ಕಡೂರು: ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿ ಆವರಣದಲ್ಲಿ ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ರೈತ ಸ್ವಾಭಿಮಾನ ಸಮಾವೇಶದಲ್ಲಿ ಯಾವುದೇ ಶಾಶ್ವತ ನೀರಾವರಿ ಯೋಜನೆ ಬಗ್ಗೆ ಆಗಲಿ, ಬರಗಾಲದಿಂದ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಆಗಲಿ, ರೈತರ ಆರ್ಥಿಕ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸದೆ ಶಾಸಕರನ್ನು ಬೈಯುವ ಸಲುವಾಗಿ ಸಭೆಯನ್ನು ನಡೆಸಿದ್ದು ಹಾಸ್ಯಾಸ್ಪದ ಸಭೆಯಾಗಿದೆ. ರೈತ ಸಮಾವೇಶದ ಅರ್ಥವೇ ಗೊತ್ತಿಲ್ಲದ ನಿಖಿಲ್ ಕುಮಾರಸ್ವಾಮಿ ರಾಜಕಾರಣದಲ್ಲಿ ಕಣ್ಣು ಬಿಡುತ್ತಿರುವ ವ್ಯಕ್ತಿ ಎಂದು ಕ್ಷೇತ್ರ ಶಾಸಕ ಕೆ.ಎಸ್.ಆನಂದ್ ಹೇಳಿದರು.
ಮಂಗಳವಾರ ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶಾಸಕರನ್ನು ಬೈಯುವುದರಿಂದ ತಕ್ಷಣಕ್ಕೆ ಏನು ಆಗುವುದಿಲ್ಲ, ರೈತರಿಗೆ ಬದುಕನ್ನು ಕಟ್ಟಿಕೊಡುವ ಕಾರ್ಯ ಆಗಬೇಕು ಕುರುಬರೆದುರು ಕುರುಬರನ್ನೆ ಎತ್ತಿ ಕಟ್ಟುವ ಕಾರ್ಯವನ್ನು ನಿಖಿಲ್ ಅವರ ಅಜ್ಜ ನಿರಂತರವಾಗಿ ಮಾಡುವುದೇ ಚಾಳಿಯಾಗಿದೆ, ಜೆಡಿಎಸ್ ಮುಖಂಡರ ಬಗ್ಗೆ ಕ್ಷೇತ್ರದ ಜನತೆಗೆ ತಿಳಿದಿದೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ತಾವು ಏನು ಮಾಡಿದ್ದೇವೆ ಎಂಬುದು ಎಲ್ಲರಿಗೂ ತಿಳಿದಿದೆ. ಕೇಂದ್ರ ಸರ್ಕಾರದಿಂದ ಬರಬೇಕಿರುವ 15 ಮತ್ತು 16ನೇ ಹಣಕಾಸಿನ ಹಣ ಬಂದಿರುವುದಿಲ್ಲ, ರಾಜ್ಯಕ್ಕೆ ನೀಡಬೇಕಿರುವ ತೆರಿಗೆ ಹಣವನ್ನು ನೀಡುತ್ತಿಲ್ಲ, ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರುಗಳ ಅಧಿಕಾರ ಅವಧಿಯಲ್ಲಿ ಕೇಂದ್ರದಿಂದ ಯಾವುದೇ ಹಣ ಬಂದಿರುವುದಿಲ್ಲ ಎಂದರು.
ಕೇಂದ್ರ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿತ್ತು, 2023ರ ಕೇಂದ್ರ ಬಜೆಟ್ ನಲ್ಲಿ 5300 ಕೋಟಿ ರೂ ನೀಡುತ್ತೇವೆ ಎಂದು ಹೇಳಿದ ಹಣ ಎಲ್ಲಿಗೆ ಹೋಗಿದೆ, ದೇವೇಗೌಡ್ರು ಸಂಸದರಾಗಿ ಯಾವುದೇ ಶಾಶ್ವತ ನೀರಾವರಿ ಬಗ್ಗೆ ಮಾತನಾಡಲಿಲ್ಲ, ಹೆಬ್ಬೆ ಯೋಜನೆ ಆಗಬೇಕಿತ್ತು ಆದರೆ ಹತ್ತು ವರ್ಷ ದೇವೇಗೌಡರು ಐದು ವರ್ಷ ಪ್ರಜ್ವಲ್ ರೇವಣ್ಣ ಸಂಸದರಾಗಿ ಕಡೂರಿಗೆ ಇವರ ಕೊಡುಗೆಯಾದರೂ ಏನು? ಕಳೆದ ಮೂರು ವರ್ಷದ ಅಧಿಕಾರಾವಧಿಯನ್ನು ಟೀಕಿಸುತ್ತಾರೆ 15 ವರ್ಷ ಸಂಸದರಾಗಿ ಗುರುತಿಸುವಂತಹ ಕಾರ್ಯ ಯಾವುದು ಇಲ್ಲ. ಎಮ್ಮೆ ದೊಡ್ಡಿ ಪ್ರದೇಶದ ಬಗ್ಗೆ ಸದನದಲ್ಲಿ ಮಾತನಾಡಿದ ಫಲವಾಗಿ ಕಂದಾಯ ಗ್ರಾಮ ಘೋಷಣೆಯ ಹಂತದಲ್ಲಿದೆ. ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದರ ಫಲವಾಗಿ ಒಂದು ಹಂತಕ್ಕೆ ತಲುಪಿದೆ. ಬೋಜೇಗೌಡರ ತಂದೆ ಅವರ ಅಣ್ಣ ಶಾಸಕರಾಗಿದ್ದಾಗ ಎಮ್ಮೆ ದೊಡ್ಡಿ ಪ್ರದೇಶಕ್ಕೆ ಇವರುಗಳ ಕೊಡುಗೆ ಏನು. ಕಡೂರು ಜೆಡಿಎಸ್ ಅಧ್ಯಕ್ಷನ ಕೊಡುಗೆ ಏನಿದೆ ಎಂದರು.
ಎಮ್ಮೆದೊಡ್ಡಿ ಭಾಗದ ಜಮೀನುಗಳ ದುರಸ್ತಿಗೆ ಪ್ರಯತ್ನ ಮಾಡಿರುವುದು ಆನಂದ್ ಮಾತ್ರ. ಹಿಂದಿನ ಯಾವುದೇ ಶಾಸಕರುಗಳು ಪ್ರಯತ್ನವನ್ನೇ ನಡೆಸಿಲ್ಲ, ವಿಧಾನಸಭೆಯ ಅರ್ಜಿ ಸಮಿತಿ ಸಭೆ ಮಾಡಿ ಎಮ್ಮೆ ದೊಡ್ಡಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಲಾಗಿದೆ. ಜೆಡಿಎಸ್ ಅಧ್ಯಕ್ಷರ ಕುಟುಂಬದವರು ಅಧಿಕಾರದಲ್ಲಿದ್ದಾಗ ಏನು ಮಾಡಿದರು ಎಂಬುದರ ಬಗ್ಗೆ ತಿಳಿಯಬೇಕಿದೆ. ರೈತರ ಸಮಾವೇಶದಲ್ಲಿ ರೈತರ ಬಗ್ಗೆ ಏನನ್ನು ಮಾತನಾಡದೆ ಶಾಸಕರನ್ನು ನಿಂದಿಸುವುದಕ್ಕೆ ಸೀಮಿತವಾಗಿದ್ದು ಇದೊಂದು ರೈತರ ಹೆಸರಿನಲ್ಲಿ ಭೋಗ ಸಮಾವೇಶ ಎಂಬಂತಾಗಿದೆ. ನನ್ನ ಅಧಿಕಾರ ಅವಧಿಯಲ್ಲಿ ಜನರ ಪರವಾಗಿ ಕೆಲಸ ಮಾಡಿದ್ದೇನೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಒಂದಾದರೆ ಟಿಕೆಟ್ ಸಿಗುವುದು ಯಾರಿಗೆ ಎಂಬುದು ತಿಳಿದಿಲ್ಲ. ಶಾಸಕರನ್ನು ಬೈಯುದರಿಂದ ತನಗೆ ಟಿಕೆಟು ದೊರಕಲಿದೆ ಎಂಬ ಭ್ರಮೆಯಲ್ಲಿದ್ದಾರೆ ಕಡೂರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯಾವುದೇ ಮಾಜಿ ಶಾಸಕರು ಬಹಿರಂಗ ಚರ್ಚೆಗೆ ಬರಲಿ ನಾವು ಸಿದ್ಧರಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವಸಂತ್ ಕುಮಾರ್ ಮಲೆಶ್ವರ, ರವಿ ಹಿರೆ ಗರ್ಜೆ, ಮಂಜು ಮಚೇರಿ, ಶಿವೇಗೌಡ, ರಾಜ ನಾಯಕ್ ಸೇವಾಪುರ ಮತ್ತಿತರರು ಇದ್ದರು.
Nikhil Kumaraswamy is someone who is just beginning to find his footing in politics.
Leave a comment