ಚಿಕ್ಕಮಗಳೂರು: ನಗರದ ಗೃಹಮಂಡಳಿ ಬಡಾವಣೆಯ ಟೀಚರ್ಸ್ ಲೇಔಟ್ ನಲ್ಲಿ ನಿವೃತ್ತ ಸರ್ಕಾರಿ ಶಿಕ್ಷಕರ ಸ್ನೇಹ ಸಮ್ಮೀಲನ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು. ಯಗಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲ ಎಸ್.ಆರ್. ಓಂಕಾರಪ್ಪನವರ ‘ಸದ್ಗುರು’ ನಿವಾಸದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಿಂದಿಗೆರೆಯ ಓಂಕಾರಪ್ಪನವರು ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಾಗಿ, ಕಾರ್ಯಾರಂಭ ಮಾಡಿ, ಕಾಲೇಜಿನ ಉಪಪ್ರಾಂಶುಪಾಲರಾಗಿ ನಿವೃತ್ತರಾದವರು. ಸದ್ಯ ಗೃಹಮಂಡಳಿ ಬಡಾವಣೆಯ ಟೀಚರ್ಸ್ ಲೇಔಟ್ ನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದು, ತಮ್ಮೊಂದಿಗೆ ಕಾರ್ಯನಿರ್ವವಹಿಸಿದ ಎಲ್ಲ ಸಹದ್ಯೋಗಿಗಳನ್ನು ಆತ್ಮೀಯವಾಗಿ ಆಹ್ವಾನಿಸಿ ಅವರನ್ನು ಆದರ ಪೂರ್ವಕವಾಗಿ ಗೌರವಿಸಿದರು.
ʻಶಿಕ್ಷಕರ ಬೋಧನೆ ಮಕ್ಕಳ ಹೃದಯ ಮುಟ್ಟುವಂತಿರಲಿʼ
ನಿವೃತ್ತ ಶಿಕ್ಷಕರು ತಮ್ಮ ಸೇವಾ ದಿನಗಳ ಸಹದ್ಯೋಗಿಗಳನ್ನು ಕಾರ್ಯಕ್ರಮದ ಮೂಲಕ ಭೇಟಿ ಮಾಡಿದರು. ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಹಾಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಕೂಡ ಭಾಗವಹಿಸಿ, ತಮ್ಮ ಹಿರಿಯರಿಗೆ ಗೌರವ ನಮನ ಸಲ್ಲಿಸಿದರು. ಮಕ್ಕಳಿಗೆ ಗುರುಗಳು ನೀಡುವ ಬೋಧನೆ ಕೇವಲ ನೆನಪಿನಲ್ಲಿ ಉಳಿಯದೆ ಅದು ಹೃದಯ ಮುಟ್ಟುವಂತಿರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಯಗಟಿಯ ವೈ.ಕೆ. ರಂಗಪ್ಪ, ನೀಲನಹಳ್ಳಿಯ ಎನ್.ಎಚ್. ಮಾಳಪ್ಪ, ಹೊಸದುರ್ಗದ ಹನುಮಂತಪ್ಪ, ದಾವಣಗೆರೆ ಎಪಿಎಂಸಿ ನಿವೃತ್ತ ನೌಕರರಾದ ಪರಮೇಶ್ವರಪ್ಪ ಕೊಂಡಜ್ಜಿ, ದಾವಣಗೆರೆಯ ಪ್ರೌಢಶಾಲಾ ಮುಖ್ಯ ಶಿಕ್ಷಕ ಹನುಮಂತಪ್ಪ, ಶಿಕ್ಷಕ ಲೋಕೇಶ್ ಸೇರಿದಂತೆ ಇನ್ನಿತರ ನಿವೃತ್ತ ಶಿಕ್ಷಕರು ಮತ್ತು ಅಧಿಕಾರಿಗಳನ್ನು ಗೌರವಿಸಲಾಯಿತು.
ಇದೇ ವೇಳೆ ಉಪಪ್ರಾಂಶುಪಾಲರಾಗಿ ನಿವೃತ್ತರಾದರೂ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಮೂಲಕ ಎಂ.ಎ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ 4ನೇ ರ್ಯಾಂಕ್ ಪಡೆದು ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿ ತಂದ ಎಸ್. ಆರ್. ಓಂಕಾರಪ್ಪ- ದಂಪತಿಯನ್ನು ಗೌರವಿಸಲಾಯಿತು. ಸ್ನೇಹಿತರು ಮತ್ತು ಸಂಬಂಧಿಕರು ಕೂಡ ಅಭಿನಂದಿಸಿದರು. ನಂತರ ಅತಿಥಿಗಳಿಗೆ ಔತಣಕೂಟವನ್ನು ಏರ್ಪಡಿಸಲಾಗಿತ್ತು.
Retired Teachers’ Friendship Gathering
Leave a comment