ಚಿಕ್ಕಮಗಳೂರು: ಸಕಾಲದಲ್ಲಿ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರು, ಒಣಗಿ ನಿಂತಿರುವ ಭೂಮಿ, ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆ ಒಡೆಯದೆ ಬಿಸಿಲಿನ ಝಳಕ್ಕೆ ಸಿಲುಕಿ ಸುಟ್ಟುಹೋಗಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಅವರು ಜಿಲ್ಲೆಯ ತರೀಕೆರೆ, ಕಡೂರು, ಅಜ್ಜಂಪುರ ಹಾಗೂ ಚಿಕ್ಕಮಗಳೂರು ತಾಲೂಕಿನ ಕೆಲ ಭಾಗಗಳಲ್ಲಿ ಶುಕ್ರವಾರ ಬರ ಸ್ಥಿತಿಯನ್ನು ಪರಿಶೀಲನೆ ನಡೆಸಿದರು.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದ್ದರೆ ಬಯಲು ಸೀಮೆ ಪ್ರದೇಶಗಳಾದ ಈ ನಾಲ್ಕು ತಾಲೂಕುಗಳಲ್ಲಿ ಮಳೆಯೇ ಇಲ್ಲದೆ ಜನ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲು ತರಿಕೆರೆ ತಾಲೂಕಿಗೆ ಭೇಟಿ ನೀಡಿದ ಸಚಿವರು ಅಲ್ಲಿನ ಬೆಳೆಗಳ ಸ್ಥಿತಿಗತಿ ಪರಿಶೀಲಿಸಿದರು. ಬಳಿಕ ಅಜ್ಜಂಪುರ ತಾಲೂಕಿನ ಬೇಗೂರು, ಮುದಿಗೆರೆ, ಕಲ್ಕೆರೆ ಭಾಗಕ್ಕೆ ಭೇಟಿ ನೀಡಿದರು. ಈ ಭಾಗದಲ್ಲಿ ಈರುಳ್ಳಿ ನಾಟಿ ಮಾಡಿದ ರೈತರು ಸಂಪೂರ್ಣವಾಗಿ ಬೆಳೆ ನಾಶವಾಗಿರುವುದು ಕಂಡು ಬಂದಿತು. ಕೆರೆಗಳಲ್ಲಿ ಒಂದು ಹನಿ ಸಹ ನೀರಿಲ್ಲದಿರುವುದು ಸಚಿವರು ಗಮನಕ್ಕೆ ಬಂದಿತು.
ಕಡೂರು ತಾಲೂಕಿನ ಚಿಕ್ಕಬಳ್ಳೇಕೆರೆ ಕಾವಲು, ದೊಣ್ಣೆ ಕೋರನಹಳ್ಳಿ, ಅಣ್ಣೆಗೆರೆ ಭಾಗಕ್ಕೆ ಭೇಟಿ ನೀಡಿದ ಸಂದರ್ಭ ರೈತರು ಕನಿಷ್ಠ ಬಿತ್ತನೆ ಮಾಡಲು ಸಹ ಆಗದಿರುವಷ್ಟು ಕಡಿಮೆ ಮಳೆಯಾಗಿರುವುದು ಕಂಡು ಬಂತು. ಈ ಸಂದರ್ಭದಲ್ಲಿ ರೈತರಿಗೆ ಧೈರ್ಯ ತುಂಬಿದ ಸಚಿವರು, ಮುಂದಿನ ದಿನಗಳಲ್ಲಿ ನಿರೀಕ್ಷೆಯಂತೆ ಮಳೆಯಾದಲ್ಲಿ ಮಾತ್ರ ಬೆಳೆ ಬೆಳೆಯುವಂತೆಯೂ, ಇಲ್ಲದಿದ್ದಲ್ಲಿ ಕಡಿಮೆ ನೀರನ್ನು ಅವಲಂಬಿಸಿ ಬೆಳೆಯುವ ಬೆಳೆಗಳನ್ನು ಅವಲಂಬಿಸುವಂತೆ ಸಲಹೆ ನೀಡಿದರು.
ಮಳೆ ಹಾಗೂ ಬೆಳೆಯ ಬಗ್ಗೆ ಸಚಿವರು ಮಾಹಿತಿ ಬಯಸಿದಾಗ, ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ, ತರೀಕೆರೆಯ ಕೆಲಭಾಗ ಅಜ್ಜಂಪುರ ಹಾಗೂ ಕಡೂರು ತಾಲೂಕುಗಳಲ್ಲಿ ವಾಡಿಕೆಗಿಂತ ಶೇ. ೭೦ಕ್ಕೂ ಕಡಿಮೆ ಮಳೆಯಾಗಿದೆ. ರೈತರಿಗೆ ಇದುವರೆಗೆ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಈರುಳ್ಳಿ, ಆಲೂಗಡ್ಡೆ, ಹಸಿಮೆಣಸಿನ ಬೆಳೆಗಳ ಬದಲು ರಾಗಿ ಬೆಳೆಯುವಂತೆ ರೈತರಿಗೆ ಸೂಚನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಶಾಸಕರಾದ ಜಿ.ಎಚ್.ಶ್ರೀನಿವಾಸ್, ಕೆ.ಎಸ್.ಆನಂದ್, ಹೆಚ್.ಡಿ.ತಮ್ಮಯ್ಯ, ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಮಂಗಳ ಮತ್ತಿತರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
Minister George reviewed the condition of farmers facing hardship due to lack of rain
Leave a comment