ಕಡೂರು: ಮಳೆ ಕೈಕೊಟ್ಟು ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೆ ಕಂಗಾಲಾದ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆಗಳು ಕಡೂರು ತಾಲೂಕಿನ ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿವೆ.
ಭೈರಗೊಂಡನಹಳ್ಳಿ ಗ್ರಾಮದ ಬಸವರಾಜ (44) ಎಂಬ ರೈತರು ತಮ್ಮ 3 ಎಕರೆ 20 ಗುಂಟೆ ತೋಟ ಮತ್ತು ಜಮೀನಿನ ಅಭಿವೃದ್ಧಿಗಾಗಿ ವಿವಿಧ ಬ್ಯಾಂಕ್ ಹಾಗೂ ಸ್ತ್ರೀಶಕ್ತಿ ಸಂಘಗಳಲ್ಲಿ ಸುಮಾರು 4.80 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಈ ಬಾರಿ ಸರಿಯಾಗಿ ಮಳೆ ಬಾರದೆ ಬೆಳೆ ಕೈಕೊಟ್ಟಿದ್ದರಿಂದ ತೀವ್ರ ಮನನೊಂದಿದ್ದ ಅವರು ಅಕ್ಟೋಬರ್ 3ರಂದು ಮನೆಯಿಂದ ಹೊರಟು ನಾಪತ್ತೆಯಾಗಿದ್ದರು.
ಬಳಿಕ ಗ್ರಾಮದ ಸಮೀಪದ ಅರಣ್ಯ ಇಲಾಖೆಯ ಪ್ಲಾಂಟೇಶನ್ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಮೃತ ರೈತನ ಮಗ ಜೀವನ್ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮತ್ತೊಂದೆಡೆ, ಕೊತ್ತಿಗೆರೆ ಗ್ರಾಮದ ಶಂಕರಯ್ಯ (60) ಎಂಬ ಅನ್ನದಾತರು ತಮ್ಮ 3 ಎಕರೆ ಜಮೀನಿನ ಕೃಷಿ ಕೆಲಸಕ್ಕಾಗಿ ಖಾಸಗಿ ಫೈನಾನ್ಸ್ ಮೂಲಕ ಸುಮಾರು 4.01 ಲಕ್ಷ ರೂಪಾಯಿ ಸಾಲ ಪಡೆದು ಟ್ರಾಕ್ಟರ್ ಖರೀದಿಸಿದ್ದರು. ಎರಡು ಕಂತುಗಳನ್ನು ಪಾವತಿಸಿದ ಬಳಿಕ ಮಳೆ ಬಾರದೆ ಬೆಳೆ ನಷ್ಟ ಉಂಟಾಗಿದ್ದರಿಂದ ಬಾಕಿ ಸಾಲ ತೀರಿಸಲು ದಾರಿಕಾಣದೆ ತೀವು ಆತಂಕಕ್ಕೊಳಗಾಗಿದ್ದರು.
ಸಾಲದ ಚಿಂತೆಯಿಂದಲೇ ಅಕ್ಟೋಬರ್ 5ರ ರಾತ್ರಿ ತೋಟದ ಮನೆಯ ಶೆಡ್‌ನಲ್ಲಿ ವಿಷ ಸೇವಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಕಡೂರು ಹಾಗೂ ಚಿಕ್ಕಮಗಳೂರು ಮಲ್ಲೇಗೌಡ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 6ರ ಸಂಜೆ ಕೊನೆಯುಸಿರೆಳೆದಿದ್ದಾರೆ ಎಂದು ಮೃತ ರೈತನ ಪುತ್ರ ಸತೀಶ್ ದೂರು ನೀಡಿದ್ದಾರೆ.
ಈ ಎರಡೂ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಗಟಿ ಠಾಣೆ ಪೊಲೀಸರು ಅಸಹಜ ಸಾವು (ಯುಡಿಆರ್) ಪ್ರಕರಣಗಳನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Two farmers distressed over their inability to repay loans commit suicide.
Leave a comment