ತರೀಕೆರೆ: ಆಸ್ಟ್ರೇಲಿಯಾದಲ್ಲಿ ವಾಸವಿದ್ದಾಗ ಹೆಚ್ಚುವರಿ ವರದಕ್ಷಿಣೆಗಾಗಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ, ತನ್ನ ಸಂಬಳವನ್ನೂ ಬಲವಂತವಾಗಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ತರೀಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಜ್ಜಂಪುರ ತಾಲ್ಲೂಕಿನ ಹೆಬ್ಬೂರು ಗ್ರಾಮದ ಅಭಿಷೇಕ್ ಎಚ್.ಪಿ. ಅವರನ್ನು ವಿವಾಹವಾಗಿದ್ದ ಮಹಿಳೆ, ಪತಿ ಅಭಿಷೇಕ್, ಮಾವ ಪುಟ್ಟರುದ್ರಪ್ಪ, ಅತ್ತೆ ಪಂಕಜ ಹಾಗೂ ಮೈದುನ ವಿಕ್ರಮ್ ವಿರುದ್ಧ ಕೌಟುಂಬಿಕ ದೌರ್ಜನ್ಯ, ಕ್ರೌರ್ಯ ಮತ್ತು ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ.
ದೂರಿನ ಪ್ರಕಾರ, 2025ರ ಏಪ್ರಿಲ್ನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ನಡೆದಿದ್ದು, ಮದುವೆಗೆ ಸುಮಾರು ₹75 ಲಕ್ಷ ಖರ್ಚು ಮಾಡಲಾಗಿತ್ತು. ಮದುವೆಯ ನಂತರ ಆಸ್ಟ್ರೇಲಿಯಾಕ್ಕೆ ತೆರಳಿದ ಬಳಿಕ ಪತಿ ಹೆಚ್ಚುವರಿ ಹಣ ತರುವಂತೆ ಒತ್ತಡ ಹೇರುತ್ತಿದ್ದರು. ಮಹಿಳೆಯ ಸಂಬಳವನ್ನು ಬಲವಂತವಾಗಿ ಪಡೆದುಕೊಳ್ಳುವುದರ ಜತೆಗೆ ಹಲವು ಬಾರಿ ಹಲ್ಲೆ ನಡೆಸಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆಯ ತಂದೆ ವಿವಿಧ ದಿನಗಳಲ್ಲಿ ಹಣ ವರ್ಗಾಯಿಸಿದ್ದರೂ, ಮತ್ತೆ ಹಣಕ್ಕಾಗಿ ಕಿರುಕುಳ ಮುಂದುವರಿದಿತ್ತು. ಪತಿ ದಾಂಪತ್ಯ ಜೀವನದಲ್ಲಿ ನಿರ್ಲಕ್ಷ್ಯ ತೋರಿದ್ದಲ್ಲದೆ, ಭಾರತಕ್ಕೆ ಕರೆತಂದು ತವರು ಮನೆಯಲ್ಲಿ ಬಿಟ್ಟು ಹೋಗಿದ್ದಾರೆ. ಬಳಿಕ ಸಂಬಂಧ ಮುಂದುವರಿಸಲು ಇಷ್ಟವಿಲ್ಲವೆಂದು ತಿಳಿಸಿ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಸಂಬಂಧ ಅ.13ರಂದು ತರೀಕೆರೆ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಲಾಗಿದೆ. ಪ್ರಕರಣದ ಮುಂದಿನ ಪೊಲೀಸ್ ಕ್ರಮ ಹಾಗೂ ತನಿಖೆಯ ವಿವರಗಳು ಲಭ್ಯವಾಗಿಲ್ಲ.
Allegations of dowry harassment in Australia
Leave a comment