ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣವಾದ ದತ್ತಪೀಠದ ತಪ್ಪಲಿನ ಮಾಣಿಕ್ಯಾಧಾರ ಜಲಪಾತದ ಬಳಿ ಪ್ರವಾಸಿಗರ ಅತಿರೇಕದ ವರ್ತನೆಗೆ ಕಡಿವಾಣವೇ ಇಲ್ಲದಂತಾಗಿದೆ. ಎತ್ತರದ ಬಂಡೆಗಳ ತುದಿಯಲ್ಲಿ ನಿಂತು ಮೋಜು-ಮಸ್ತಿ ಮಾಡುತ್ತಿರುವ ಪ್ರವಾಸಿಗರ ಹುಚ್ಚಾಟವನ್ನು ನಿಯಂತ್ರಿಸಲು ಸ್ಥಳದಲ್ಲಿ ಯಾರೂ ಇಲ್ಲದಂತಾಗಿದ್ದು, ಹೇಳೋರಿಲ್ಲ ಕೇಳೋರಿಲ್ಲ ಎಂಬಂತಹ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.
ಬೀಸುವ ಬಿರುಗಾಳಿಯ ನಡುವೆ ಜಾರುವ ಬಂಡೆಗಳ ಅಂಚಿಗೆ ತೆರಳಿ ಪ್ರವಾಸಿಗರು ಸೆ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಸ್ವಲ್ಪ ಕಾಲು ಜಾರಿದರೂ ತಲೆ, ಕೈ-ಕಾಲುಗಳಿಗೆ ಗಂಭೀರ ಪೆಟ್ಟಾಗಿ ಪ್ರಾಣಕ್ಕೆ ಕುತ್ತು ಬರುವುದು ಗ್ಯಾರಂಟಿ ಎಂಬ ಅಪಾಯ ಗೊತ್ತಿದ್ದರೂ ಯುವಜನತೆ ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ.
ಈ ಹಿಂದೆ ಇದೇ ಆಯಕಟ್ಟಿನ ಪ್ರದೇಶದಲ್ಲಿ ಕೇರಳ ಮೂಲದ ಬಾಲಕಿಯ ಮೃತದೇಹವನ್ನು ಹುಡುಕಿ ತೆಗೆಯಲು ರಕ್ಷಣಾ ಪಡೆಗಳಿಗೆ ಬರೋಬ್ಬರಿ ಮೂರು ದಿನಗಳೇ ಬೇಕಾಗಿದ್ದ ದುರಂತವನ್ನು ಮರೆತು ಜನ ಮತ್ತೆ ಅದೇ ತಪ್ಪನ್ನು ಪುನರಾವರ್ತಿಸುತ್ತಿದ್ದಾರೆ.
ಇನ್ನೊಂದೆಡೆ, ಈ ಗಿರಿಶ್ರೇಣಿಗೆ ಬರುವ ಪ್ರವಾಸಿ ವಾಹನಗಳಿಂದ ಹಣ ವಸೂಲಿ ಮಾಡುವ ಪ್ರವಾಸೋದ್ಯಮ ಇಲಾಖೆ ಹಾಗೂ ಸಂಬಂಧಪಟ್ಟ ಆಡಳಿತ ವ್ಯವಸ್ಥೆ ಕನಿಷ್ಠ ಸುರಕ್ಷತೆಯನ್ನಾಗಲಿ, ಮೂಲಭೂತ ಸೌಲಭ್ಯಗಳನ್ನಾಗಲೀ ಒದಗಿಸದೆ ಸಂಪೂರ್ಣ ನಿರ್ಲಕ್ಷ ವಹಿಸಿದೆ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಹಣ ವಸೂಲಿಗೆ ತೋರುವ ಉತ್ಸಾಹವನ್ನು ಜನರ ಜೀವ ರಕ್ಷಣೆಯಲ್ಲೂ ತೋರಬೇಕಾದ ಸರ್ಕಾರ ಕೂಡಲೇ ಅಪಾಯಕಾರಿ ಜಾಗಗಳಲ್ಲಿ ಎಚ್ಚರಿಕೆ ಫಲಕ, ತಡೆಗೋಡೆ ಹಾಗೂ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಭದ್ರತೆಯನ್ನು ನಿಯೋಜಿಸಬೇಕು ಎಂದು ಸ್ಥಳೀಯರು ಮತ್ತು ಪ್ರಜ್ಞಾವಂತ ಸಾರ್ವಜನಿಕರು ಬಲವಾಗಿ ಆಗ್ರಹಿಸಿದ್ದಾರೆ.
Tourists’ reckless behavior near Manikyadhara Falls
Leave a comment