರ ಬೇಡಿಕೆಯ ಆಧಾರದಲ್ಲಿ ಅನುದಾನದ ಪ್ರಮಾಣ ತೀರ್ಮಾನ ಹಾಗೂ ವೆಚ್ಚ ನಿರ್ಧಾರವಾಗುತ್ತಿತ್ತು. ಆದರೆ, ಹೊಸ ಕಾಯ್ದೆಯಿಂದ ಕೇಂದ್ರ ಸರ್ಕಾರ ತಾನು ಪೂರ್ವ ನಿಗದಿಪಡಿಸಿದ ಯೋಜನೆ ಹಣ ವೆಚ್ಚವಾದ ತಕ್ಷಣ ಕೆಲಸ ನಿಲ್ಲುತ್ತದೆ. ಜನರ ಕೆಲಸದ ಬೇಡಿಕೆಗೆ ಯಾವುದೇ ಬೆಲೆ ಇರುವುದಿಲ್ಲ,” ಎಂದರು.
“ಮನ್ ರೇಗಾ ಯೋಜನೆಯನ್ನು ಬದಲಾಯಿಸಿರುವ ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ಹೋರಾಟ ನಡೆಸಲು ಕಾಂಗ್ರೆಸ್ ಪಕ್ಷ ಉದ್ದೇಶಿಸಿದ್ದು, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು,” ಎಂದು ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಶಾಸಕರು ಹಾಗೂ ಕ್ರೆಡಲ್ ಅಧ್ಯಕ್ಷ ಟಿ.ಡಿ. ರಾಜೇಗೌಡ, ಶಾಸಕರಾದ ಎಚ್.ಡಿ. ತಮ್ಮಯ್ಯ, ನಯನಾ ಮೋಟಮ್ಮ, ಆನಂದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್, ವಿಧಾನಪರಿಷತ್ ಮಾಜಿ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಪಕ್ಷದ ಜಿಲ್ಲಾ ವಕ್ತಾರ ರೂಬಿನ್ ಮೋಸಸ್ ಉಪಸ್ಥಿತರಿದ್ದರು.
‘VB-G Ram Ji’ Gram Panchayat is fatal to decentralization
Leave a comment