ಚಿಕ್ಕಮಗಳೂರು: ದಟ್ಟ ಅರಣ್ಯ, ಕಾಫಿ ತೋಟಗಳ ನಡುವೆ ಸಾಗುವ ಕಡಿದಾದ ತಿರುವುಗಳು, ಹೊಂಡ-ಗುಂಡಿಗಳ ರಸ್ತೆಯ ಮೇಲೆ ಹೆಡ್ಲೈಟ್ ಇಲ್ಲದ ಕೆಎಸ್ಆರ್ಟಿಸಿ ಬಸ್ನ್ನು ಬರೋಬ್ಬರಿ 60 ಕಿ.ಮೀ. ದೂರ ಸುರಕ್ಷಿತವಾಗಿ ಚಲಾಯಿಸಿ ಪ್ರಯಾಣಿಕರ ಜೀವ ಕಾಪಾಡಿದ ಚಾಲಕನ ಸಮಯಪ್ರಜ್ಞೆ ಹಾಗೂ ಚಾಲನಾ ಕೌಶಲಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಕೋಲಾರ ಡಿಪೋಗೆ ಸೇರಿದ ಕೆಎಸ್ಆರ್ಟಿಸಿ ಬಸ್ ಶೃಂಗೇರಿಯಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಚಿಕ್ಕಮಗಳೂರು-ಬಾಳೆಹೊನ್ನೂರು ಮಾರ್ಗವು ದಟ್ಟ ಅರಣ್ಯ ಹಾಗೂ ಕಾಫಿ ತೋಟಗಳ ನಡುವೆ ಹಾದುಹೋಗುವ ಜೊತೆಗೆ ಹಲವು ಅಪಾಯಕಾರಿ ತಿರುವುಗಳಿಂದ ಕೂಡಿದೆ.
ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವೇಳೆ ಬಸ್ನ ಹೆಡ್ಲೈಟ್ ಕೆಟ್ಟುಹೋಗಿದೆ. ರಾತ್ರಿ ವೇಳೆಯಾಗಿದ್ದರಿಂದ ಮುಂದಿನ ರಸ್ತೆ ಸ್ಪಷ್ಟವಾಗಿ ಕಾಣದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಚಾಲಕ ಎದೆಗುಂದದೆ ಅತ್ಯಂತ ಜಾಗರೂಕತೆಯಿಂದ ಬಸ್ ಚಲಾಯಿಸಿದ್ದಾರೆ. ಸುಮಾರು 60 ಕಿ.ಮೀ. ದೂರವನ್ನು ಕತ್ತಲಲ್ಲೇ ಕ್ರಮಿಸಿ ರಾತ್ರಿ 10.30ರ ಸುಮಾರಿಗೆ ಚಿಕ್ಕಮಗಳೂರು ಜಿಲ್ಲಾ ಕೇಂದ್ರವನ್ನು ಸುರಕ್ಷಿತವಾಗಿ ತಲುಪಿಸಿದ್ದಾರೆ.
ಚಾಲಕನ ಈ ಸಾಹಸಮಯ ಚಾಲನೆಯ ದೃಶ್ಯವನ್ನು ಬಸ್ನ ಹಿಂಬದಿಯಿಂದ ಬರುತ್ತಿದ್ದ ಬೈಕ್ ಸವಾರರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಚಾಲಕನ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹಗಲಿನ ವೇಳೆಯಲ್ಲೇ ಸಂಚರಿಸಲು ಕಷ್ಟವಾಗುವ ಹೊಂಡ-ಗುಂಡಿಗಳ ರಸ್ತೆಯಲ್ಲಿ, ಅದರಲ್ಲೂ ರಾತ್ರಿ ವೇಳೆ ಹೆಡ್ಲೈಟ್ ಇಲ್ಲದೆ ಬಸ್ ಚಲಾಯಿಸಿರುವುದು ಅಪಾಯಕಾರಿ. ಆದರೂ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಚಾಲಕ ಅತ್ಯಂತ ಎಚ್ಚರಿಕೆಯಿಂದ ಬಸ್ ಚಲಾಯಿಸಿ ಗಮ್ಯಸ್ಥಾನ ತಲುಪಿಸಿರುವುದು ಪ್ರಶಂಸೆಗೆ ಪಾತ್ರವಾಗಿದೆ.
ಇದೇ ವೇಳೆ, ಸರ್ಕಾರಿ ಬಸ್ಗಳ ನಿರ್ವಹಣೆ ಕುರಿತು ಸಾರ್ವಜನಿಕ ವಲಯದಲ್ಲಿ ಅಸಮಾಧಾನವೂ ವ್ಯಕ್ತವಾಗಿದೆ. ಬಸ್ ಮಾರ್ಗಮಧ್ಯೆ ಹೆಡ್ಲೈಟ್ ಕೆಟ್ಟಿತೇ ಅಥವಾ ಡಿಪೋದಿಂದ ಹೊರಡುವ ಮುನ್ನವೇ ದೋಷವಿದ್ದಿತೇ ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಬೇಕು. ಪ್ರಯಾಣಿಕರ ಜೀವಕ್ಕೆ ಅಪಾಯವಾಗದಂತೆ ಬಸ್ಗಳ ತಾಂತ್ರಿಕ ಸ್ಥಿತಿಯನ್ನು ಸಮರ್ಪಕವಾಗಿ ಪರಿಶೀಲಿಸಿ, ದೋಷ ಕಂಡುಬಂದರೆ ದುರಸ್ತಿ ಮಾಡಿದ ಬಳಿಕವೇ ಸಂಚಾರಕ್ಕೆ ಬಿಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
KSRTC bus plying on the road without headlights.
Leave a comment