ಶೃಂಗೇರಿ: ಸುಮಾರು 16 ವರ್ಷಗಳ ಹಿಂದೆ ಶೃಂಗೇರಿಯಲ್ಲಿ ಕಾಣೆಯಾಗಿದ್ದ ಪುತ್ರನನ್ನು ಪತ್ತೆಹಚ್ಚಿಕೊಡುವಂತೆ ಕೋರಿ ತಂದೆಯೊಬ್ಬರು ಶೃಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು ಮೂಲದ ಕೃಷ್ಣಪ್ಪ (61) ಅವರು ಅ. 9ರಂದು ರಾತ್ರಿ 8.20ಕ್ಕೆ ಠಾಣೆಗೆ ಹಾಜರಾಗಿ ಗಣಕೀಕೃತ ದೂರು ಸಲ್ಲಿಸಿದ್ದಾರೆ. ಅವರ ಪುತ್ರ ಕೆ. ಸುನೀಲ್ ಕುಮಾರ್ 2010ರ ಡಿಸೆಂಬರ್ 10ರಂದು ಶೃಂಗೇರಿಯಲ್ಲಿ ಕಾಣೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೃಷ್ಣಪ್ಪ ಅವರು ಪತ್ನಿ ದೊಡ್ಡಮ್ಮ, ಪುತ್ರರಾದ ಸುನೀಲ್ ಕುಮಾರ್ ಹಾಗೂ ಪವನ್ ಕುಮಾರ್ ಮತ್ತು ಪುತ್ರಿ ವಂದನ ಕುಮಾರಿ ಅವರೊಂದಿಗೆ 2010ರ ಡಿಸೆಂಬರ್ 10ರಂದು ರಾತ್ರಿ ಬೆಂಗಳೂರಿನಿಂದ ಕಾರಿನಲ್ಲಿ ಶೃಂಗೇರಿಯ ಶ್ರೀಮಠಕ್ಕೆ ಆಗಮಿಸಿದ್ದರು.
ರಾತ್ರಿ ಸುಮಾರು 8 ಗಂಟೆಗೆ ಶೃಂಗೇರಿಯ ಗಾಂಧಿ ಮೈದಾನದಲ್ಲಿ ಕಾರು ನಿಲ್ಲಿಸಿ, ಅಲ್ಲಿ ನಡೆಯುತ್ತಿದ್ದ ಸರ್ಕಸ್ ವೀಕ್ಷಿಸಲು ಕುಟುಂಬ ಸಮೇತ ತೆರಳಿದ್ದರು. ಬಳಿಕ ವಿಶ್ರಾಂತಿ ಪಡೆಯಲು ಕೊಠಡಿ ಹುಡುಕುವ ಉದ್ದೇಶದಿಂದ ರಾತ್ರಿ 9 ಗಂಟೆ ಸುಮಾರಿಗೆ ಶ್ರೀಮಠದ ಕಡೆಗೆ ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮೊದಲನೇ ಪುತ್ರ ಸುನೀಲ್ ಕುಮಾರ್ ಕಾಣೆಯಾಗಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಪುತ್ರ ಕಾಣೆಯಾಗಿರುವುದು ತಿಳಿದ ತಕ್ಷಣ ಕುಟುಂಬದ ಸದಸ್ಯರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಳಿಕ ಕುಟುಂಬದವರು ಬೆಂಗಳೂರಿಗೆ ಹಿಂದಿರುಗಿದ್ದರು.
ಸುನೀಲ್ ಕುಮಾರ್‌ಗೆ ಮನೆಯ ವಿಳಾಸ ಸೇರಿದಂತೆ ಕುಟುಂಬದ ವಿವರಗಳು ತಿಳಿದಿದ್ದರಿಂದ, ಆತ ಮರಳಿ ಮನೆಗೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಅಲ್ಲದೆ, ಸಂಬಂಧಿಕರ ಮನೆಗಳಲ್ಲಿಯೂ ವಿಚಾರಣೆ ನಡೆಸಿದರೂ ಪುತ್ರನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ ಎಂದು ಕೃಷ್ಣಪ್ಪ ದೂರಿನಲ್ಲಿ ತಿಳಿಸಿದ್ದಾರೆ.
ಪುತ್ರ ಕಾಣೆಯಾಗಿ ಸುಮಾರು 16 ವರ್ಷಗಳು ಕಳೆದಿದ್ದರೂ ಆತನ ಬಗ್ಗೆ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ, ಕೃಷ್ಣಪ್ಪ ಅವರು ಇದೀಗ ಶೃಂಗೇರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಸುನೀಲ್ ಕುಮಾರ್‌ನನ್ನು ಪತ್ತೆಹಚ್ಚಿಕೊಡುವಂತೆ ಮನವಿ ಮಾಡಿದ್ದಾರೆ.
ದೂರನ್ನು ಸ್ವೀಕರಿಸಿರುವ ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Father files complaint to trace son who went missing in Sringeri 16 years ago.
Leave a comment