ಚಿಕ್ಕಮಗಳೂರು: ನಗರ ಪ್ರದೇಶದಲ್ಲಿ ಅಂಗನವಾಡಿಗೆ ದಾಖಲಾಗದಿರುವ ಮಕ್ಕಳನ್ನು ಮರು ಸಮೀಕ್ಷೆ ನಡೆಸಿ ದಾಖಲಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸೋಮವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ಪ್ರದೇಶದಲ್ಲಿ ಪ್ರತಿ ಮನೆಗಳಿಗೂ ತೆರಳಿ ಸಮೀಕ್ಷೆ ನಡೆಸಿ ಅಂಗನವಾಡಿಗೆ ದಾಖಲಾಗದಿರುವ ಮಕ್ಕಳನ್ನು ಗುರುತಿಸಿ ದಾಖಲಿಸಬೇಕು, ಗ್ರಾಮಾಂತರ ಪ್ರದೇಶಗಳಲ್ಲಿ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರುತ್ತದೆ ಆದರೆ ನಗರ ಪ್ರದೇಶಗಳ ಅಂಗನವಾಡಿಗಳಲ್ಲಿ ಮಕ್ಕಳ ಪ್ರವೇಶಾತಿ ಕಡಿಮೆ ಇದ್ದು ಪ್ರತಿ ಮನೆಗೂ ತೆರಳಿ ಅಂಗನವಾಡಿಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ ದಾಖಲಿಸುವಂತೆ ಹೇಳಿದರು.
ಅಂಗನವಾಡಿಗಳಲ್ಲಿ ಮಕ್ಕಳಿಗೆ, ಗರ್ಭಿಣಿಯರು, ಬಾಣಂತಿಯರಿಗೆ ಪೂರೈಸುವ ಪೌಷ್ಠಿಕ ಆಹಾರ ಗುಣಪಟ್ಟದಿಂದ ಕೂಡಿರಬೇಕು. ಕಳಪೆ ಗುಣಪಟ್ಟದಿಂದ ಕೂಡಿರುವ ಆಹಾರವನ್ನು ಪೂರೈಸಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದ ಅವರು ತೀವ್ರ ಅಪೌಷ್ಠಿಕ ಮತ್ತು ಸಾಧಾರಣ ಅಪೌಷ್ಠಿಕ ಮಕ್ಕಳನ್ನು ಗುರುತಿಸಿ ಈ ಮಕ್ಕಳನ್ನು ಮುಂದಿನ ತ್ರೈ ಮಾಸಿಕದೊಳಗೆ ಪೌಷ್ಠಿಕ ಪುನರ್ವಸತಿ ಕೇಂದ್ರಗಳಿಗೆ ದಾಖಲಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ ಸಭೆಗೆ ಮಾಹಿತಿ ನೀಡಿ, ಸೆಪ್ಟೆಂಬರ್ ೨೦೨೬ರ ಮಾಹೆಯಲ್ಲಿ ಪೋಷಣ್ ಮಾಸಾಚರಣೆ ಅಡಿಯಲ್ಲಿ ಜಿಲ್ಲೆಯಾದ್ಯಂತ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ವಲಯ ವ್ಯಾಪ್ತಿಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಪೌಷ್ಠಿಕ ಆಹಾರದ ಸೇವನೆ, ಜೀವನ ಶೈಲಿಯ ಸುಧಾರಣೆ ಮತ್ತು ಆರೋಗ್ಯದ ಕುರಿತು ಅರಿವು ಮೂಡಿಸಲಾಗಿದೆ ಎಂದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಕಾನೂನು ಜಾಗೃತಿ ಮೂಡಿಸಬೇಕು, ಕಾನೂನು ಬಾಹಿರವಾಗಿ ವಿವಾಹ ವಯಸ್ಸಿಗೂ ಮುನ್ನ ಮದುವೆ ಮಡುವುದು ಅಪರಾಧ ವಾಗುತ್ತದೆ ಬಾಲ್ಯದಲ್ಲೇ ಮದುವೆ ಮಾಡುವುದರಿಂದ ಮಕ್ಕಳ ಭವಿಷ್ಯ ಹಾಗೂ ಕುಟುಂಬದ ಗೌರವಕ್ಕೂ ಧಕ್ಕೆಯಾಗುತ್ತದೆ ಎಂದು ಅರಿವು ಮೂಡಿಸುವಂತೆ ಹೇಳಿದ ಅವರು ಪೋಕ್ಸೊ ಕಾಯ್ದೆ ಕುರಿತು ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು
ಬಾಲ್ಯ ವಿವಾಹ ಅಪರಾಧ, ಬಾಲ್ಯ ವಿವಾಹ ನಿಲ್ಲಿಸಿ ಕುರಿತ ಪೋಸ್ಟರ್ನ್ನು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳಾದ ಪೂರ್ಣಿಮಾ, ಸುಜಾತ, ಮುಖ್ಯ ಯೋಜನಾಧಿಕಾರಿ ರಾಜಗೋಪಾಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್ ಸೇರಿದಂತೆ ವಿವಿಧ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಜರಿದ್ದರು
Directive issued for a re-survey of children not enrolled in Anganwadis.
Leave a comment