ಚಿಕ್ಕಮಗಳೂರು: ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ತರಾತುರಿಯಲ್ಲಿದ್ದ ಮಹಿಳೆಯೊಬ್ಬರ ಗಮನವನ್ನು ಬೇರೆಡೆ ಸೆಳೆದು, ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಬರೋಬ್ಬರಿ ಒಂದುವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ನೆಕ್ಲೀಸ್ ಅನ್ನು ಅಪರಿಚಿತರು ಕಳ್ಳತನ ಮಾಡಿರುವ ಘಟನೆ ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ನಡೆದಿದೆ.
ಆಲ್ಲೂರಿನ ಅಯ್ಯಂಗಾರ್ ಬೇಕರಿ ಮಾಲೀಕ ಗೀತಾ ಕೋಂ ಜನಾರ್ಧನ್ ಅವರು ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರುದಾರರಾದ ಗೀತಾ ಅವರು ಮೇ 16 ರಂದು ಮಧ್ಯಾಹ್ನ ಹಾಸನದ ಖ್ಯಾತನಹಳ್ಳಿಗೆ ಹೋಗಲು ಆಲ್ಲೂರಿನಿಂದ ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ಬಂದಿದ್ದರು. ತಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಒಂದು ಬಾಕ್ಸ್‌ನೊಳಗೆ 15 ಗ್ರಾಂ ತೂಕದ ಚಿನ್ನದ ನೆಕ್ಲೀಸ್ ಅನ್ನು ಸುರಕ್ಷಿತವಾಗಿ ಇಟ್ಟುಕೊಂಡಿದ್ದರು.
ಮಧ್ಯಾಹ್ನ 3:00 ಗಂಟೆಯ ಸುಮಾರಿಗೆ ಹಾಸನಕ್ಕೆ ಹೋಗುವ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್‌ಗೆ ಬಂದಾಗ, ಬಸ್ ಹತ್ತಲು ಪ್ರಯಾಣಿಕರ ಭಾರಿ ನೂಕುನುಗ್ಗಲು ಉಂಟಾಗಿತ್ತು. ಈ ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಅತ್ಯಂತ ಚಾಣಾಕ್ಷತನದಿಂದ ವ್ಯಾನಿಟಿ ಬ್ಯಾಗ್‌ನ ಜಿಪ್ ತೆರೆದು ಒಳಗಿದ್ದ ಚಿನ್ನದ ನೆಕ್ಲೀಸ್ ಬಾಕ್ಸ್ ಅನ್ನು ಎಗರಿಸಿದ್ದಾರೆ.
ಬಸ್ ಒಳಗಡೆ ಹೋದ ನಂತರ ಗೀತಾ ಅವರು ಬ್ಯಾಗ್ ಪರಿಶೀಲಿಸಿದಾಗ ಜಿಪ್ ತೆರೆದಿರುವುದು ಕಂಡುಬಂದಿದೆ. ತಕ್ಷಣ ಆತಂಕದಿಂದ ಒಳಗಡೆ ನೋಡಿದಾಗ ಚಿನ್ನದ ನೆಕ್ಲೀಸ್ ಇದ್ದ ಬಾಕ್ಸ್ ನಾಪತ್ತೆಯಾಗಿತ್ತು. ಕಳ್ಳತನವಾಗಿರುವ ಈ ಒಡವೆಯ ಅಂದಾಜು ಮೌಲ್ಯ 1,50,000 ರೂಪಾಯಿಗಳಾಗಿವೆ. ಕಳ್ಳತನ ಮಾಡಿದ ಅಪರಿಚಿತ ವ್ಯಕ್ತಿಗಳು ಎಲ್ಲಿಯಾದರೂ ಸಿಗಬಹುದು ಎಂಬ ಆಸೆಯಿಂದ ಗೀತಾ ಅವರು ಮೂರು ದಿನಗಳ ಕಾಲ ಸತತವಾಗಿ ಹುಡುಕಾಟ ನಡೆಸಿದ್ದಾರೆ.
ಆದರೆ ಯಾವುದೇ ಸುಳಿವು ಸಿಗದ ಕಾರಣ ತಡವಾಗಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರ ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
Woman’s gold necklace worth Rs 1.5 lakh stolen
Leave a comment