ಚಿಕ್ಕಮಗಳೂರು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ತಾಲೂಕಿನ ಮಳಲೂರು ಏತನೀರಾವರಿ ಯೋಜನೆಯ ಕಾಮಗಾರಿಗಳನ್ನು ಸಮಗ್ರವಾಗಿ ಪೂರ್ಣಗೊಳಿಸಲು ಕಾವೇರಿ ನೀರಾವರಿ ನಿಗಮದಿಂದ (ಸಿಎನ್ಎನ್ಎಲ್) ರೂ.೨೧.೫ ಕೋಟಿ ವೆಚ್ಚದ ನೂತನ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದರು.
ಶುಕ್ರವಾರ ಮಳಲೂರು ಏತನೀರಾವರಿ ಯೋಜನೆಯ ನೀರಾವರಿ ಮೂಲ ಹಾಗೂ ಪೈಪ್ಲೈನ್ ಹಾದುಹೋಗುವ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಮಳಲೂರು ಏತನೀರಾವರಿ ಯೋಜನೆ ಪೂರ್ಣಗೊಳಿಸುವಂತೆ ರೈತರಿಂದ ತೀವ್ರ ಬೇಡಿಕೆ ಹಾಗೂ ಪ್ರತಿಭಟನೆಗಳು ನಡೆದಿದ್ದವು. ಈ ಕುರಿತು ಕಳೆದ ತಿಂಗಳ ೨೯ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರೊಂದಿಗೆ ಸಭೆ ನಡೆಸಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗಷ್ಟೇ ವಾಸ್ತವ ಸ್ಥಿತಿ ಮತ್ತು ತಾಂತ್ರಿಕ ತೊಡಕುಗಳು ಸ್ಪಷ್ಟವಾಗುತ್ತವೆ ಎಂಬ ಕಾರಣಕ್ಕೆ ಇಂದು ನೀರಾವರಿ ಮೂಲದಿಂದ ಆರಂಭಿಸಿ ಪೈಪ್ಲೈನ್ ಸಾಗುವ ಮಾರ್ಗದುದ್ದಕ್ಕೂ ವೀಕ್ಷಣೆ ನಡೆಸಲಾಗುತ್ತಿದೆ” ಎಂದು ಜಿಲ್ಲಾಧಿಕಾರಿ ಹೇಳಿದರು.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸಿದ್ಧಪಡಿಸಿರುವ ರೂ.೨೧.೫ ಕೋಟಿ ಮೊತ್ತದ ನೂತನ ಅಂದಾಜು ಪಟ್ಟಿ ಸಿದ್ದಪಡಿಸಲಾಗಿದೆ. ಅರ್ಧಕ್ಕೆ ನಿಂತಿರುವ ಪಂಪ್ಹೌಸ್ ನಿರ್ಮಾಣ ಮತ್ತು ಬಾಕಿ ಉಳಿದಿರುವ ಸಿವಿಲ್ ಕೆಲಸಗಳನ್ನು ಪೂರ್ಣಗೊಳಿಸುವುದು. ಪೈಪ್ಲೈನ್ ಲೋಪದೋಷ ದುರಸ್ತಿ: ಹಿಂದೆ ಅಳವಡಿಸಲಾದ ಪೈಪ್ಲೈನ್ನಲ್ಲಿ ಕಂಡುಬಂದಿರುವ ಸೋರಿಕೆ ಹಾಗೂ ಲೋಪದೋಷಗಳನ್ನು ಸರಿಪಡಿಸುವುದು. ವಿದ್ಯುತ್ ಸಂಪರ್ಕ ಕಲ್ಪಿಸಿ (ಎನರ್ಜೈಸೇಶನ್) ಪ್ರಾಯೋಗಿಕ ನೀರು ಪೂರೈಕೆ (ಟ್ರಯಲ್ ರನ್) ನಡೆಸುವುದು.
ಯೋಜನೆಗಾಗಿ ಜಮೀನು ನೀಡಿದ ರೈತರಿಗೆ ನೀಡಬೇಕಾದ ಭೂಸ್ವಾಧೀನ ಪರಿಹಾರದ ಬೇಡಿಕೆಯನ್ನು ಇತ್ಯರ್ಥಪಡಿಸುವುದು. ಉನ್ನತಾಧಿಕಾರಿಗಳಿಗೆ ವರದಿ ಸಲ್ಲಿಕೆ, ಯೋಜನೆ ಬಹಳ ಹಳೆಯದಾಗಿದ್ದು, ಇದನ್ನು ಅಲ್ಪಸ್ವಲ್ಪ ಸರಿಪಡಿಸುವ ಬದಲು ಸಮಗ್ರವಾಗಿ ಕಾರ್ಯಗತಗೊಳಿಸುವ ಅಗತ್ಯವಿದೆ. ಸಿದ್ಧಪಡಿಸಲಾದ ನೂತನ ಡಿಪಿಆರ್ ರಾಜ್ಯಮಟ್ಟದ ಉನ್ನತಾಧಿಕಾರ ಸಮಿತಿ ಅನುಮೋದನೆಗೆ ಸಲ್ಲಿಕೆಯಾಗಲಿದೆ. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ (ಒಆ) ನಮ್ಮ ಹಂತದಿಂದಲೂ ಸೂಕ್ತ ಅಭಿಪ್ರಾಯ ಮತ್ತು ಶಿಫಾರಸನ್ನು ಕಳುಹಿಸಿಕೊಡಲಾಗುವುದು” ಎಂದು ಭಂವರ್ ಸಿಂಗ್ ಮೀನಾ ಭರವಸೆ ನೀಡಿದರು.
ಕಳೆದ ಎರಡು ದಶಕಗಳಿಂದ ಈ ಭಾಗದ ರೈತರು ನೀರಾವರಿಗಾಗಿ ಹೋರಾಟ ನಡೆಸುತ್ತಿದ್ದು, ಹಂತ ಹಂತವಾಗಿ ಪರಿಶೀಲಿಸಿ ಶೀಘ್ರವೇ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು (ಂಇಇ), ಇಂಜಿನಿಯರ್ಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.
Deputy Commissioner Bhanwar Singh Meena inspects the Malaluru lift irrigation site.
Leave a comment