ಚಿಕ್ಕಮಗಳೂರು : ನಗರಸಭೆಯ ಯುಜಿಡಿ ಹಾಗೂ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್‌ಗೆ ಸಂಬಂಧಿಸಿದ ಸುರಕ್ಷತಾ ನಿಯಮಗಳ ಕುರಿತು ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭೆ ಆಯುಕ್ತ ಬಸವರಾಜ್ ಯಾವುದೇ ಕಾರಣಕ್ಕೂ ಪೌರಕಾರ್ಮಿಕರು ಒಳಚರಂಡಿ ಮ್ಯಾನ್‌ಹೋಲ್‌ಗೆ ಇಳಿಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರಸಭೆ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಪೌರಕಾರ್ಮಿಕರು ಹಾಗೂ ಮನೆ-ಮನೆ ಕಸ ಸಂಗ್ರಹಿಸುವ ಸಿಬ್ಬಂದಿ ಕಡ್ಡಾಯವಾಗಿ ಸುರಕ್ಷತಾ ಕಿಟ್ ಬಳಸಬೇಕು. ಸುರಕ್ಷತಾ ಸಾಧನಗಳನ್ನು ನಿರ್ಲಕ್ಷಿಸಿ ಕೆಲಸ ಮಾಡುವುದರಿಂದ ಜೀವಕ್ಕೆ ಅಪಾಯ ಉಂಟಾಗಬಹುದು. ಒಂದು ದಿನದ ಕೆಲಸಕ್ಕಾಗಿ ಆರೋಗ್ಯ ಮತ್ತು ಜೀವವನ್ನು ಅಪಾಯಕ್ಕೆ ತಳ್ಳಿಕೊಳ್ಳಬಾರದು ಎಂದು ಎಚ್ಚರಿಸಿದರು.
ಯುಜಿಡಿ ನಿರ್ವಹಣೆಗೆ ಮಾನವ ಶ್ರಮದ ಬದಲು ಆಧುನಿಕ ಯಂತ್ರೋಪಕರಣ ಹಾಗೂ ರೋಬೋಟಿಕ್ ವ್ಯವಸ್ಥೆ ಬಳಸುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಮುಂದಿನ ಹಣಕಾಸು ವ್ಯವಸ್ಥೆಯಲ್ಲಿ ಅವಕಾಶ ದೊರೆತರೆ ರೋಬೋಟಿಕ್ ಯಂತ್ರ ಖರೀದಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುವುದು ಎಂದರು.
ಮನೆ-ಮನೆ ಕಸ ಸಂಗ್ರಹಣೆ ಸಮರ್ಪಕವಾಗಿ ನಡೆಯಬೇಕು. ನಗರದಲ್ಲಿ ಎಲ್ಲೆಂದರಲ್ಲಿ ಕಸ ಬೀಳದಂತೆ ಪೌರಕಾರ್ಮಿಕರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸರ್ಕಾರ ಒದಗಿಸಿರುವ ವಾಹನಗಳನ್ನು ಸಮರ್ಪಕವಾಗಿ ನಿರ್ವಹಿಸುವ ಜೊತೆಗೆ ಕರ್ತವ್ಯದಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜನರೋಬಟಿಕ್ಸ್ ಕಂಪನಿ ಕೋ ಆರ್ಡಿನೇಟರ್ ಮಾನಸಿ, ಆಕರ್ಶ್, ಪರಿಸರ ಅಭಿಯಂತರರಾದ ವೆಂಕಟೇಶ್, ಆರೋಗ್ಯ ನಿರೀಕ್ಷಕರಾದ ರಂಗಪ್ಪ, ನಾಗಪ್ಪ, ವೆಂಕಟೇಶ್, ಈಶ್ವರ್, ಪೌರಕಾರ್ಮಿಕರ ಅಧ್ಯಕ್ಷ ಅಣ್ಣಯ್ಯ ಇತರರು ಉಪಸ್ಥಿತರಿದ್ದರು.
Civic workers should not descend into sewer manholes.
Leave a comment