ಚಿಕ್ಕಮಗಳೂರು: ಗೃಹ ಸಚಿವ ಪರಮೇಶ್ವರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಯುವ ಮೋರ್ಚಾ ಜಿಲ್ಲಾಧಕ್ಷನ ವಿರುದ್ಧ ಪೊಲೀಸರು ಸರಿಯಾದ ಕಾನೂನು ಕ್ರಮಕೈಗೊಂಡಿದ್ದಾರೆ. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸದ್ಯ ಸೆರೆಮನೆ ಸೇರಿದ್ದು, ಆತನಿಂದ ಈ ಕೃತ್ಯ ಎಸಗಿಸಿದ ಬಿಜೆಪಿ ಮುಖಂಡರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಸಂಘಪರಿವಾರ ಮತ್ತು ಬಿಜೆಪಿಯವರು ಶೋಷಿತ ಸಮುದಾಯಗಳ ಯುವಕರನ್ನು ತನ್ನ ಸ್ವಾರ್ಥಕ್ಕೆ ಹೇಗೆ ಬಳಸಿಕೊಂಡು ನಡು ನೀರಿನಲ್ಲಿ ಕೈಬಿಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ತಿಳಿಸಿದ್ದಾರೆ.
ಗುರುವಾರ ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿಯನ್ನು ಬಿಜೆಪಿ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಹುನ್ನಾರ ನಡೆಸಿದೆ. ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿದ ಜೈಲು ಅಧಿಕಾರಿಗಳ ವಿರುದ್ಧ ಸರಕಾರ ಅಗತ್ಯ ಕಾನೂನು ಕ್ರಮಕೈಗೊಂಡಿದೆ. ಈ ಘಟನೆಯನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಸಂಚು ಮಾಡಿದ್ದ ಬಿಜೆಪಿಯವರು ರಾಜ್ಯ ಸರಕಾರದ ಆಡಳಿತ ವೈಫಲ್ಯ ಎಂದು ಬಿಂಬಿಸಲು ಇತ್ತೀಚೆಗೆ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಎಂಬಾತ ಗೃಹ ಸಚಿವರಿಗಿರುವ ಗೌರವದ ಸ್ಥಾನ ಮಾನದ ಅರಿವಿಲ್ಲದೇ ಓರ್ವ ಗೂಂಡನಂತೆ ಮಾತನಾಡಿದ್ದಾನೆ. ಗೃಹ ಸಚಿವರನ್ನು ಟೀಕಿಸುವ ಭರದಲ್ಲಿ ಅವರ ಮಗನ ವಿರುದ್ಧ ಸಾರ್ವಜನಿಕವಾಗಿ ಅಸಂಬದ್ಧವೂ, ಅವಹೇಳನಕಾರಿಯೂ ಆದ ಪದಗಳಿಂದ ನಿಂದಿಸಿದ್ದಾನೆ. ಈ ಘಟನೆ ಬಳಿಕ ಪೊಲೀಸರು ಸಂತೋಷ್ ಕೋಟ್ಯಾನ್ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸುವ ಮೂಲಕ ಸರಿಯಾದ ಕಾನೂನು ಕ್ರಮಕೈಗೊಂಡಿದ್ದಾರೆ ಎಂದಿದ್ದಾರೆ.
ಗೃಹಸಚಿವ ಪರಮೇಶ್ವರ್ ರಾಜ್ಯಕಂಡ ಅಪರೂಪದ ರಾಜಕಾರಣಿಯಾಗಿದ್ದು, ಸಜ್ಜನಿಕೆ, ಪ್ರಾಮಾಣಿಕತೆಗೆ ಹೆಸರಾಗಿದ್ದಾರೆ. ವಿರೋಧ ಪಕ್ಷದವರಿಂದಲೂ ಪರಮೇಶ್ವರ್ ಗೌರವಕ್ಕೆ ಪಾತ್ರರಾಗುವ ಮೂಲಕ ಅಜಾತಶತೃ ಆಗಿದ್ದಾರೆ. ಇಂತಹ ಧೀಮಂತ ವ್ಯಕ್ತಿತ್ವದ ರಾಜಕಾರಣಿ ಬಗ್ಗೆ ಮಾತನಾಡುವ ಸಂದರ್ಭ ಎಂತಹವರೂ ಅಳೆದು ತೂಗಿ ಮಾತನಾಡುತ್ತಾರೆ, ಆದರೆ ಸಂಘಪರಿವಾರದ ಕೂಸಾಗಿರುವ ಹಾಗೂ ತಲೆಯಲ್ಲಿ ಜಾತಿ, ಮತದ ವಿಷದ ಅಮಲು ತುಂಬಿಸಿಕೊಂಡಿರುವ ಸಂತೋಷ್ ಕೋಟ್ಯಾನ್ ಗೃಹ ಸಚಿವರ ಕುಟುಂಬಸ್ಥರ ವಿರುದ್ಧ ಸಾರ್ವಜನಿಕವಾಗಿ ಬಾಯಿಗೆ ಬಂದಂತೆ ಮಾತನಾಡುವ ಮೂಲಕ ತೇಜೋವಧೆ ಮಾಡಿದ್ದಾನೆ. ಈತನ ವಿರುದ್ಧ ಪೊಲೀಸರು ಗಂಭೀರ ಕಾನೂನು ಕ್ರಮಕೈಗೊಳ್ಳಬೇಕು ಮತ್ತು ಈತನ ಜೊತೆಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ನಾಯಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದವರು ಒತ್ತಾಯಿಸಿದ್ದಾರೆ.
ಸಂತೋಷ್ ಕೋಟ್ಯಾನ್ ಶೋಷಿತ ಸಮುದಾಯದ ಯುವಕನಾಗಿದ್ದು, ಆತ ತಿಳುವಳಿಕೆ ಇಲ್ಲದ ಎಳಸು ಎಂಬುದು ಆತನ ಮಾತು, ನಡವಳಿಕೆಯಿಂದ ಸ್ಪಷ್ಟವಾಗಿದೆ. ಇಂತಹ ಬಿಸಿ ರಕ್ತದ ಯುವಕರನ್ನೇ ದಾಳ ಮಾಡಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುತ್ತಿರುವ ಬಿಜೆಪಿ ಮತ್ತು ಸಂಘಪರಿವಾರ ಅಮಾಯಕ ಯುವಕರ ತಲೆಯಲ್ಲಿ ಧರ್ಮದ ಮಧ ತುಂಬಿ ಬೀದಿಗಳಿಸಿ ನಂತರ ಬೀದಿಪಾಲು ಮಾಡುತ್ತಿದೆ. ಸಂತೋಷ್ ಕೋಟ್ಯಾನ್ ಆಡಿದ ಮಾತುಗಳ ಹಿಂದೆ ಬಿಜೆಪಿ, ಸಂಘಪರಿವಾರದ ನಾಯಕರಿದ್ದರೂ ಈ ಘಟನೆಯಲ್ಲಿ ಸಂತೋಷ್ ಕೋಟ್ಯಾನ್ ಜೈಲು ಪಾಲಾಗಿದ್ದಾನೆ. ಆತನ ತಲೆಗೆ ಸಲ್ಲದ ವಿಚಾರಗಳನ್ನು ತುಂಬಿ ಗೃಹ ಸಚಿವರ ತೇಜೋವಧೆ ಮಾಡಿಸಿದ ಬಿಜೆಪಿ ನಾಯಕರು, ಸಂಘಪರಿವಾರದ ನಾಯಕರು ಸದ್ಯ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಶೋಷಿತ ಸಮುದಾಯದ ಯುವಕ ಸದ್ಯ ಜೈಲು ಪಾಲಾಗಿದ್ದು, ಇದು ಸಂಘಪರಿವಾರ ಮತ್ತು ಬಿಜೆಪಿಯಲ್ಲಿರುವ ಶೋಷಿತ ಸಮುದಾಯಗಳ ಯುವಕರಿಗೆ ಪಾಠವಾಗಬೇಕಿದೆ ಎಂದವರು ತಿಳಿಸಿದ್ದಾರೆ.
ಸಿ.ಟಿ.ರವಿ, ಪ್ರತಾಪ್‌ಸಿಂಹ, ಚಕ್ರವರ್ತಿ ಸೂಲಿಬೆಲೆಯಂತಹ ಕೋಮುಭಾವನೆ ಪ್ರಚೋಧಿಸುವವರನ್ನೇ ಮಾದರಿ, ಆದರ್ಶವನ್ನಾಗಿಸಿಕೊಂಡಿದ್ದರ ಫಲವಾಗಿ ಸಂತೋಷ್ ಕೋಟ್ಯಾನ್ ಗೃಹಸಚಿವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿ ಜೈಲು ಪಾಲಾಗಿದ್ದಾನೆ. ಬಿಜೆಪಿ, ಸಂಘಪರಿವಾರದ ನಾಯಕರ ಈ ದುರುದ್ದೇಶವನ್ನು ಇನ್ನಾದರೂ ಬಿಜೆಪಿ ಪಕ್ಷದಲ್ಲಿರುವ ಶೋಷಿತ ಸಮುದಾಯಗಳ ಯುವಕರು ಅರ್ಥ ಮಾಡಿಕೊಳ್ಳಬೇಕು, ಜಾತಿ, ಧರ್ಮದ ಮಧವನ್ನು ನೆತ್ತಿಗೇರಿಸಿಕೊಂಡು ಯಾರದ್ದೋ ಸ್ವಾರ್ಥಕ್ಕಾಗಿ ಸಮಾಜದಲ್ಲಿ ಶಾಂತಿ ಕದಡಿ ಕಡೆಯಲ್ಲಿ ಬೀದಿಪಾಲಾಗುತ್ತಿರುವ ಬಿಜೆಪಿ, ಸಂಘಪರಿವಾರದಲ್ಲಿರುವ ಯುವಕರು ಇನ್ನಾದರೂ ಜಾಗೃತರಾಗಿ ಬಿಜೆಪಿ ಪಟಾಲಂ ತೊರೆಯಬೇಕೆಂದು ಅವರು ಕರೆ ನೀಡಿದ್ದಾರೆ.
Yuva Morcha district president jailed for insulting Home Minister
Leave a comment