ಮೂಡಿಗೆರೆ: ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಮೂಡಿಗೆರೆ ತಾಲ್ಲೂಕಿನ ಕುಂದೂರು ಗ್ರಾಮದ ಕಾರ್ಲಗದ್ದೆ ನಿವಾಸಿ ರವಿ (50) ಮೃತಪಟ್ಟವರು. ಈ ಸಂಬಂಧ ಅವರ ಪತ್ನಿ ನಳಿನಿ (43) ಅವರು ನೀಡಿದ ದೂರಿನ ಮೇರೆಗೆ ಬಿಳಗುಳ ಗ್ರಾಮದ ಪವನ್ ಮತ್ತು ಗೌತಮ್ ಎಂಬುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 2023ರ ಕಲಂ 103(1) ಅಡಿ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಅ.13ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ರವಿ ಅವರು ತಮ್ಮ ಮನೆಯಿಂದ ಮೂಡಿಗೆರೆಗೆ ಯುಪಿಎಸ್ ತರಲು ಬಂದಿದ್ದರು. ರಾತ್ರಿ ಆದರೂ ಮನೆಗೆ ವಾಪಸಾಗದ ಹಿನ್ನೆಲೆಯಲ್ಲಿ, ಮದ್ಯಪಾನ ಮಾಡುವ ಅಭ್ಯಾಸವಿದ್ದ ಕಾರಣ ಮನೆಗೆ ತಡವಾಗಿ ಬರಬಹುದು ಎಂದು ಕುಟುಂಬದವರು ಭಾವಿಸಿದ್ದರು.
ಆದರೆ, ಅಂದು ರಾತ್ರಿ ಸುಮಾರು 10.15ರ ವೇಳೆಗೆ ಪೊಲೀಸ್ ಠಾಣೆಯಿಂದ ನಳಿನಿ ಅವರಿಗೆ ದೂರವಾಣಿ ಕರೆ ಬಂದಿದ್ದು, ಅವರ ಪತಿ ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಬಿದ್ದಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಲಾಗಿತ್ತು.
ತಕ್ಷಣ ನಳಿನಿ ಅವರು ತಮ್ಮ ಮಗ ನಿಶಾಂತ್, ಅಕ್ಕನ ಮಗ ಸತೀಶ್ ಹಾಗೂ ಊರಿನವರೊಂದಿಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ತೆರಳಿ ವಿಚಾರಿಸಿದಾಗ, ರವಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.
ಪತಿಯ ಸಾವಿನ ಬಗ್ಗೆ ಅನುಮಾನಗೊಂಡ ನಳಿನಿ ಅವರು ಅ.14ರಂದು ಬೆಳಗ್ಗೆ ಪೊಲೀಸ್ ಸಿಬ್ಬಂದಿ ಸಚಿನ್ ಅವರೊಂದಿಗೆ ಬಸ್ ನಿಲ್ದಾಣದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ ಎನ್ನಲಾಗಿದೆ.
ದೂರಿನಲ್ಲಿ ಉಲ್ಲೇಖಿಸಿರುವಂತೆ, ಅ.13ರ ರಾತ್ರಿ ಸುಮಾರು 8.30ರ ವೇಳೆಗೆ ಇಬ್ಬರು ವ್ಯಕ್ತಿಗಳು ರವಿ ಅವರನ್ನು ತಳ್ಳಿದ ಪರಿಣಾಮ ಅವರು ಕೆಳಗೆ ಬಿದ್ದು ಮೃತಪಟ್ಟಿರುವುದು ದೃಶ್ಯಾವಳಿಯಲ್ಲಿ ಕಂಡುಬಂದಿದೆ ಎಂದು ಆರೋಪಿಸಲಾಗಿದೆ. ಬಳಿಕ ಆ ಇಬ್ಬರು ಬಿಳಗುಳ ಗ್ರಾಮದ ಪವನ್ ಮತ್ತು ಗೌತಮ್ ಎಂಬುದು ತಿಳಿದುಬಂದಿದೆ ಎಂದು ನಳಿನಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅ.14ರಂದು ತಡವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Twist in the case of a man’s death at the Mudigere bus stand
Leave a comment