ಚಿಕ್ಕಮಗಳೂರು: ಚಿಕ್ಕಮಗಳೂರು, ಲಿಂಗದಹಳ್ಳಿ ಹಾಗೂ ಯಗಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಹಲವರು ಗಾಯಗೊಂಡಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರಿಗೆ ಬೈಕ್ ಡಿಕ್ಕಿ: ಅ. 6ರಂದು ರಾತ್ರಿ 10.30ರ ಸುಮಾರಿಗೆ ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ಟಿಪ್ಪು ನಗರದ ಕಡೆಗೆ ತಿರುಗುತ್ತಿದ್ದ ಅಮ್ಮಾರ್ ಖಾನ್ ಅವರ ಬೈಕ್ಗೆ ಆಲ್ಟೊ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ನಲ್ಲಿದ್ದ ಅವರ ಪತ್ನಿ ಆಯಷಾ ಅವರ ತಲೆ, ಕೈ ಹಾಗೂ ಸೊಂಟಕ್ಕೆ, ಅಮ್ಮಾರ್ ಖಾನ್ ಅವರ ಕೈಕಾಲು ಮತ್ತು ಸೊಂಟಕ್ಕೆ ಗಾಯಗಳಾಗಿವೆ. ಗಾಯಾಳುಗಳನ್ನು ಎಂಜಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಾರು ಚಾಲಕ ಅವಿನಾಶ್ ವಿರುದ್ಧ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೈಕ್ಗೆ ಬುಲೆರೋ ಡಿಕ್ಕಿ: ತರೀಕೆರೆ ತಾಲ್ಲೂಕಿನ ಉಡೇವ ಸಮೀಪ ಅ. 3ರಂದು ಮಧ್ಯಾಹ್ನ 1.45ರ ಸುಮಾರಿಗೆ ಬುಲೆರೋ ವಾಹನ ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ದೇವರಾಜ್ ಅವರ ಬೆನ್ನಿನ ಹಿಂಭಾಗಕ್ಕೆ ತೀವ್ರ ಗಾಯವಾಗಿದೆ. ಗಾಯಾಳುವಿಗೆ ಲಿಂಗದಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಬುಲೆರೋ ಚಾಲಕ ಚಂದು ಅಲಿಯಾಸ್ ಚಂದ್ರಶೇಖರ ವಿರುದ್ಧ ಲಿಂಗದಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೈಕ್ಗೆ ಏಪ್ ವಾಹನ ಡಿಕ್ಕಿ: ಕಡೂರು ತಾಲ್ಲೂಕಿನ ಯಗಟಿ ಗ್ರಾಮದ ಮುಖ್ಯರಸ್ತೆಯಲ್ಲಿ ಅ. 7ರಂದು ಮಧ್ಯಾಹ್ನ 1.30ರ ಸುಮಾರಿಗೆ ಮಂಜು (26) ಅವರು ಬೈಕ್ನಲ್ಲಿ ತೆರಳುತ್ತಿದ್ದಾಗ ಮಣ್ಣಿನ ರಸ್ತೆಯಿಂದ ಮುಖ್ಯರಸ್ತೆಗೆ ಬಂದ ಏಪ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಮಂಜು ಅವರ ತಲೆ, ಮೂಗು ಹಾಗೂ ಕಿವಿಗೆ ಗಾಯಗಳಾಗಿವೆ. ಯಗಟಿ ಮತ್ತು ಕಡೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ ವಾಹನ ಚಾಲಕ ಅಫ್ರೋಜ್ ವಿರುದ್ಧ ಯಗಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Three separate accident cases registered; several injured.
Leave a comment